ಕಳಚಿದ ‌’ಪತ್ರಿಕಾಧರ್ಮ’ದ ʻಭದ್ರ ಕೊಂಡಿʼ ಟಿ ಜೆ ಎಸ್‌ ಜಾರ್ಜ್

Date:

Advertisements

ನೇರಮಾತು, ರಾಜಿ ಮಾಡಿಕೊಳ್ಳದ ತೀಕ್ಷ್ಣವಾದ ನೋಟದಂಥ ಬರಹ, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಮಾಡದೆ, ಸರಳವಾಗಿ ಅರ್ಥವಾಗುವಂತೆ, ಕೆಲವರಿಗಂತೂ ಚುರುಕು ಮುಟ್ಟಿಸುವ ಅವರ ಬರಹದ ಶೈಲಿ. ವಿರೋಧಿಸುವವರನ್ನೂ ಮೆಚ್ಚಿಸಿದವರು. ಒಂದರ್ಥದಲ್ಲಿ ಜಾರ್ಜ್‌ ಅವರು ಕ್ಷೀಣಿಸುತ್ತಿರುವ ಪತ್ರಿಕಾ ಧರ್ಮದ ಮರೆಯಾಗುತ್ತಿರುವ ಅಪರೂಪದ ಪತ್ರಕರ್ತರ ವರ್ಗಕ್ಕೆ ಸೇರಿದವರು ಎಂದು ಯಾವುದೇ ಭಿಡೆ ಇಲ್ಲದೆ ಹೇಳಬಹುದು.

ಪತ್ರಕರ್ತರ ʼವೃತ್ತಿಧರ್ಮʼ ಎಂಬ ತಿಳಿವಳಿಕೆ ಒಂದು ಕಾಲದಲ್ಲಿ ಇತ್ತು. ಆದರೆ, ವೃತ್ತಿಧರ್ಮ ಎಂಬುದು ಪತ್ರಕರ್ತನೆಂಬ ಮನುಷ್ಯನ ಹುಟ್ಟಿದ ಧರ್ಮ ಎನ್ನುವ, ಭಾರತದಲ್ಲಂತೂ ಸನಾತನ ಧರ್ಮ ಎಂಬಂತಾಗಿದೆ. ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ ಚರ್ಚೆಗಿಳಿದರೆ ಕಣ್ಣಮುಂದೆ ಬಂದು ನರ್ತಿಸುವ ನೂರಾರು ಪ್ರಶ್ನೆಗಳಿವೆ. ಆದರೆ ಉತ್ತರಗಳಿಲ್ಲ. “ಹಾಗೆಂದು ಒಂದಾನೊಂದು ಕಾಲದಲ್ಲಿ ಏಸೊಂದು ಮುದವಿತ್ತ… ಮುದಕೊಂದು ಹದವಿತ್ತ…” ಎಂದೇನೂ ಹೇಳುತ್ತಿಲ್ಲ. ಆಗಲೂ ಪತ್ರಕರ್ತರಿದ್ದರು, ಈಗಲೂ ಇದ್ದಾರೆ. ಹೀಗೆ ಒಂದು ಪ್ರಸ್ತಾವನೆ ಬರೆಯಲು ಕಾರಣ ಟಿ ಜೆ ಎಸ್.‌ ಜಾರ್ಜ್‌ ಶುಕ್ರವಾರ ಅಗಲಿದ್ದಾರೆ. ಹೆಚ್ಚು ವಿಶೇಷಣಗಳನ್ನು ಬಳಸದೆ ಹೇಳಬಹುದಾದರೆ, ʼಪತ್ರಿಕಾ ಧರ್ಮʼದ ಭದ್ರ ಕೊಂಡಿಯೊಂದು ಕಳಚಿಕೊಂಡಿದೆ ಎಂದಷ್ಟೇ ಅಂದು ಕೊಳ್ಳಬಹುದು.

ಲೇಖಕ ಜಾರ್ಜ್

ಜಾರ್ಜ್‌ ಬಗ್ಗೆ ಈಗಾಗಲೇ ಹಲವು ಮಂದಿ ಬರೆದಿದ್ದಾರೆ. ನೇರವಾಗಿ ಅವರೊಂದಿಗೆ ವೃತ್ತಿಬಾಂಧವನಾಗಿ ಇರದಿದ್ದರೂ, ಈ ಪತ್ರಕರ್ತ ಅವರ ಅಂಕಣ ʼಪಾಯಿಂಟ್‌ ಆಫ್‌ ವ್ಯೂʼ ಓದಿ ಪ್ರಭಾವಿತರಾಗಿರುವುದಂತೂ ಸತ್ಯ. ಅಷ್ಟೇ ಅಲ್ಲ ಅವರ ಬರೆದ ಪುಸ್ತಕಗಳು ಮಾಡಿದ ಪ್ರಭಾವ ಇನ್ನೂ ಹೆಚ್ಚಿನದು. ಅವರ ಪುಸ್ತಕಗಳ ಪೈಕಿ ಇಷ್ಟವಾಗುವುದು ಎಂ ಎಸ್.‌ ಸುಬ್ಬುಲಕ್ಷ್ಮಿ-ದ ಡೆಫೆನೆಟೀವ್‌ ಬಯಾಗ್ರಫಿ,  ಲೆಸೆನ್ಸ್‌ ಆಫ್‌ ಜರ್ನಲಿಸಂ-ದ ಸ್ಟೋರಿ ಆಫ್‌ ಪೋತನ್‌ ಜೋಸೆಫ್‌, ಲೈಫ್‌ ಅಂಡ್‌ ಟೈಮ್ಸ್‌ ಆಫ್ ನರ್ಗಿಸ್‌, ‌, ಕೃಷ್ಣಮೆನನ್‌ ಬಯಾಗ್ರಫಿ , ದ ಗೋಯಂಕಾ ಲೆಟರ್ಸ್‌-ಬಿಹೈಂಡ್‌ ದ ಸೀನ್ಸ್‌ ಇನ್‌ ದ ಇಂಡಿಯನ್‌ ಎಕ್ಸ್ ಪ್ರೆಸ್‌, ಎಡಿಟಿಂಗ್‌, ಎ ಹ್ಯಾಂಡ್ ಬುಕ್‌ ಆಫ್‌ ಜರ್ನಲಿಸ್ಟ್ಸ್‌, ದ ಪ್ರಾವಿಷನಲ್‌ ಪ್ರೆಸ್‌ ಇನ್‌ ಇಂಡಿಯಾ, ರಿವೋಲ್ಟ್‌ ಇನ್‌ ದ ಮಿಂದನೋವ್‌- ದ ರೈಸ್‌ ಆಫ್‌ ಇಸ್ಲಾಂ ಇನ್‌ ಫಿಲಿಪೀನ್ಸ್‌ ಪೊಲಿಟಿಕ್ಸ್.‌ ದ ಫಸ್ಟ್‌ ರೆಫ್ಯೂಜ್‌ ಆಫ್‌ ಸ್ಕೌಂಡ್ರಲ್ಸ್‌, ಪೊಲಿಟಿಕ್ಸ್‌ ಇನ್‌ ಮಾಡ್ರನ್‌ ಇಂಡಿಯಾ, ದ ಎನ್ಕ್ವೈರ್‌ ಡಿಕ್ಷನರಿ ಆಫ್‌ ಕೊಟೇಷನ್ಸ್‌ ಹಾಗೂ, ದ ಎನ್ಕ್ವೈರ್‌ ಡಿಕ್ಷನರಿ ಆಫ್‌ ಐಡಿಯಾಸ್‌, ಇಷ್ಯೂಸ್‌, ಇನ್ನೋವೇಷನ್ಸ್‌  ಪುಸ್ತಕಗಳು ಹಾಗೂ, ಲೀ ಕ್ಯೂ ಅವರ ಸಿಂಗಪೂರ್‌ . ಇಷ್ಟು ಪುಸ್ತಕಗಳನ್ನು ಜಾರ್ಜ್‌ ಬರೆಯಲು ಕಾರಣ: ಅವರು ಸುತ್ತಾಡಿದ ದೇಶಗಳು, ಅಲ್ಲಿ ಗಳಿಸಿದ ಅನುಭವಗಳು, ಪತ್ರಕರ್ತರಾಗಿ ದುಡಿದ ಫ್ರೀ ಪ್ರೆಸ್‌ ಜರ್ನಲ್‌, ಇಂಟರ್ನ್ಯಾಷನಲ್‌ ಪ್ರೆಸ್‌ ಇನ್‌ಸ್ಟಿಟ್ಯೂಟ್‌, ದ ಸರ್ಚ್‌ಲೈಟ್‌, ಫಾರ್‌ ಈಸ್ಟ್ರನ್‌ ಎಕನಾಮಿಕ್‌ ರಿವ್ಯೂ, ಏಷ್ಯಾವೀಕ್‌, ಇಂಡಿಯನ್‌ ಎಕ್ಸ್‌ ಪ್ರೆಸ್‌ ಪತ್ರಿಕೆಗಳಲ್ಲಿ ಗಳಿಸಿದ ಜ್ಞಾನ-ತಿಳಿವಳಿಕೆ. ‌

TSJ George

ಬೆಂಗಳೂರಿನ ಆತ್ಮಕತೆ ʼಆಸ್ಕ್ಯೂʼ

ಎಲ್ಲಕ್ಕಿಂತ ಹೆಚ್ಚು ಪ್ರಭಾವಿಸಿದ್ದು,ʼ ಆಸ್ಕ್ಯೂʼ -ಬೆಂಗಳೂರಿನ ಕಿರು ಆತ್ಮಕಥನ. ಈ ಪುಸ್ತಕವನ್ನು ಪ್ರಕಟಿಸಿದವರು ಅಲೆಫ್‌ ಬುಕ್‌ ಕಂಪನಿ-ರೂಪಾ ಪಬ್ಲಿಕೇಷನ್ಸ್.‌ ಈ ಪುಸ್ತಕವನ್ನು ಜಾರ್ಜ್‌ ತಮ್ಮ ಬಹುಕಾಲದ ಗೆಳೆಯ, ʼರಸಗ್ರಾಹಿʼ ವೈಎನ್ಕೆ ಎಂದೇ ಖ್ಯಾತರಾದ ಕನ್ನಡ ಪ್ರಭಾದ ಸಂಪಾದಕರಾಗಿದ್ದ ವೈ.ಎನ್.‌ ಕೃಷ್ಣಮೂರ್ತಿ ಅವರಿಗೆ. 2016ರಲ್ಲಿ ಪ್ರಕಟವಾದ ಈ ಪುಸ್ತಕದ ಗಾತ್ರ ಕೇವಲ 120 ಪುಟ. ಆದರೆ. ಜಾರ್ಜ್‌ ಅವರು ಸೆರೆ ಹಿಡಿದಂತೆ ಬೆಂಗಳೂರಿನ ಆತ್ಮವನ್ನು, ಹಾಗೂ ಆತ್ಮಕರ್ತರನ್ನು ಯಾರೂ ಇದುವರೆಗೆ ಸೆರೆ ಹಿಡಿದವರ್ಯಾರೂ ಇಲ್ಲ ಎಂಬುದು ಈ ಪತ್ರಕರ್ತನ ಅನಿಸಿಕೆ.  ಈ ಪುಸ್ತಕದ ಬೆನ್ನುಡಿಯ ಕನ್ನಡ ಅನುವಾದ ಹೀಗಿದೆ: ”ಕಥೆಯಂತಿರುವ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡ ತನ್ನ ಕನಸಿನ ಬೆಂಗಳೂರನ್ನು ಕಟ್ಟಲು ಹೊರಟಾಗ ಅವರಮ್ಮ ಹೇಳಿದ್ದು, ಕೆರೆಗಳಂ ಕಟ್ಟು, ಮರಗಳಂ ನೆಡು” ಎಂದು. ಕೆಂಪೇಗೌಡ ಅಮ್ಮ ಹೇಳಿದಂತೆಯೇ ಮಾಡಿದ. ಆದರೆ, ಆ ಕೆಂಪೇಗೌಡ ಕಟ್ಟಿದ ಕೆರೆಗಳಲ್ಲಿ ಇಂದು ಉಳಿದಿರುವುದು ಅದರ ಶೇಕಡಾ ಹತ್ತರಷ್ಟು ಮಾತ್ರ, ಉಳಿದಿರುವುದು ಶೇಕಡಾ ಐದರಷ್ಟು ಮರಗಳು ಮಾತ್ರ ಎಂಬುದು ನೆನಪಾಗುತ್ತದೆ. ನಗರ ಸಂಸ್ಕೃತಿಯೇ ಅಂಥಹುದು, ಎಲ್ಲವನ್ನೂ ನೊಣೆದು ನುಂಗುವ ಪ್ರವೃತ್ತಿಯದು. ಟೀಕೆ ಕಟುವಾಗಿದ್ದರೆ ಕ್ಷಮೆ ಇರಲಿ. ಆದರೆ ಇದು ಸತ್ಯ.

ಈ ಪುಸ್ತಕದ ಮುಖಪುಟದ ಒಳ ಮಡಚಿದ ಪುಟದಲ್ಲಿ ಇದರ ಮುಂದುವರೆದ ಭಾಗವಿದೆ. ಅದರ ಕನ್ನಡಾನುವಾದ ಹೀಗಿದೆ: “ಇಂಥ ನಗರ ಎರಡು ಶತಮಾನದ ನಂತರ ತನ್ನ ಮುದನೀಡುವ ಪರಿಸರ, ಸ್ವಚ್ಛ ಹವೆ, ಇದೇ ವಾತಾವರಣವನ್ನು ಪ್ರೀತಿಸುವ ಬ್ರಿಟಿಷರಿಗೆ ಇಷ್ಟವಾಯಿತು. ಇದನ್ನು ಅವರು ತಮ್ಮ ಕಂಟೋನ್ಮೆಂಟ್‌ ಆಗಿಸಿಕೊಂಡು, ಇಲ್ಲೇ ಉಳಿದುಕೊಂಡರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ, ಬೆಂಗಳೂರು ನಗರ ನಿವೃತ್ತರ ಬದುಕಿನ ಸ್ವರ್ಗ ಎನ್ನಿಸಿಕೊಂಡಿತು. ಎಂಭತ್ತರ ದಶಕದಲ್ಲಿ ನಗರದ ಚಹರೆ ಬದಲಾಗಲಾರಂಭಿಸಿತು. ವಿಶ್ವಪ್ರಸಿದ್ಧ ಉದ್ದಿಮೆಗಳು ಹುಟ್ಟಿಕೊಂಡವು. ಹಲವಾರು ತಾಂತ್ರಿಕ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಆರಂಭಗೊಂಡವು. ಬೆಂಗಳೂರು, ಮಾಹಿತಿ ತಂತ್ರಜ್ಞಾನದ ಕೇಂದ್ರವೆಂದು ಕರೆಸಿಕೊಂಡಿತು. ಮಾಹಿತಿ ತಂತ್ರಜ್ಞಾನದ ಪ್ರಭಾವ ಯಾವ ಮಟ್ಟದ್ದೆಂದರೆ, ವಿಶ್ವದ ಎಲ್ಲ ದೇಶಗಳು ತಂತ್ರಜ್ಞರು, ಬೆಂಗಳೂರನ್ನು ತಮ್ಮದಾಗಿಸಿಕೊಂಡರು. ಅಮೇರಿಕಾದ ಅಧ್ಯಕ್ಷ ಬರಾಕ್‌ ಒಬಾಮ, “ಬರಾಕ್ಕೂ ಆಗದೆ, ಬಿಡಾಕ್ಕೂ ಆಗದೆ..” ಅಲ್ಲಿಂದ ಇಲ್ಲಿಗೆ ವಲಸೆ ಬರುತ್ತಿರುವವರ ಕುರಿತು. ಅಮೆರಿನ್‌ ವೃತ್ತಿಪರರು ʼಬೆಂಗಲೂರ್ಡ್‌ʼ ಆದರು. ಎಂದು ಅರೆ ಹೊಟ್ಟೆ ಕಿಚ್ಚಿನಿಂದ, ಅರೆ ಪ್ರೀತಿಯಂದ ಹೇಳಿದ್ದು, ಇಂದು ಬೆಂಗಳೂರ ʻಸಿಲಿಕಾನ್‌ ಸಿಟಿʼ ಎಂದಾಯಿತು. ಇಪ್ಪತ್ತನೇ ಶತಮಾನದಲ್ಲಿ ಬೆಂಗಳೂರು ತನ್ನ ಭಾರಕ್ಕೆ ತಾನೇ ಕುಸಿಯುತ್ತಿದೆ. ಮೂಲಭೂತ ಸೌಕರ್ಯಗಳು ನೆಲಕಚ್ಚುತ್ತಿವೆ. ರಿಯಲ್‌ ಎಸ್ಟೇಟ್‌ ಉದ್ಯಮ, ಬೆಂಗಳೂರನ್ನು ನುಂಗಿ ನೊಣೆಯುತ್ತಿದೆ. ಭ್ರಷ್ಟಾಚಾರ ಮುಗಿಲು ಎಂಬುದಿದ್ದರೆ, ಅದರ ಎತ್ತರಕ್ಕೆ ತಲುಪಿದೆ. ಇಷ್ಟಾಗಿಯೂ ಬೆಂಗಳೂರು ವಿಶ್ವದ ಎಲ್ಲೆಡೆಯಿಂದ ಬರುತ್ತಿರುವವರಿಗೆ ಬಾಗಿಲು ಮುಕ್ತವಾಗಿ ತೆರೆದಿದೆ. ಇಂಥ ಬೆಂಗಳೂರಿನ ಹಿಂದಿನ ಜನ್ಮ, ಮತ್ತು ಇಂದಿನ ಜನ್ಮದ ಬಗ್ಗೆ ಜಾರ್ಜ್‌ ಸಿನಿಕರಾಗದೆ ಬರೆದಿದ್ದಾರೆ ಎನ್ನುವುದು ಇಲ್ಲಿ ಮುಖ್ಯ ಸಂಗತಿ.

WhatsApp Image 2025 10 04 at 4.06.58 PM

ಬೆಂಗಳೂರಿನ ಆತ್ಮವನ್ನು ಕಾಣುವ ಯತ್ನ

ಒಂದು ರೀತಿಯಲ್ಲಿ ಬೆಂಗಳೂರಿನ ಅಂದಿನ ಮತ್ತು ಇಂದಿನ ಆತ್ಮವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಹಾಗೆ ನೋಡಿದರೆ ಒಂದು ಹಳ್ಳಿಗೆ, ಅದರೊಂದು ಬೀದಿಗೂ ಕೂಡ ಅದರದ್ದೇ ಆದ ಆತ್ಮವೊಂದಿರುತ್ತದೆ. ಅದು ಹುಡುಕಿದರೆ ಸಿಗುತ್ತದೆ. ಆ ಊರಿನ, ಹಳ್ಳಿಯ ಹೆಸರೇ ಅದರ ಆತ್ಮದ ಇರುವಿಕೆಯನ್ನು ಸೂಚಿಸುತ್ತದೆ. ವಸಾಹತೀಕರಣದ ಕಾರಣ ಬದಲಾಗಿರುವ ಹೆಸರುಗಳನ್ನು ಇಂದಿಗೂ ಅದೇ ಹೆಸರಿನಿಂದ ಕರೆಯುತ್ತಿರುವುದೇ ಅದಕ್ಕೆ ಸಾಕ್ಷಿ. ಈ ಪುಸ್ತಕದಲ್ಲಿ; “ಬೆಳೆದಿದೆ ನೋಡ… ಬೆಂಗಳೂರು ನಗರ, ಸಂಸ್ಕೃತಿ-ಕಲೆಗಳ ಹೆಮ್ಮೆಯ ನಗರ….ಎಂದು ಅಂದಿನ ಬೆಂಗಳೂರಿನ ಅತ್ಮವನ್ನು ಹಿಡಿದಿಟ್ಟ ಸಿ.ವಿ. ಶಿವಶಂಕರ್‌ ಅವರ ನಿರ್ದೇಶನದ ಅರವತ್ತರ ದಶಕದ ಆದಿಯಲ್ಲಿ ಬಿಡುಗಡೆಯಾದ ʻಮನೆಕಟ್ಟಿ ನೋಡುʼ ಚಿತ್ರದ ಅವರೇ ಬರೆದ ಹಾಡು ನೆನಪಾಗುತ್ತದೆ. ಹಾಗೆಯೇ, ಇಂದು ಮಾಯಾನಗರಿಯಾಗಿರುವ ಬೆಂಗಳೂರನ್ನು ಕುರಿತು ಬರುತ್ತಿರುವ ಚಲನಚಿತ್ರಗಳು ಹಾಗೂ ಕಾದಂಬರಿಗಳೂ ನೆನಪಾಗುತ್ತವೆ. ಒಟ್ಟಿನಲ್ಲಿ ʼಆಸ್ಕ್ಯೂʼ ಒಂದು ಕಾಲದಲ್ಲಿ ಜನಪರ ನಗರವಾಗಿದ್ದ ಬೆಂಗಳೂರು ಇಂದು ಶಾಪಗ್ರಸ್ತವಾಗುತ್ತಿರುವ ನೋಟವನ್ನು ಜಾರ್ಜ್‌ ನೀಡುತ್ತಾರೆ.

‌ಅಕ್ಷರ ಚಿತ್ರ

ಲೇಖಕರ ಮಾತಿನಲ್ಲಿ ಜಾರ್ಜ್‌ ತಮ್ಮ ಅಗಲಿದ ಗೆಳೆಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಯು. ಆರ್.‌ ಅನಂತಮೂರ್ತಿ ಅವರನ್ನು ನೆನೆಯುತ್ತಾರೆ. ಕಾರಣ, ಬ್ಯಾಂಗಲೂರ್‌ ಆಗಿದ್ದ ನಗರವನ್ನು ʻಬೆಂಗಳೂರುʼ ಎಂದು ಹೆಸರಿಸುವಂತೆ ಅವರು ಸೂಚಿಸಿದ್ದು, ಮತ್ತೆ ಅದು ಕಾರ್ಯಗತವಾಗುವಂತೆ ಮಾಡದ್ದಕ್ಕೆ, ಈ ನೆನಕೆ. ಐದು ಅಧ್ಯಾಯಗಳಲ್ಲಿ ತನ್ನನ್ನು ವಿಸ್ತರಿಸಿಕೊಂಡಿರುವ ಈ ಪುಸ್ತಕದಲ್ಲಿ ಬೆಳೆಯುತ್ತಿರುವ ಬೆಂಗಳೂರಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ, ಬೆಂಗಳೂರಿನ ಕುರಿತು ಜಗತ್ತಿನ ಎಲ್ಲರ ಆಕರ್ಷಣೆ ಮತ್ತುಅದರ ಪರಿಣಾಮ, ರಾಜಕಾರಣಿಗಳು ಮತ್ತು ಇತರ ಬಿಭೀತ್ಸಗಳು, ಪಂಡಿತರ, ಕಲಾವಿದರು, ಆಹಾರ ಮತ್ತು ದೇವರು, ಬೆಂಗಳೂರಿನ ಎರಡು ಜಗತ್ತನ್ನೂ ಪಡೆದುಕೊಂಡವರು, ಸಂಗೀತ, ನಾಟಕ ಹಾಗು ನಾಗರಿಕ ಸಮಾಜವನ್ನುಒಳಹೊಕ್ಕು, ಆತ್ಮೀಯವಾಗುವಂಥ ಅಕ್ಷರ ಚಿತ್ರ ಬಿಡಿಸಿದ್ದಾರೆ ಜಾರ್ಜ್. ಹೀಗೆ ಜಾರ್ಜ್‌ ಅವರ ಪುಸ್ತಕಗಳೆಲ್ಲದರ ಬಗ್ಗೆ ಬರೆಯಲು ಹೊರಟರೆ ಅದೊಂದು ಜಾರ್ಜೀಕರಣಗೊಂಡ ಪುಸ್ತಕವಾಗಿಬಿಡುವ ಭಯದಿಂದ, ಈ ಪುಸ್ತಕ ಕುರಿತ ಬರವಣಿಗೆಯನ್ನು ಇಲ್ಲಿಗೇ ನಿಲ್ಲಿಸುವುದು ಸೂಕ್ತ ಎಂಬುದಷ್ಟೇ ಸರಿ.

ʼಅಂದಿನ‌ʼ ಪತ್ರಕರ್ತ-ಜಾರ್ಜ್

TJS

ಇನ್ನು ಪತ್ರಕರ್ತರಾಗಿ ಜಾರ್ಜ್‌ ಅವರನ್ನು ನೋಡುವುದಾದರೆ, ಅಂದೂ ಪತ್ರಕರ್ತರಿದ್ದರು, ಇಂದೂ ಇದ್ದಾರೆ ಎಂದುಕೊಳ್ಳೂತ್ತಾ, ಅಂದೂ ಇದ್ದ ಪತ್ರಕರ್ತರ ಸಾಲಿನಲ್ಲಿ ಅವರನ್ನಿಟ್ಟು ನೋಡುವುದು ಹೆಚ್ಚು ಸೂಕ್ತ. ಅಂದು ಪತ್ರಕರ್ತ ಧರ್ಮ ಸ್ವಲ್ಪವಾದರೂ, ಜೀವಂತ ಕಾಲ ಎಂದು ಭಾವಿಸಿ, ಈ ಮಾತುಗಳು. ಒಂದು ರೀತಿಯಲ್ಲಿ ಅಂದಿನ ಕಾಲದಿಂದ ಇತ್ತೀಚಿನವರೆಗೂ, ಅಂದರೆ ತಮ್ಮ ಲೇಖನಿಯನ್ನು ಪಕ್ಕಕ್ಕಿಡುವವರೆಗೂ, ಅವರ ʼಪಾಯಿಂಟ್‌ ಆಫ್‌ ವ್ಯೂʼ ನಿಲ್ಲುವವರೆಗೆ, ಅವರು ಬದುಕಿದ ಬರೆದ ರೀತಿಯೇ ಸಾಕ್ಷಿ. ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ ಎನ್ನುವಂತೆ, ಜಾರ್ಜ್‌, ಕೊನೆಯ ಕ್ಷಣದವರೆಗೂ ಜೀವಪರರಾಗಿದ್ದಕ್ಕೆ ಅವರ ಅಂಕಣಗಳೇ ಸಾಕ್ಷಿ. ʻಅಕ್ಷರವಿಟ್ಟಳಿಪದೊಂದಗ್ಗಳಿಕೆʼ ಎನ್ನುವಂತೆ ಬರೆದವರು ಜಾರ್ಜ್.‌ ಜಾರ್ಜ್‌ ಅವರ ಅಂಕಣಗಳನ್ನು ಓದುವುದೆಂದರೆ ಅದು ಒಂದು ರೀತಿಯಲ್ಲಿ ಎಲ್ಲರ, ಮುಖ್ಯವಾಗಿ ಸಂಬಂಧಿಸಿದವರ ಅತ್ಮನಿರೀಕ್ಷೆಯ ಭಾವ. ಜಾರ್ಜ್‌ ಪಟನಾದಲ್ಲಿ ʻಸರ್ಚ್ಲೈಟ್‌ʼ ಗೆ ಬರೆಯುತ್ತಿದ್ದಾಗ, ಆಡಳಿತದಲ್ಲಿದ್ದ ಸರ್ಕಾರವನ್ನು ಟೀಸಿದ್ದಕ್ಕಾಗಿ ಒಂದು ವಾರ ತುರಂಗವಾಸ ಅನುಭವಿಸಿದವರು. ಸತ್ಯವನ್ನು ಹೇಳಿದ್ದಕ್ಕಾಗಿ ಸ್ವತಂತ್ರ ಭಾರತದಲ್ಲಿ ಸೆರೆವಾಸ ಅನುಭವಿಸಿದ ಮೊದಲ ಪತ್ರಕರ್ತ ಜಾರ್ಜ್.‌ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದವರು ಅಂದು ರಕ್ಷಣಾ ಸಚಿವರಾಗಿದ್ದ. ವಿ.ಕೆ. ಕೃಷ್ಣ ಮೆನನ್.‌

ನೇರ ನುಡಿ

ನೇರಮಾತು, ರಾಜಿಮಾಡಿಕೊಳ್ಳದ ತೀಕ್ಷ್ಣವಾದ ನೋಟದಂಥ ಬರಹ, ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ ಮಾಡದೆ, ಸರಳವಾಗಿ ಅರ್ಥವಾಗುವಂತೆ, ಕೆಲವರಿಗಂತೂ, ಚುರುಕು ಮುಟ್ಟಿಸುವ ಅವರ ಬರಹದ ಶೈಲಿ, ಅವರನ್ನು ವಿರೋಧಿಸುವವರನ್ನು ಮೆಚ್ಚಿಸಿದವರು. ಒಂದರ್ಥದಲ್ಲಿ ಜಾರ್ಜ್‌ ಅವರು ಕ್ಷೀಣಿಸುತ್ತಿರುವ ಪತ್ರಿಕಾ ಧರ್ಮದ ಮರೆಯಾಗುತ್ತಿರುವ ಅಪರೂಪದ ಪತ್ರಕರ್ತರ ವರ್ಗಕ್ಕೆ ಸೇರಿದವರು ಎಂದು ಯಾವುದೇ ಭಿಡೆ ಇಲ್ಲದೆ ಹೇಳಬಹುದು. ಇವರ ಬರಹಕ್ಕೆ ಬೆಚ್ಚದ ರಾಜಕಾರಣಿ, ನ್ಯಾಯಮೂರ್ತಿ, ʻಅಧಿಕಾರದ ಶಕ್ತಿʼವಂತರು ಇರಲಿಕ್ಕಿಲ್ಲ. ಆದರೆ ಇವರು ಯಾರ ಮರ್ಜಿಗೂ ಸಿಕ್ಕಿಹಾಕಿಕೊಳ್ಳದ ಪ್ರತಿಭಾವಂತ. ಮುಖ್ಯಮಂತ್ರಿಯಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ ಯಾರಿಗೂ ಮುಲಾಜು ತೋರಿದವರಲ್ಲ. ʼನಜರ್‌ʼ ಒಪ್ಪಿಸಿದವರೂ ಅಲ್ಲ. ಅವರು ಬರೆಯುತ್ತಾ ಕುಳಿತರೆ, ತದೇಕ ಚಿತ್ತ. ಮಧ್ಯ ಅವರಿಗೆ ತುಸು ತೊಂದರೆಯಾದರೂ, ದೂರ್ವಾಸ ಮುನಿಯ ಪ್ರತಿರೂಪ ಎಂದು ಇಂದು ನಮ್ಮೊಂದಿಗಿಲ್ಲದ ಗೆಳೆಯರು ನಚ್ಚಿ ಅರ್ಥಾತ್‌ ಎನ್‌ ಚಕ್ರವರ್ತಿ, ಸಚ್ಚಿ ಅರ್ಥಾತ್‌ ಸಚ್ಚಿದಾನಂದಮೂರ್ತಿ ಹೇಳುತ್ತಿದ್ದ ನೆನಪು. ಅವರೊಂದಿಗೆ ಜೀವಿಸಿದ ಪತ್ರಕರ್ತರು ಹೇಳಬಹುದಾದ ಮಾತೆಂದರೆ…..ʼತೊರೆದು ಜೀವಿಸಬಹುದೇ…..” ಅಲ್ಲವೇ. ಇದು ಕೇವಲ ದೂರದೃಷ್ಟಿಗೆ ಸಿಕ್ಕ ನೋಟ. ಹತ್ತಿರದಿಂದ ಅವರ ಸ್ನೇಹ ದಕ್ಕಿಸಿಕೊಂಡವರು ನಿಜವಾಗಿ ಬ್ಲೆಸ್ಡ್.‌ ಎಂದಷ್ಟೇ ಹೇಳಬಹುದು.

ಇದನ್ನೂ ಓದಿ ಭಾರತದಲ್ಲಿ ಮುಸ್ಲಿಂ ದ್ವೇಷ ಹರಡಲು AI ಚಿತ್ರ- ವಿಡಿಯೋಗಳ ವ್ಯಾಪಕ ಬಳಕೆ: ಅಧ್ಯಯನ ವರದಿ

Muralidhara Khajane
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಮಹಿಳೆಯರ ಮೇಲೆ ಹೆಚ್ಚಿದ ದೌರ್ಜನ್ಯ, ದೇವತೆ ಸ್ಥಾನ ನೀಡುವ ದೇಶ ಭಾರತ ಎನ್ನುವುದು ಬರೀ ಭ್ರಮೆ!

ದಸರಾ ಹಬ್ಬದ ಹೊತ್ತಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲಾತಿ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ...

ಗುಮಾನಿ ಹುಟ್ಟುಹಾಕಿದ ‘ವಿಲ್’; ‘ಕೊನೆಗಾಲದಲ್ಲಿ ಭೈರಪ್ಪ ಖಾತೆಯಿಂದ ದುಡ್ಡು ದೋಚಿದ್ದು ಯಾರು?’

"ಭೈರಪ್ಪನವರ ಉಯಿಲು (ವಿಲ್) ನೋಡುತ್ತಿದ್ದರೆ ಎಲ್ಲ ಪ್ಲ್ಯಾನ್ ಮಾಡಿ ಬರೆಸಿರುವಂತಿದೆ ಎಂದು...

ಶಾಶ್ವತ ನೀರಾವರಿಗಾಗಿ ʼಜಲಾಗ್ರಹʼ; ʼಮಾಡು ಇಲ್ಲವೇ ಮಡಿʼ ಹೋರಾಟಕ್ಕೆ ಸಜ್ಜಾದ ರೈತರು

ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಶ್ವತ ನೀರಾವರಿಗಾಗಿ ಸುಮಾರು 30 ವರ್ಷಗಳಿಂದ ಹೋರಾಟ...

Download Eedina App Android / iOS

X