ಬೀದರ್ ನಗರದಲ್ಲಿ ಹೆಚ್ಚುತ್ತಿರುವ ರಸ್ತೆಗುಂಡಿ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಪದೇ ಪದೇ ವಿಫಲವಾಗುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ಪದಾಧಿಕಾರಿಗಳು ರಸ್ತೆ ಗುಂಡಿಗಳಿಗೆ ಹೂವು ಸುರಿಸಿ, ಅಗರಬತ್ತಿ ಹಚ್ಚಿ ಪೂಜೆ ಸಲ್ಲಿಸಿ ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ನೇತ್ರತ್ವದಲ್ಲಿ ಭಾನುವಾರ ಬೀದರ್-ನೌಬಾದ್ ರಸ್ತೆಯಲ್ಲಿನ ಗುಂಡಿಗಳಿಗೆ ಹೂವು ಸುರಿಸಿ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್-ನೌಬಾದ್ ರಸ್ತೆ ಸೇರಿದಂತೆ ನಗರದ ವಿವಿಧ ಮುಖ್ಯರಸ್ತೆಯಲ್ಲಿ ಭಾರಿ ಮಳೆಯಿಂದ ರಸ್ತೆ ಗುಂಡಿ ಬಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ತೆರಿಗೆ ಹಣದಲ್ಲಿ ಸಂಬಳ ಪಡೆಯುವ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ರಸ್ತೆ ಗುಂಡಿ ಸಮಸ್ಯೆ ಕಾಣುತ್ತಿಲ್ಲವೇ? ಇದು ಕಳಪೆ ಗುಣಮಟ್ಟದ ಕೆಲಸವನ್ನು ಎತ್ತಿ ತೋರಿಸುತ್ತದೆʼ ಎಂದು ಜಿಲ್ಲಾಧ್ಯಕ್ಷ ಹಣಮಂತ ಮಟ್ಟೆ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಗುಂಡಿಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೆ ಮತ್ತು ಸಾರ್ವಜನಿಕ ಟೀಕೆಗಳು ಬಂದಾಗ ಮಾತ್ರ ದುರಸ್ತಿಗೆ ಮುಂದಾಗುತ್ತದೆಯೇ ಹೊರತು ಆಡಳಿತವು ತನ್ನದೇ ಆದ ಉಪಕ್ರಮದಲ್ಲಿ ದುರಸ್ತಿ ಕಾರ್ಯ ಮಾಡುತ್ತಿಲ್ಲ. ಈಗಲಾದರೂ ಎಚ್ಚೆತ್ತು ಶೀಘ್ರದಲ್ಲಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ರಸ್ತೆ ಗುಂಡಿ ಮುಚ್ಚಬೇಕು. ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಬಾವಿಗೆ ಬಿದ್ದು ಮಹಿಳೆ ಆತ್ಮಹತ್ಯೆ
ಈ ಸಂದರ್ಭದಲ್ಲಿ ಕೆಆರ್‌ಎಸ್ ಪಕ್ಷದ ಉಪಾಧ್ಯಕ್ಷ ಶಿವರಾಜ ಶ್ರೀಮಂಗಲೆ, ವೀರಭದ್ರ ಸ್ವಾಮಿ ಮತ್ತಿತರರಿದ್ದರು.