ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿಯಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಪ್ರೀತಿಯ ಕಾರಣಕ್ಕೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ ಮಗಳನ್ನು ಸ್ವಂತ ತಾಯಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದಳು. ಕೊಲೆಯಾದ ಯುವತಿ ಶಿಫನಾಝ್ (17) ಕಾನಂಗಿಯ ಶೇಖ್ ಮುಸ್ತಫಾ ಅವರ ಮಗಳು. ಆರೋಪಿ ತಾಯಿ ಗುಲ್ಝಾರ್ ಬಾನು (45) ಅವರನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೆಪ್ಟೆಂಬರ್ 20ರಂದು ಶಿಫನಾಝ್ ಪ್ರೇಮ ಸಂಬಂಧದ ವಿಷಯವಾಗಿ ತಾಯಿಯೊಂದಿಗೆ ವಾಗ್ವಾದ ನಡೆಸಿದ್ದಳು. ಆ ವೇಳೆ ತಾನು ತನ್ನ ಗೆಳೆಯನೊಂದಿಗೆ ಮನೆ ಬಿಟ್ಟು ಹೋಗುವುದಾಗಿ ಹೇಳಿದ್ದರಿಂದ, ಕೋಪಗೊಂಡ ತಾಯಿ ಮಗಳ ಬಾಯಿಗೆ ಬಟ್ಟೆ ತುರುಕಿಸಿ, ಕತ್ತು ಹಿಸುಕಿದ ಪರಿಣಾಮ ಶಿಫನಾಝ್ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಶಿಫನಾಝ್ ಅವರ ತಂದೆ, ಮಗಳು ತಾಯಿಯ ಜೊತೆ ಜಗಳವಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವೇಳೆ ಕತ್ತು ಹಿಸುಕಿದ ಬಗ್ಗೆ ಮಾಹಿತಿ ಪತ್ತೆಯಾಗಿದ್ದು, ಇದು ಕೊಲೆ ಪ್ರಕರಣ ಎಂದು ದೃಢಪಟ್ಟಿತು.
ತನಿಖೆ ಮುಂದುವರಿಸಿದ ಪೊಲೀಸರು ತಾಯಿ ಗುಲ್ಝಾರ್ ಬಾನು ಅವರನ್ನು ವಿಚಾರಣೆಗೊಳಪಡಿಸಿದಾಗ, ಕೊಲೆಯ ಸತ್ಯಾಂಶ ಬಹಿರಂಗವಾಗಿದೆ. ಪ್ರಸ್ತುತ ಆರೋಪಿ ತಾಯಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.