ಜಪಾನ್‌ನ ಶಿಮೋನ್ ಸಾಕಾಗುಚಿ ಹಾಗೂ ಅಮೆರಿಕದ ಮೇರಿ ಇ. ಬ್ರಂಕೋ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರಿಗೆ 2025 ನೇ ಸಾಲಿನ ವೈದ್ಯಕೀಯ ವಿಭಾಗದ ನೊಬೆಲ್ ಪುರಸ್ಕಾರ ಘೋಷಿಸಲಾಗಿದೆ. ದೇಹದ ರಕ್ಷಣಾ ವ್ಯವಸ್ಥೆ ತನ್ನದೇ ಅಂಗಾಂಗಗಳ ಮೇಲೆ ದಾಳಿ ಮಾಡದಂತೆ ಹೇಗೆ ನಿಯಂತ್ರಣದಲ್ಲಿರುತ್ತದೆ ಎಂಬ ಮಹತ್ವದ ಪ್ರಶ್ನೆಗೆ ಸಂಶೋಧನೆ ಮೂಲಕ ತಿಳಿಯಪಡಿಸಿದ ಈ ಮೂವರಿಗೆ ವಿಶ್ವದ ಅತ್ಯುನ್ನತ ವಿಜ್ಞಾನ ಗೌರವ ಲಭಿಸಿದೆ.
ಇವರ ಸಂಶೋಧನೆ “ಪೆರಿಫೆರಲ್ ಇಮ್ಯೂನ್ ಟಾಲರೆನ್ಸ್” ಎಂಬ ತತ್ವವನ್ನು ವಿವರಿಸಿದ್ದು, “ರೆಗ್ಯುಲೇಟರಿ ಟಿ ಸೆಲ್‌ಗಳು” ಎಂಬ ವಿಶಿಷ್ಟ ಕೋಶಗಳು ದೇಹದ ಸ್ವಂತ ಅಂಗಾಂಗಗಳ ಮೇಲೆ ರಕ್ಷಣಾ ವ್ಯವಸ್ಥೆ ದಾಳಿ ಮಾಡದಂತೆ ತಡೆಯುತ್ತವೆ ಎಂಬುದು ಬಹಿರಂಗವಾಯಿತು..
ಶಿಮೋನ್ ಸಾಕಾಗುಚಿ ಅವರು 1995ರಲ್ಲಿ ಪ್ರಚಲಿತ ವೈಜ್ಞಾನಿಕ ನಿಲುವಿಗೆ ಸವಾಲು ಹಾಕಿ, ರಕ್ಷಣಾ ನಿಯಂತ್ರಣವು ಕೇವಲ ಥೈಮಸ್‌ನಲ್ಲಿ(central tolerance) ಮೂಲಕವಷ್ಟೆ ನಡೆಯುವುದಲ್ಲದೆ ದೇಹದ ಹೊರಾಂಗಣ ಭಾಗಗಳಲ್ಲಿಯೂ ನಿಯಂತ್ರಣ ವ್ಯವಸ್ಥೆಯು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸಿದರು. ಅವರು ಹೊಸ ರೀತಿಯ ಕೋಶಗಳಾದ “ರೆಗ್ಯುಲೇಟರಿ ಟಿ ಸೆಲ್‌ಗಳು” ದೇಹವನ್ನು ಸ್ವಯಂ ದಾಳಿಯಿಂದ ಕಾಪಾಡುತ್ತವೆ ಎಂಬುದನ್ನು ಗುರುತಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಗ್ಯಾರಂಟಿ ವಿಚಾರದಲ್ಲಿ ಕರ್ನಾಟಕದಿಂದ ಬಿಹಾರಕ್ಕೆ ಬಿಜೆಪಿಯ ಬದಲಾದ ನಿಲುವು
2001ರಲ್ಲಿ ಅಮೆರಿಕಾದ ವಿಜ್ಞಾನಿಗಳು ಮೇರಿ ಬ್ರಂಕೋ ಮತ್ತು ಫ್ರೆಡ್ ರಾಮ್ಸ್ಡೆಲ್ ಅವರು ಫಾಕ್ಸ್‌ಪಿ3 (Foxp3) ಎಂಬ ಪ್ರಮುಖ ಜೀನನ್ನು ಪತ್ತೆಹಚ್ಚಿದರು. ಈ ಜೀನಿನ ದೋಷವು ದೇಹದ ರಕ್ಷಣಾ ವ್ಯವಸ್ಥೆಯ ನಿಯಂತ್ರಣ ಕಳೆದು ತೀವ್ರ ಸ್ವಯಂ ರೋಗಗಳಿಗೆ ಕಾರಣವಾಗುತ್ತದೆ ಎಂಬುದನ್ನು ಅವರು ಸಾಬೀತುಪಡಿಸಿದರು. ಇದೇ ಜೀನಿನ ಬದಲಾವಣೆ ಮಾನವರಲ್ಲಿ IPEX ಸಿಂಡ್ರೋಮ್ ಎನ್ನುವ ಅಪರೂಪದ ರೋಗಕ್ಕೆ ಕಾರಣವಾಗುತ್ತದೆ ಎಂಬುದನ್ನೂ ಕಂಡುಹಿಡಿದರು.
2003ರಲ್ಲಿ ಸಾಕಾಗುಚಿ ಅವರು ಫಾಕ್ಸ್‌ಪಿ3 ಜೀನ್ ಮತ್ತು ರೆಗ್ಯುಲೇಟರಿ ಟಿ ಸೆಲ್‌ಗಳ ಅಭಿವೃದ್ಧಿಯ ನಡುವೆ ನೇರ ಸಂಬಂಧವಿದೆ ಎಂಬುದನ್ನು ದೃಢಪಡಿಸಿದರು. ಇದರ ಮೂಲಕ ರಕ್ಷಣಾ ವ್ಯವಸ್ಥೆ ಹೇಗೆ “ತನ್ನದೇ ದೇಹದ” ಮೇಲೆ ದಾಳಿ ಮಾಡದೆ “ವಿದೇಶಿ ಶತ್ರುಗಳನ್ನು” ಮಾತ್ರ ಗುರಿಯಾಗಿಸುತ್ತದೆ ಎಂಬುದು ಸ್ಪಷ್ಟವಾಯಿತು.
ನೊಬೆಲ್ ಸಮಿತಿಯ ಅಧ್ಯಕ್ಷ ಒಲ್ಲೆ ಕ್ಯಾಂಪೆ ಅವರು “ಈ ಸಂಶೋಧನೆಗಳು ಮಾನವ ದೇಹದ ರಕ್ಷಣಾ ವ್ಯವಸ್ಥೆಯ ಸಮತೋಲನವನ್ನು ಅರ್ಥಮಾಡಿಕೊಳ್ಳುವಲ್ಲಿ ನಿರ್ಣಾಯಕವಾದ ಪಾತ್ರ ವಹಿಸಿವೆ” ಎಂದು ಹೇಳಿದರು.
ಈ ಕ್ರಾಂತಿಕಾರಿ ಸಂಶೋಧನೆ ಈಗ ಕ್ಯಾನ್ಸರ್ ಚಿಕಿತ್ಸೆ, ಸ್ವಯಂ ರೋಗಗಳ ನಿಯಂತ್ರಣ ಹಾಗೂ ಅಂಗಾಂಗ ಮಾರ್ಪಡಿಸುವ ಶಸ್ತ್ರಚಿಕಿತ್ಸೆಗಳಲ್ಲಿ ಹೊಸ ದಿಕ್ಕು ತೋರಿಸುತ್ತಿದ್ದು, ಕೋಟ್ಯಂತರ ಜನರಿಗೆ ಹೊಸ ಆಶಾಕಿರಣವನ್ನು ನೀಡಿದೆ.