“ಆವರಗೆರೆ ವಸತಿ, ನಿವೇಶನ ರಹಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್ ವಾದ)(ದಸಂಸ)ದಾವಣಗೆರೆ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ” ಎಂದು ಸಂಚಾಲಕ ಎಚ್ ಮಲ್ಲೇಶ್ ತಿಳಿಸಿದರು.
ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ. ಅಂಬೇಡ್ಕಾರ್ ವಾದ ದಾವಣಗೆರೆ ಜಿಲ್ಲಾ ಸಮಿತಿ ಮತ್ತು ತಾಲ್ಲೂಕು ಸಮಿತಿ ಅಡಿಯಲ್ಲಿ 2025, ಅಕ್ಟೋಬರ್ 9ರಂದು ಆವರಗೆರೆ ವಸತಿ, ನಿವೇಶನ ರಹಿತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಉಪವಿಭಾಗಾಧಿಕಾರಿ ಕಛೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು. ನಂತರ ಉಪ ವಿಭಾಗಾಧಿಕಾರಿಗಳಿಗೆ ಕೂಡಲೇ ವಸತಿ ಸೌಕರ್ಯ ಕಲ್ಪಿಸಲು ಮನವಿ ಪತ್ರ ಸಲ್ಲಿಸಲಾಗುವುದು” ಎಂದು ತಿಳಿಸಿದರು.
“ದಾವಣಗೆರೆ ಮಹಾನಗರ ಪಾಲಿಕೆಯ ದನವಿನ ಓಣಿ ಹತ್ತಿರ ಗೋಮಾಳದಲ್ಲಿ ಕಳೆದ 2022ರಲ್ಲಿ
ನೂರಾರು ಸಂಖ್ಯೆಯ ವಸತಿ ನಿವೇಶನ ರಹಿತರು ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದರು. ದಾವಣಗೆರೆ ಜಿಲ್ಲಾಡಳಿತದ ಮೌಖಿಕ ನಿರ್ದೇಶನದಂತೆ ರಾತ್ರಿಯ ಬೆಳಗಿನ ಜಾವದ 2:00 ಗಂಟೆ ಸಮಯದಲ್ಲಿ ನಿವಾಸಿಗಳಿಗೆ ಯಾವುದೇ ಮಾಹಿತಿ ಸೂಚನೆ ನೀಡದೇ ಏಕಾಏಕಿ ಮಹಾನಗರ ಪಾಲಿಕೆ ಮತ್ತು ತಾಲ್ಲೂಕು ತಹಶೀಲ್ದಾರರು ಪೊಲೀಸ್ ಬಲದೊಂದಿಗೆ ಜೆ.ಸಿ.ಬಿ. ಯಂತ್ರಗಳ ಸಹಾಯದಿಂದ ವಸತಿ ಗುಡಿಸಲು ಧ್ವಂಸ ಕಾರ್ಯಚರಣೆ ನಡೆಸಿ ಅಮಾಯಕ ಕುಟುಂಬಗಳನ್ನು ಬೀದಿ ಪಾಲುಮಾಡಿ ದೌರ್ಜನ್ಯ ಮೆರೆದಿದ್ದರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಂತಹ ಆಕಸ್ಮಿಕ ಘಟನೆಯಿಂದ ವಿಚಲಿತಗೊಂಡ ನಿವಾಸಿಗಳ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು ಎಂದು ಆರೋಪಿಸಿ ಬಂಧನಕ್ಕೆ ಒಳಪಡಿಸಿದ್ದರು. ಇಂತಹ ಅಕ್ರಮ, ದೌರ್ಜನ್ಯದಿಂದ ಕುಟುಂಬಗಳು ಅಲ್ಲಲ್ಲಿ ಅನುಕೂಲ ಸ್ಥಳದಲ್ಲಿ ವಾಸವಾಗಿದ್ದ ಆವರಗೆರೆ ದನವಿನ ಓಣಿಯಲ್ಲಿ ನಿವಾಸಿಗಳನ್ನು ಪುನಃ ಒಕ್ಕಲೆಬ್ಬಿಸುವ ಹುನ್ನಾರ ಮುಂದುವರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಈ ವೇಳೆ ತಾಲ್ಲೂಕು ಸಂಚಾಲಕರು, ಜಿಲ್ಲಾ ಸಂಘಟನಾ ಸಂಚಾಲಕರು, ತಾಲ್ಲೂಕು ಸಂಘಟನಾ ಸಂಚಾಲಕರು ಸೇರಿದಂತೆ ಕಾರ್ಯಕರ್ತರು ಹಾಜರಿರುವರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಹರ್ಷಿ ವಾಲ್ಮೀಕಿ ಜಯಂತೋತ್ಸವ: ಐತಿಹಾಸಿಕ ಬೈಕ್ ರ‍್ಯಾಲಿ
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಸಂಚಾಲಕ ಆವರಗೆರೆ
ಚಂದ್ರಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಜಿ.ಎಸ್. ಲೋಕೇಶ ಹಾಲೇಕಲ್ಲು, ಮುಖಂಡರಾದ ಸಮಾದಪ್ಪ, ಎಲ್. ಶಿವು, ಯು ಮಹಾಂತೇಶ, ಚನ್ನಬಸಪ್ಪ, ಶಿವಾನಂದ, ಗಿರೀಶ ಆರ್, ತಾಲ್ಲೂಕು ಸಂಘಟನಾ ಸಂಚಾಲಕರಾದ ಎಸ್. ಶಿವು, ಪ್ರವೀಣ ಎಸ್. ಉಪಸ್ಥಿತರಿದ್ದರು.