ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾ ಮತ್ತು ಭಾರತ ಕ್ರಿಕೆಟ್ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಭಾರತ ತಂಡವು ಆಸ್ಟ್ರೇಲಿಯಾಗೆ ಪ್ರಯಾಣ ನಡೆಸಲು ಸಿದ್ದವಾಗಿದೆ. ಸರಣಿಗಾಗಿ ಬಿಸಿಸಿಐ ತಂಡದಲ್ಲಿನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಯುವ ಬ್ಯಾಟರ್ ಶುಭಮನ್ ಗಿಲ್ ಅವರಿಗೆ ತಂಡದ ನಾಯಕತ್ವ ನೀಡಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ಮಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ.
ಅಹಮದಾಬಾದ್ನಲ್ಲಿ ಬಿಸಿಸಿಐ ಸಭೆ ನಡೆದಿದ್ದು, ತಂಡದ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಆಟಗಾರರ ಪಟ್ಟಿಯನ್ನು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಘೋಷಿಸಿದ್ದಾರೆ. ತಂಡವನ್ನು ಶುಭಮನ್ ಗಿಲ್ ಮುನ್ನಡೆಸಿದ್ದರೆ, ಅವರಿಗೆ ಶ್ರೇಯಸ್ ಅಯ್ಯರ್ ಸಾಥ್ ಕೊಡಲಿದ್ದಾರೆ. ಅಯ್ಯರ್ ಅವರನ್ನು ಉಪ ನಾಯಕನಾಗಿ ಆಯ್ಕೆ ಮಾಡಲಾಗಿದೆ.
ಈವರೆಗೆ ಏಕದಿನ ಟೂರ್ನಿಗಳಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದರು. ಇದೀಗ, ರೋಹಿತ್ ಬದಲಾಗಿ ಗಿಲ್ ಅವರಿಗೆ ನಾಯಕತ್ವ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಗರ್ಕರ್, “ನಾಯಕತ್ವ ಬದಲಾವಣೆಯ ಬಗ್ಗೆ ರೋಹಿತ್ ಶರ್ಮಾ ಅವರಿಗೆ ಈ ಮುಂಚೆಯೇ ತಿಳಿಸಲಾಗಿದೆ” ಎಂದು ಹೇಳಿದ್ದಾರೆ.
ತಂಡದ ಆಟಗಾರರು: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮುಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ ಜುರೆಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್.