ಇತ್ತೀಚೆಗೆ ಲಡಾಖ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರ ಹತ್ಯೆಯಾಗಿದೆ. ಆ ಹತ್ಯೆಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ಆರಂಭವಾಗುವವರೆಗೂ ನಾನು ಜೈಲಿನಲ್ಲಿರಲು ಸಿದ್ದನಿದ್ದೇನೆ ಎಂದು ಹವಾಮಾನ ಹೋರಾಟಗಾರ, ಲಡಾಖ್ ಜನರಿಗಾಗಿ ಹೊರಾಟ ನಡೆಸುತ್ತಿರುವ ಸೋನಂ ವಾಂಗ್ಚುಕ್ ಹೇಳಿದ್ದಾರೆ.
ಲಡಾಖ್ ಹಿಂಸಾಚಾರಕ್ಕೆ ಪ್ರಚೊದನೆ ನೀಡಿದ ಆರೋಪದ ಮೇಲೆ ಸೋನಮ್ ವಾಂಗ್ಚುಕ್ ಅವರನ್ನು ಸೆಪ್ಟೆಂಬರ್ 26ರಂದು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದೆ. ಜೋಧ್‌ಪುರ ಜೈಲಿನಲ್ಲಿರುವ ಅವರು, ಜೈಲಿನಿಂದಲೇ ಸಂದೇಶ ಕಳಿಸಿದ್ದಾರೆ.
“ನಮ್ಮ ನಾಲ್ಕು ಜನರ ಹತ್ಯೆ ಕುರಿತು ನ್ಯಾಯಾಂಗ ತನಿಖೆಯನ್ನು ನಡೆಸಬೇಕು. ತನಿಖೆಗೆ ಆದೇಶಿಸುವವರೆಗೂ ಜೈಲಿನಲ್ಲಿಯೇ ಇರಲು ನಾನು ಸಿದ್ಧನಿದ್ದೇನೆ. ಲಡಾಖ್‌ಗೆ 6ನೇ ಪರಿಚ್ಛೇಧ ಸ್ಥಾನಮಾನ ನೀಡಬೇಕು, ರಾಜ್ಯತ್ವಕ್ಕಾಗಿ ನಮ್ಮ ಪ್ರಾಮಾಣಿಕವಾದ ಸಾಂವಿಧಾನಿಕ ಬೇಡಿಕೆಗಳ ವಿಷಯದಲ್ಲಿ ನಾನು ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ),ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಹಾಗೂ ಲಡಾಖ್‌ನ ಜನರೊಂದಿಗೆ ದೃಢವಾಗಿ ನಿಲ್ಲುತ್ತೇನೆ” ಎಂದು ಹೇಳಿದ್ದಾರೆ.
“ಲಡಾಖ್ ಹೋರಾಟ ಮುಂದುವರೆಯಲಿದೆ. ರಾಜ್ಯದ ಜನರು ಶಾಂತಿ ಮತ್ತು ಏಕತೆಯನ್ನು ಕಾಯ್ದುಕೊಂಡು, ಹೋರಾಟ ಮುನ್ನಡೆಸಬೇಕು” ಎಂದು ಜನರಲ್ಲಿ ಕರೆಕೊಟ್ಟಿದ್ದಾರೆ.