ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅರ್ಜಿಯಲ್ಲಿ ಬರೋಬ್ಬರಿ 90 ಲಕ್ಷ ರೂ. ಅಕ್ರಮ ನಡೆದಿದೆ ಎಂಬುದು ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಘಟ್ಕೋಪರ್ ಮೂಲದ ಬಿಎಂಎಸ್ ವಿದ್ಯಾರ್ಥಿನಿ ಸಲ್ಲಿಸಿದ್ದ ಆರ್‌ಟಿಐ ಅರ್ಜಿಯಲ್ಲಿ ಅವ್ಯವಹಾರ ಬೆಳಕಿಗೆ ಬಂದಿದೆ. 2018ರಲ್ಲಿ ನಡೆದ ಮುಂಬೈನ ಮುಳಂದ್ ರಸ್ತೆ ಕಾಮಗಾರಿಯಲ್ಲಿ 90 ಲಕ್ಷ ರೂ. ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ.
ಅವ್ಯವಹಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಾಂಬೆ ಹೈಕೋರ್ಟ್, ಈ ಆರೋಪಗಳ ಕುರಿತು ತನಿಖೆ ನಡೆಸಲು ಹೆಚ್ಚುವರಿ ಆಯುಕ್ತ ಹಾಗೂ ಮುಖ್ಯ ಇಂಜಿನಿಯರ್‌ರನ್ನು ಒಳಗೊಂಡ ಸಮಿತಿಯನ್ನು ರಚಿಸುವಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಆದೇಶಿಸಿದೆ.
ತನ್ನ ಕಾಲೇಜಿನಲ್ಲಿನ ನಾಗರಿಕ ಹಕ್ಕುಗಳು ಮತ್ತು ಮಾಹಿತಿ ಹಕ್ಕು ಕಾಯ್ದೆ ಕುರಿತ ಅಭಿಯಾನದಿಂದ ಅರ್ಜಿ ಸಲ್ಲಿಸಿದ
ವಿದ್ಯಾರ್ಥಿನಿ ಪ್ರೇರಿತಳಾಗಿದ್ದಾಳೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ, ನಾಗರಿಕ ವಿಚಾರಗಳಲ್ಲಿ ಯುವ ಜನತೆ ಭಾಗಿಯಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿತು.
ವಿದ್ಯಾರ್ಥಿನಿಯು 2021ರಲ್ಲಿ ಮುಳುಂದ್ ರಸ್ತೆ ಯೋಜನೆ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದಳು. ಈ ಕಾಯ್ದೆಯಡಿ ದೊರೆತಿರುವ ದಾಖಲೆಗಳಿಂದ ಮುಳುಂದ್ ರಸ್ತೆ ಯೋಜನೆಯಲ್ಲಿ ಗಂಭೀರ ಸ್ವರೂಪದ ಅವ್ಯವಹಾರಗಳು ನಡೆದಿರುವುದು ಬೆಳಕಿಗೆ ಬಂದಿತ್ತು.