ಪಕ್ಷದ ಸಿದ್ಧಾಂತಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಂಡವರನ್ನು ಪಕ್ಷವೇ ಗುರುತಿಸಿ ಅರ್ಹ ಸ್ಥಾನಮಾನ ನೀಡುತ್ತದೆ ಎಂದು ವಿಜಯಪುರದ ಮುದ್ದೇಬಿಹಾಳ ಶಾಸಕ ನಾಡಗೌಡ ಹೇಳಿದರು.
ಮುದ್ದೇಬಿಹಾಳ ಪಟ್ಟಣದ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪ ಸಭಾಭವನದಲ್ಲಿ ಯುವ ಕಾಂಗ್ರೆಸ್ ಘಟಕದಿಂದ ಯುವ ಸಮ್ಮೇಳನ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಪಕ್ಷದಲ್ಲಿ ಕೆಲವರು ತಾವು 30-40ವರ್ಷ ದುಡಿದಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಪಕ್ಷದ ಸಿದ್ಧಾಂತದ ಜೊತೆಗೆ ಭಾವನಾತ್ಮಕ ಬೆಸುಗೆ ಇರಬೇಕು. ಲಾಭ ಸಿಗುತ್ತದೆ ಎಂದು ಪಕ್ಷದಲ್ಲಿದ್ದರೆ ನಿರಾಶೆಗೆ ಒಳಗಾಗಬೇಕಾಗುತ್ತದೆ. ಅಪೇಕ್ಷೆ ಇಟ್ಟುಕೊಂಡು ದುಡಿದವರಿಗೆ ನಿರಾಶೆ ಆಗುತ್ತದೆ. ಅವರಿಂದ ಪಕ್ಷಕ್ಕೂ ಹಾನಿಯಾಗುತ್ತದೆ. ಹಾಗಾಗಿ ಇಂದಿನ ಕಾರ್ಯಕರ್ತರು ಕಾಂಗ್ರೆಸ್ ಘಟಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದು ನಿಷ್ಠೆಯಿಂದ ಇದ್ದರೆ ಪಕ್ಷ ಗುರುತಿಸಿ ಸ್ಥಾನಮಾನ ನೀಡುತ್ತದೆ” ಎಂದು ಸಲಹೆ ನೀಡಿದರು.
ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮಂಜುನಾಥ ಹೆಚ್ ಎಸ್ ಮಾತನಾಡಿ, “ಬಿಜೆಪಿಯವರು ಆರಂಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದರು. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ ಇದೇ ಯೋಜನೆಗಳನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಗ್ಯಾರೆಂಟಿ ಯೋಜನೆಗಳ ಕುರಿತು ವಿಶ್ವಸಂಸ್ಥೆ ಪ್ರಶಂಸೆ ವ್ಯಕ್ತಪಡಿಸಿದೆ. ಕಾಂಗ್ರೆಸ್ ಸರ್ವ ಧರ್ಮ ಒಗ್ಗೂಡಿಸುವ ಕೆಲಸ ಮಾಡಿದೆ. ಆದರೆ ಪ್ರಧಾನಿ ಮೋದಿ, ದೇಶದಲ್ಲಿ ಕೋಮುವಾದ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ವಿಜಯಪುರ ಶಾಸಕ ಯತ್ನಾಳರು ಜನರನ್ನು ತಮ್ಮತ್ತ ಸೆಳೆಯಬೇಕು ಎಂಬ ಆಕಾಂಕ್ಷೆಯಿಂದ ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆ. ಅವರನ್ನು ಪಕ್ಷವೇ ದೂರ ಇಟ್ಟಿದೆ. ಕೋಮು ಪ್ರಚೋದಿತ ಹೇಳಿಕೆಗಳನ್ನು ಕೊಡುತ್ತಾರೆ. ವೋಟ್ ಚೋರಿ ಹಾಗೂ ಜಿಎಸ್ಟಿ ಬಗ್ಗೆ ದೇಶದಲ್ಲಿ ಧ್ವನಿಯೆತ್ತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. 2029 ಕ್ಕೆ ರಾಹುಲ್ ಗಾಂಧಿಯವರನ್ನು ಜನರು ಪ್ರಧಾನಿ ಮಾಡೇ ತೀರುತ್ತಾರೆ” ಎಂದರು.
ಇದನ್ನೂ ಓದಿ: ವಿಜಯಪುರ | ನೆರೆ ಹಾವಳಿ ವೀಕ್ಷಿಸಿದ ಬಿಜೆಪಿ ತಂಡ
ಈ ವೇಳೆ ರಾಜ್ಯ ಯುವ ಕಾರ್ಯದರ್ಶಿ ಸತ್ಯಜಿತ ಪಾಟೀಲ, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ನಿಗಮ್ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಭಜಂತ್ರಿ, ಸದಸ್ಯರಾದ ಬಾಪುರಾಯ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಸಚಿನ್ ಗೌಡ ಪಾಟೀಲ, ಎನ್ ಎಸ್ ಯು ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಸದ್ದಾಮ ಕುಂಟೋಜಿ, ಮೊಹಮ್ಮದ ಇಲಿಯಾಸ ಡವಳಗಿ, ದೀಪಕ ಗೌಡ, ಮೋಹಿನ್ ಶೇಕ್, ಬಾಹುಬಲಿ, ಶ್ರೀಧರ, ಪುರಸಭೆ ಅಧ್ಯಕ್ಷ ಮೆಹಬೂಬ ಗೊಳಸಂಗಿ, ಮಹಿಳಾ ಘಟಕದ ಅಧ್ಯಕ್ಷ ಅಕ್ಷತಾ ಚಲವಾದಿ, ಮಹಮ್ಮದ್ ರಫೀಕ ಶಿರೋಳ ಮುಂತಾದವರು ಇದ್ದರು.