ಬಿಹಾರದ ವಿಧಾನಸಭೆ ಚುನಾವಣೆ ನ. 6 ಮತ್ತು ನ. 11 ರಂದು 2 ಹಂತಗಳಲ್ಲಿ ನಡೆಯಲಿದ್ದು, ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ.
ಈ ಕುರಿತು ದೆಹಲಿಯಲ್ಲಿ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಬಿಹಾರ ವಿಧಾನಸಭೆಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 6 ರಂದು ಮೊದಲ ಹಂತದ ಮತದಾನ ಮತ್ತು ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ನಂತರ ಮೊದಲ ಬಾರಿಗೆ ಬಿಹಾರ ಚುನಾವಣೆ ನಡೆಯುತ್ತಿದೆ. ಈ ಪರಿಷ್ಕರಣೆಯಲ್ಲಿ 68.5 ಲಕ್ಷ ಮತದಾರರ ಹೆಸರನ್ನು ಡಿಲಿಟ್ ಮಾಡಲಾಗಿದೆ ಮತ್ತು 21.5 ಲಕ್ಷ ಹೊಸ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಬಿಹಾರ ಮತದಾರರ ಪಟ್ಟಿಗಳಿಗೆ ಸಂಬಂಧಿತ ಆಕ್ಷೇಪಣೆಗಳಿಗೆ ಇನ್ನೂ ಅವಕಾಶವಿದೆ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ರಾಜ್ಯದಲ್ಲಿ 243 ಕ್ಷೇತ್ರಗಳಿವೆ. ಅವುಗಳಲ್ಲಿ 38 ಪರಿಶಿಷ್ಟ ಜಾತಿ ಮತ್ತು ಎರಡು ಪರಿಶಿಷ್ಟ ಪಂಗಡ ಕ್ಷೇತ್ರಗಳು ಸೇರಿವೆ. ಬಿಹಾರ ವಿಧಾನಸಭೆಯ ಅವಧಿ ನವೆಂಬರ್ 22, 2025ರಂದು ಕೊನೆಗೊಳ್ಳಲಿದೆ.
ಅಕ್ಟೋಬರ್ 10ರಂದು ಮೊದಲನೇ ಹಂತಕ್ಕೆ ಹಾಗೂ ಅಕ್ಟೋಬರ್ 13ರಂದು ಎರಡನೇ ಹಂತಕ್ಕೆ ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 (ಮೊದಲನೇ ಹಂತ) ಹಾಗೂ ಅಕ್ಟೋಬರ್ 20 (ಎರಡನೇ ಹಂತ) ಕೊನೆಯ ದಿನಾಂಕವಾಗಿದೆ.
ಬಿಹಾರದಲ್ಲಿ ಒಟ್ಟು 7.42 ಕೋಟಿ ಮತದಾರರಿದ್ದು, ಈ ಪೈಕಿ 3.9 ಕೋಟಿ ಪುರುಷ ಮತ್ತು 3.5 ಕೋಟಿ ಮಹಿಳಾ ಮತದಾರರಿದ್ದಾರೆ. ಹೊಸದಾಗಿ ಸೇರಿಸಲ್ಪಟ್ಟ ಮತದಾರರಿಗೆ ಮತದಾರರ ಗುರುತಿನ ಚೀಟಿ ನೀಡಲಾಗುವುದು. ಮತದಾರರ ಚೀಟಿಯಲ್ಲಿ ಮಾಹಿತಿ ಬದಲಾವಣೆಗೆ 15 ದಿನಗಳ ಕಾಲಾವಕಾಶ ನೀಡಲಾಗುವುದು. ಶೇ. 100ರಷ್ಟು ಮತದಾನ ಕೇಂದ್ರದಲ್ಲಿ ವೆಬ್ ಕಾಸ್ಟಿಂಗ್‌ಗೆ ಅವಕಾಶ ಕಲ್ಪಿಸಲಾಗುವುದು. ಮತಗಟ್ಟೆಯ ಒಳಗೆ ಮತದಾರರು ಮೊಬೈಲ್ ಫೋನ್ ಕೊಂಡೊಯ್ಯುವಂತಿಲ್ಲ. ಮತದಾನದ ಬಳಿಕ ಸಿಬ್ಬಂದಿಯಿಂದ ಮೊಬೈಲ್ ಪಡೆಯತಕ್ಕದ್ದು ಎಂದು ಜ್ಞಾನೇಶ್ ಕುಮಾರ್ ತಿಳಿಸಿದ್ದಾರೆ.
ಬಿಹಾರ ಚುನಾವಣೆಯ ಮುಖ್ಯಾಂಶಗಳು:
243 ವಿಧಾನಸಭೆ ಕ್ಷೇತ್ರಗಳು
ಒಟ್ಟು ಮತದಾರರು: 7.43 ಕೋಟಿ
ಹೊಸ ಮತದಾರರು: 14 ಲಕ್ಷ
ಮತಗಟ್ಟೆಗಳು: 90,712