ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಶಯಗಳನ್ನು ಹೊತ್ತುಕೊಂಡು ರಾಜ್ಯದ ಮಠಾಧೀಶರು, ಒಕ್ಕೂಟದ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸುತ್ತಿ ಬೆಂಗಳೂರಿನಲ್ಲಿ ಅ.5ರಂದು ಸಮಾವೇಶಗೊಳ್ಳಲಿದ್ದಾರೆ. ಬಸವ ಸಂಸ್ಕೃತಿ ಅಭಿಯಾನʼವು ನಿಜಕ್ಕೂ ಐತಿಹಾಸಿಕ ಕಾರ್ಯಕ್ರಮವೇ ಹೌದು.
ಈ ಅಭಿಯಾನಕ್ಕೆ ಮೂಲ ಪ್ರೇರಣೆ ಸಾಣೆಹಳ್ಳಿಯ ಪೂಜ್ಯ ಪಂಡಿತಾರಾಧ್ಯ ಸ್ವಾಮೀಜಿಗಳೆಂಬುದು ನಿರ್ವಿವಾದ. ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲಕ ಇಡೀ ನಾಡನ್ನು ಸಾಣೆಹಳ್ಳಿಯ ಗುರುಗಳು ಸುತ್ತಿ ಬಂದಿದ್ದರು. ಆಗ ರಾಜ್ಯದಾದ್ಯಂತ ಇದ್ದ ಬಸವ ಪ್ರೇಮಿಗಳು ಮತ್ತೆ ಕಲ್ಯಾಣವನ್ನು ಯಶಸ್ವಿಗೊಳಿಸಿದ್ದರು. ಈಗಲೂ ಸಹ ಅದೇ ಆಗಿದೆ. ಮಠಾಧೀಶರ ಒಕ್ಕೂಟಕ್ಕಿಂತ ಮುಖ್ಯವಾಗಿ ಆಯಾ ಜಿಲ್ಲೆಯ ಬಸವ ಭಕ್ತರು ತಮ್ಮದೇ ಕಾರ್ಯಕ್ರಮ ಎಂಬಂತೆ ಇದರಲ್ಲಿ ಪಾಲ್ಗೊಂಡಿದ್ದಾರೆ.
ಜನ ಸಾಮಾನ್ಯ ಯಾವಾಗ ಚಳುವಳಿಯ, ವಿಚಾರದ ಭಾಗವಾಗುತ್ತಾನೊ ಆಗ ಸಹಜವಾಗಿ ಅದು ಯಶಸ್ವಿಯಾಗುತ್ತದೆ. ಬಸವ ಸಂಸ್ಕೃತಿ ಇಂದು ಲಿಂಗಾಯತರಿಗೆ ಅನಿವಾರ್ಯ ಸರಕಾಗಿದೆ. ಇದುವರೆಗೆ ಲಿಂಗಾಯತ ಪದಕ್ಕೆ ಅಂಟಿಕೊಂಡವರು ಯಾರು ಎಂದು ಲಿಂಗಾಯತರಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ.
ಶತ ಶತಮಾನಗಳಿಂದ ಲಿಂಗಾಯತರನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದ ಡೋಂಗಿ ಮಠಾಧೀಶರು ಈಗ ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ನಾವು ಹೇಳಿದಂತೆ ಕೇಳುವ ಮೂಢ ಭಕ್ತರೆಂದು ತಿಳಿದುಕೊಂಡಿದ್ದವರಿಗೆ ಅಘಾತವಾಗಿದೆ. ಆದ್ದರಿಂದಲೇ ಅವರು ಒಂದೇ ಸಮ ಮಠಾಧೀಶರ ಒಕ್ಕೂಟದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಬಸವವಾದಿಗಳನ್ನು ಕಮ್ಯುನಿಸ್ಟರು, ಎಡಚರು ಎಂದು ಅರಚಾಡುತ್ತಿದ್ದಾರೆ. ಬಸವ ಸಂಸ್ಕೃತಿ ಯಾತ್ರೆಯ ಹಿಂದೆ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಇದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಡಾ.ಎಸ್.ಎಂ.ಜಾಮದಾರ ಇಷ್ಟಲಿಂಗ ಕಟ್ಟಿಲ್ಲ, ಪೂಜೆ ಮಾಡೋಲ್ಲ. ನಿವೃತ್ತ ಅಧಿಕಾರಿಗೆ ಏನು ಗೊತ್ತು? ಧರ್ಮದ ವಿಚಾರ? ಎಂದು ಅಬ್ಬರಿಸಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಕೈಯೊಳಗಿದ್ದ ಮತಗಳು ಜಾರಿ ಹೋದವಲ್ಲ! ಎಂದು ಕೈ ಕೈ ಹಿಸುಕಿಕೊಂಡು ಅಶ್ಲೀಲವಾಗಿ ಬಸವಣ್ಣನವರ ಬಗೆಗೂ ಮಾತನಾಡಿದ್ದಾರೆ. ಬಸವಣ್ಣನವರಿಗಿಂತ ಪೂರ್ವದಲ್ಲಿ ವೀರಶೈವ-ಲಿಂಗಾಯತ ಇತ್ತು ಎಂದು ಮಾಧ್ಯಮವೊಂದರಲ್ಲಿ ಸ್ವಾಮೀಜಿಯೊಬ್ಬರು ಬಡಬಡಿಸಿದ್ದಾರೆ.
ಯಾರೇನೆ ಹೇಳಿದರೂ ಬಸವ ತತ್ವ ಜನರ ಮನಸ್ಸಿನ ಆಳಕ್ಕೆ ಇಳಿದಿದೆ. ಡಾ.ಕಲಬುರ್ಗಿಯವರ ಸಂಶೋಧನೆ, ಲಿಂಗಣ್ಣ ಸತ್ಯಂಪೇಟೆ ಅವರ ಬಸವಮಾರ್ಗ ಪತ್ರಿಕೆ, ಡಾ.ಬಸವಲಿಂಗ ಪಟ್ಟದ್ದೇವರ ಪರಿಶ್ರಮ, ನಿಜಗುಣಾನಂದ ಸ್ವಾಮೀಜಿ ಓತ ಪ್ರೋತ ಪ್ರವಚನ, ಈಶ್ವರ ಮಂಟೂರ ಅವರ ಮಾತೃತ್ವ, ಪಂಡಿತಾರಾಧ್ಯ ಶಿವಾಚಾರ್ಯರ ಬರವಣಿಗೆ ಹಾಗೂ ಬಸವ ತತ್ವದ ಅನುಷ್ಠಾನ ಕಾಳಜಿಗಳು, ಚಿತ್ರದುರ್ಗದ ಮುರುಘಾ ಶರಣರ ಮೌಢ್ಯ ಮುಕ್ತ ಕರ್ನಾಟಕದ ಹಂಬಲಗಳು, ಇಳಕಲ್ ಶ್ರೀಗಳ ನಿಪ್ಪೃಹ ದುಡಿಮೆ, ಗದುಗಿನ ಶ್ರೀಗಳ ಕಂಚಿನ ಕಂಠದ ಧೀರತನ, ಸಾವಿರಾರು ಜನ ರಾಷ್ಟ್ರೀಯ ಬಸವ ದಳದ ಕಾರ್ಯಕರ್ತರು, ಇವರೆಲ್ಲರನ್ನು ಕಾಪಿಟ್ಟು ಕಾಯ್ದುಕೊಂಡು ಬಂದ ಮಾತಾಜಿ, ಲಿಂಗಾನಂದ ಅಪ್ಪಗಳನ್ನು ಮರೆಯಲುಂಟೆ?

ಡಾ.ಅಕ್ಕ ಇವರೀರ್ವದ ಗರಡಿಯಲ್ಲಿ ಬೆಳೆದ ಹೂಗಳ ಪರಿಮಳವಂತೂ ನಾಡಿನ ಎಲ್ಲೆಡೆ ಹಬ್ಬಿದೆ. ತಮ್ಮಷ್ಟಕ್ಕೆ ತಾವುದ್ದು, ಬಸವ ಪರಿಮಳ ಹಬ್ಬಿಸುವಲ್ಲಿ ಬಸವ ಸಮಿತಿಯ ಪಾತ್ರವೂ ಗಮನಾರ್ಹ. ಅಕ್ಕ ಅನ್ನಪೂರ್ಣ ತಾಯಿಯನ್ನು ಮರೆಯಲುಂಟೆ? ನೂರಾರು ಜನ ವಾಗ್ಮಿಗಳು, ಹಿರಿಯರು ಬಸವ ತತ್ವದ ಪರಿಚಯ ಮಾಡಿಸಲು ಕಾಲಿಗೆ ಚಕ್ರಕಟ್ಟಿಕೊಂಡು ತಿರುಗಿದ್ದಾರೆ. ಲಕ್ಷಾಂತರ ಪುಸ್ತಕ ಪ್ರಕಟವಾಗಿವೆ.
ಅಕ್ಟೋಬರ್ 5 ರಂದು ನಡೆಯುವ ಸಮಾವೇಶ ಈ ಎಲ್ಲವನ್ನೂ ಪರಿಗಣಿಸಬೇಕು. ಬಸವ ತತ್ವ, ಧರ್ಮ ಇದು ಜನ ಸಾಮಾನ್ಯನ ಧರ್ಮ. ಮಠಾಧೀಶರ ಧರ್ಮವಲ್ಲ. ಈಗ ನಮ್ಮೊಂದಿಗೆ ಇರುವ ಬಸವ ಪರ ಮಠಾಧೀಶರು ಸಹ ಆ ಹಮ್ಮುಬಿಮ್ಮುಗಳನ್ನು ಅಳಿದ ಮಠಾಧೀಶರು ಎಂಬ ಭಾವ ಜನರಿಗೆ ಇದೆ. ಯಾವ ಜಾತಿಯೂ ಶ್ರೇಷ್ಠ ಕನಿಷ್ಠ ಅಲ್ಲ. ಮಾನವೀಯ ತುಡಿತ ಮುಖ್ಯ ಎಂಬುದನ್ನು ಸಂಘಟಕರು ಅರಿತುಕೊಳ್ಳಬೇಕು. ಮುಖ್ಯಮಂತ್ರಿಗಳು ಭಾಗವಹಿಸುವ ಈ ಸಮಾರಂಭ ಕನ್ನಡ ನಾಡಿನ ಸಂಭ್ರಮದಂತೆ ಕಾಣಿಸಬೇಕು.
ಇದನ್ನೂ ಓದಿ : ಕಲ್ಯಾಣದಲ್ಲಿ ನೆರೆ | ಪರಿಹಾರದ ವಿವರ ನೀಡುವಂತೆ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಗಡುವು
ಇದೆಲ್ಲ ನಿರ್ಲಕ್ಷಿಸಿ ಮತ್ತೆ ಜಾತಿ ಮುನ್ನೆಲೆಯಿಂದ ಸಮಾರಂಭದಲ್ಲಿ ಗುರುತಿಸಿಕೊಳ್ಳಲು ಹಾತೊರೆದರೆ ನಿಮ್ಮನ್ನೂ ತಿರಸ್ಕರಿಸುವ ಶಕ್ತಿ ಬಸವ ಧರ್ಮಿಯರಿಗೆ ಇದೆ.

ವಿಶ್ವಾರಾಧ್ಯ ಸತ್ಯಂಪೇಟೆ
ಪತ್ರಕರ್ತ, ಚಿಂತಕ