ವಿಜಯದಶಮಿ ಪ್ರಯುಕ್ತ ಪಟ್ಟಣದ ಪ್ರಮುಖ ದೇವಾಲಯದಲ್ಲಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಬನ್ನಿ ಮಂಟಪ ತಲುಪಿದ ತಹಶೀಲ್ದಾರ್ ಆರತಿ.ಬಿ ಅವರು ಸತತ ಐದನೇ ಬಾರಿಗೆ ಶಮಿ ಪೂಜೆ ನೆರವೇರಿಸಿ ಅಂಬು ಹಾಯುವ ಮೂಲಕ ವಿಜಯದಶಮಿ ಹಬ್ಬವನ್ನು ಸಂಪನ್ನ ಗೊಳಿಸಿದರು.
ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಸಂಪ್ರದಾಯ ಬದ್ಧವಾಗಿ ಜಮಾಬಂದಿ ನಡೆಸಿ ನಂತರ ಶ್ರೀ ಬೇಟೆರಾಯಸ್ವಾಮಿ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ನೆರವೇರಿಸಿ ಮೆರವಣಿಗೆ ಮೂಲಕ ಬನ್ನಿ ಮಂಟಪಕ್ಕೆ ತೆರಳಿದರು. ಮಾರ್ಗ ಮಧ್ಯೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವರ ಮೆರವಣಿಗೆ ಸಹ ಸೇರಿಕೊಳ್ಳುತ್ತದೆ. ನಂತರ ಶಾಸ್ತ್ರೋಕ್ತವಾಗಿ ಶಮಿ ಪೂಜೆ ನೆರವೇರಿಸಿ ಕತ್ತಿಯಿಂದ ಬಾಳೆಕಂದಿನ ಅಂಬು ಹಾಯ್ದರು.
ಇದಾದ ಬಳಿಕ ಶ್ರೀ ಚನ್ನಬಸವೇಶ್ವರ ಸ್ವಾಮಿ ದೇವಾಲಯಕ್ಕೆ ತೆರಳಿ ಅಲ್ಲಿಯೂ ಶಮಿ ಪೂಜೆ ನೆರವೇರಿಸಿ ಪೂಜೆ ಸಲ್ಲಿಸಿದರು. ನಂತರ ಪಟ್ಟಣದ ಪ್ರಮುಖ ದೇವಾಲಯಗಳಾದ ಶ್ರೀ ಗ್ರಾಮ ದೇವತೆ, ಜೈನ ಬಸದಿ, ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಾಲಯ, ಬೆಲ್ಲದಪೇಟೆ ಶ್ರೀ ಆಂಜನೇಯ ಸ್ವಾಮಿ, ಶ್ರೀ ವಾಸವಿ ದೇವಾಲಯ, ಶ್ರೀ ಮಡಿವಾಳ ಮಾಚಿದೇವ ದೇವಾಲಯಕ್ಕೆ ಭೇಟಿ ನೀಡಿ ನಂತರ ಶ್ರೀ ಬೇಟೆರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಿಜಯದಶಮಿ ಹಬ್ಬದ ಇಡೀ ದಿನದ ಧಾರ್ಮಿಕ ಕಾರ್ಯಕ್ರಮವನ್ನು ಸಂಪನ್ನ ಗೊಳಿಸಿದರು.
ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಕಂದಾಯ ನಿರೀಕ್ಷಕ ವಿನೋದ್, ಗ್ರಾಮ ಆಡಳಿತಾಧಿಕಾರಿ ಮಾದೇವಿ ಇನ್ನಿತರರು ಉಪಸ್ಥಿತರಿದ್ದರು.