ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಟಗುಪ್ಪಾ ತಾಲ್ಲೂಕಿನ ಉಡಬಾಳ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಮಲ್ಲಿಕಾರ್ಜುನ ತಿಪ್ಪಣ್ಣಾ (38) ಮೃತ ರೈತ. ಮಲ್ಲಿಕಾರ್ಜನ ಅವರಿಗೆ ತಂದೆಯ ಹೆಸರಿನಲ್ಲಿ 2.25 ಎಕರೆ ಜಮೀನು ಇತ್ತು. ಅಲ್ಲದೆ ಬೇರೆಯವರ ಜಮೀನು ಲಾವಣಿಗೆ ಪಡೆದು ಕೃಷಿ ಮಾಡುತ್ತಿದ್ದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬೆಳೆದಿದ್ದ ಬೆಳೆಗಳು ಜಲಾವೃತಗೊಂಡು ನಾಶವಾಗಿತ್ತು ಎಂದು ತಿಳಿದು ಬಂದಿದೆ.
ಕೃಷಿಗಾಗಿ ಮಾಡಿರುವ ಸಾಲ ತೀರಿಸುವುದು ಹೇಗೆ ಎಂದು ಚಿಂತೆಗೀಡಾಗಿ ಜಮೀನಿನಲ್ಲಿ ಇರುವ ಮನೆಯಲ್ಲಿ ತಮ್ಮ ಅಂಗಿಯಿಂದ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿಗಾಗಿ ನಿರ್ಣಾ ಗ್ರಾಮದ ಎಸ್‌ಬಿಐ ಬ್ಯಾಂಕ್ ನಲ್ಲಿ 1.50 ಲಕ್ಷ, ಇತರೆ ಕಡೆ ಕೈಸಾಲ ಸೇರಿ ಒಟ್ಟು 4-5 ಲಕ್ಷ ಸಾಲ ಮಾಡಿಕೊಂಡಿದ್ದರು ಎಂದು ಮೃತರ ಸಹೋದರ ಸತೀಷ ʼಈದಿನʼಕ್ಕೆ ತಿಳಿಸಿದ್ದಾರೆ.
ಈ ಸಂಬಂಧ ಮೃತರ ಪತ್ನಿ ಮಂಗಲಾ ಅವರು ನೀಡಿದ ದೂರಿನ ಮೇರೆಗೆ ಚಿಟಗುಪ್ಪ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.