ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇದೇ ಅಕ್ಟೋಬರ್ 12ರಂದು ವಿವಿಧ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 4ರಂದು ಕೊನೆಯದಿನವಾಗಿದೆ.
ಶತಮಾನ ಕಂಡ ಬ್ಯಾಂಕಿನ ನಿರ್ದೇಶಕರಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ ಕೊಡಲು ಇರುವ ಮುಖಂಡರಿಗೆ ಈ ಚುನಾವಣೆ ವೇದಿಕೆಯಾಗಿದೆ. ಎರಡನೇ ಹಂತದ ರಾಜಕೀಯ ನಾಯಕರಿಗೆ ರಾಜಕಾರಣದಲ್ಲಿ ಉನ್ನತ ಮಟ್ಟದ ಸ್ಥಾನ ಗಿಟ್ಟಿಸಿಕೊಳ್ಳಲು ಚುನಾವಣೆಯು ಪ್ರತಿಷ್ಠೆಯ ಕಣವಾಗಿದೆ. ಅನೇಕ ಗಣ್ಯರು, ಉದ್ಯಮಿಗಳು, ರಾಜಕಾರಣಿಗಳು ಬ್ಯಾಂಕಿನ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಯಲ್ಲಿ ಪೈಪೋಟಿಗಿಳಿಯುತ್ತಾರೆ.
ಸಾಕಷ್ಟು ಮಂದಿ ಸಿದ್ದೇಶ್ವರ ಬ್ಯಾಂಕಿನ ನಿರ್ದೇಶಕ, ಅಧ್ಯಕ್ಷ ಉಪಾಧ್ಯಕ್ಷರಾಗುವ ಮೂಲಕ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ರಾಜಕಾರಣಿಗಳಾಗಿ ಹೊರಹೊಮ್ಮಿದ್ದಾರೆ. ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆಯಿಂದ ರಾಜಕೀಯ ನಂಟು ಬೆಳೆಯುತ್ತದೆ. ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ರಾಜಕೀಯ ನಾಯಕರು ತಮ್ಮ ಬೆಂಬಲಿಗರನ್ನು ಸಿದ್ದೇಶ್ವರ ಬ್ಯಾಂಕ್ ನಿರ್ದೇಶಕರನ್ನಾಗಿಸಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುತ್ತಾರೆ.
ಸಾಮಾನ್ಯ 13, ಮಹಿಳೆ 2, ಹಿಂದುಳಿದ ಅ ವರ್ಗ 1, ಹಿಂದುಳಿದ ಬ ವರ್ಗ 1, ಪರಿಶಿಷ್ಟ ಜಾತಿ 1, ಪರಿಶಿಷ್ಟ ಪಂಗಡ 1 ಸ್ಥಾನ ಸೇರಿ 19 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅರ್ಹ ಸದಸ್ಯರಿಗೆ ಮತದಾನದ ಹಕ್ಕಿರುತ್ತದೆ. ಹಾಲಿ ನಿರ್ದೇಶಕರು ತಮ್ಮದೇ ಬಣ ಕಟ್ಟಿಕೊಂಡು ಮತ್ತೆ ಬ್ಯಾಂಕಿನ ಅಧಿಕಾರ ಹಿಡಿಯಲು ತಂತ್ರಗಾರಿಕೆ ರೊಪಿಸಿ, ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ರಾಜಕೀಯ ನಾಯಕರ ಬೆಂಬಲ ಗಿಟ್ಟಿಸಲು ಮುಂದಾಗಿದ್ದಾರೆ. ಈ ಬಣಕ್ಕೆ ಟಕ್ಕರ್ ಕೊಡಲು ಅನೇಕ ಹೊಸಬರು ಕೊಡ ಮುಂದಾಗಿದ್ದಾರೆ.
ಇದನ್ನೂ ಓದಿ: ವಿಜಯಪುರ | ಅಕ್ಕಮಹಾದೇವಿ ವಿವಿಯ ಪತ್ರಿಕೋದ್ಯಮ ವಿಭಾಗಕ್ಕೆ ರಾಷ್ಟ್ರೀಯ ಪ್ರಶಸ್ತಿ
ಶ್ರಿ ಸಿದ್ದೇಶ್ವರ ಸಹಕಾರಿ ಬ್ಯಾಂಕ್ 2023-24 ನೇ ಸಾಲಿನಲ್ಲಿ 542.55 ಕೋಟಿ ಠೇವಣಿ, 642.79 ಕೋಟಿ ದುಡಿಯಿವ ಬಂಡವಾಳ ಹೊಂದಿದೆ. 52.67ಕೋಟಿ ರೊ ಆದಾಯ ಗಳಿಸಿದೆ. ವಿವಿಧ ಶಾಖೆ, ಎಟಿಎಂ ಸೌಲಭ್ಯ ಹೊಂದಿದೆ.