ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನ ಡೆಂಟನ್‌ನಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪೆಟ್ರೋಲ್ ಬಂಕ್‌ನಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದ ಹೈದರಾಬಾದ್ ಮೂಲದ 27 ವರ್ಷದ ವಿದ್ಯಾರ್ಥಿ ಚಂದ್ರಶೇಖರ್ ಪೋಲ್ ಎಂಬುವವರನ್ನು ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ.
ಈ ದುರಂತ ಘಟನೆಯಿಂದ ಚಂದ್ರಶೇಖರ್ ಅವರ ಕುಟುಂಬ ಆಘಾತಕ್ಕೊಳಗಾಗಿದ್ದು, ಚಂದ್ರಶೇಖರ್ ಮೃತದೇಹವನ್ನು ಭಾರತಕ್ಕೆ ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಕ್ಕಾಗಿ ಮನವಿ ಮಾಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
ಚಂದ್ರಶೇಖರ್ ಮೇಲಿನ ಗುಂಡಿನ ದಾಳಿ ಘಟನೆಯು ಅಮೆರಿಕದಲ್ಲಿ ಅರೆಕಾಲಿಕ ಕೆಲಸ ಮಾಡುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತು ಗಂಭೀರ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಜೊತೆಗೆ ಅಮೆರಿಕದಲ್ಲಿ ಈ ರೀತಿ ಹತ್ಯೆಗಳು ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಚಂದ್ರಶೇಖರ್ ಪೋಲ್, ಹೈದರಾಬಾದ್‌ನ ಎಲ್.ಬಿ. ನಗರದ ನಿವಾಸಿಯಾಗಿದ್ದರು. ಅವರು ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ (ಬಿಡಿಎಸ್) ಪೂರ್ಣಗೊಳಿಸಿ, 2023ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಉತ್ತರ ಟೆಕ್ಸಾಸ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆರು ತಿಂಗಳ ಹಿಂದೆ ಡೇಟಾ ಅನಲಿಟಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದ ಅವರು, ಪೂರ್ಣ ಸಮಯದ ಉದ್ಯೋಗ ಹುಡುಕುತ್ತಿರುವಾಗ ಡೆಂಟನ್‌ನ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ನಲ್ಲಿ ಅರೆಕಾಲಿಕವಾಗಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.