ಸಾಲದ ಹೊರೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ತಾಲ್ಲೂಕಿನ ಬಸವಪಟ್ಪಣ ಗ್ರಾಮದಲ್ಲಿ ನಡೆದಿದೆ.
ಮರೆಪ್ಪ ಸಾಯಬಣ್ಣಾ ಬರ್ಮಾ (42) ಮೃತರು. ಮೃತರಿಗೆ ಪತ್ನಿ, ಇಬ್ಬರು ಪುತ್ರಿ, ಪುತ್ರರಿದ್ದಾರೆ. ಫರಹತಾಬಾದ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೃತ ಮರೆಪ್ಪ ಅವರಿಗೆ ಎರಡು ಎಕರೆ ಜಮೀನು ಇತ್ತು. ಕೃಷಿಗಾಗಿ ಬ್ಯಾಂಕ್ ಆಫ್ ಬರೋಡಾ ಹಾಗೂ ಸ್ನೇಹಿತರ ಬಳಿ ಪಡೆದ ಕೈಸಾಲ ಸೇರಿ ಒಟ್ಟು 10 ಲಕ್ಷ ಸಾಲ ಮಾಡಿಕೊಂಡಿದ್ದರು. ಅತಿವೃಷ್ಟಿಯಿಂದ ಬೆಳೆ ಹಾನಿಯಾದ ಹಿನ್ನೆಲೆ ಸಾಲ ತೀರಿಸುವುದು ಹೇಗೆ ಎಂದು ಮನನೊಂದು ಭೀಮಾ ನದಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಸಿ ಬರಗಾಲ ಘೋಷಣೆಗೆ ಆಗ್ರಹ :
ಕಲಬುರಗಿ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಲು ಏನೂ ಉಳಿದಿಲ್ಲ. ಸಂಪೂರ್ಣ ಬೆಳೆ ನಾಶವಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತಕ್ಷಣವೇ ಪರಿಹಾರ ಹಣ ರೈತರ ಖಾತೆಗಳಿಗೆ ಜಮೆ ಮಾಡಬೇಕು. ಜಿಲ್ಲೆಯನ್ನು ಹಸಿ ಬರಗಾಲ ಪೀಡಿತ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಕಲ್ಯಾಣದಲ್ಲಿ ನೆರೆ | ಪರಿಹಾರದ ವಿವರ ನೀಡುವಂತೆ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಗಡುವು