ಅಡುಗೆ ಮಾಡುವ ವಿಚಾರದಲ್ಲಿ ತಾಯಿ ಮತ್ತು ಮಗನ ನಡುವೆ ಆರಂಭವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ದುರ್ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳು ಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಆರೋಪಿ ಸಂತೋಷ್(19) ಎಂಬಾತನಿಂದ ತಾಯಿ ಪ್ರೇಮ(45) ಅವರು ಕೊಲೆಯಾಗಿದ್ದಾರೆ.
ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಆತ, ಅಡುಗೆ ಮಾಡದ ವಿಷಯಕ್ಕೆ ತಾಯಿ ಪ್ರೇಮ ಜತೆಗೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ವೇಳೆ ಆಕ್ರೋಶಗೊಂಡ ಸಂತೋಷ್, ತಾಯಿಗೆ ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಪ್ರೇಮ ಅವರನ್ನು ಕುಟುಂಬಸ್ಥರು ಕೂಡಲೇ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಳೆಹಾನಿಗೆ ಒಳಗಾದ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಡಿಸಿ ಸೂಚನೆ
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಸಂತೋಷನ ಕೃತ್ಯಕ್ಕೆ ಆಲೂರು ಜನತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, “ತಾಯಿಯನ್ನು ದೈವವೆಂದು ಪೂಜಿಸುವ ನಾಡಿನಲ್ಲಿ ಮಾತೆಯನ್ನೇ ಕೊಲೆ ಮಾಡಿದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲೇಬೇಕು” ಎಂದು ಆಗ್ರಹಿಸಿದ್ದಾರೆ.