ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ಅಣೆಕಟ್ಟೆ ಬಳಿ ಇಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮಾಧ್ಯಮದವರೊಂದಿಗೆ ಮಾತನಾಡಿ ಎಲ್ಲಾ ಯೋಜನೆಗಳಿಗೂ ವಿರೋಧ ಮಾಡುವವರು ಇದ್ದೇ ಇರ್ತಾರೆ, ವಿರೋಧ ಮಾಡುವವರ ಜೊತೆ ನಮ್ಮ ಅಧಿಕಾರಿಗಳು ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ. ಮುಂದಿನ ನಾಲ್ಕೈದು ವರ್ಷದ ನಂತರ ವಿದ್ಯುತ್ ಕೊರತೆ ಆಗಬಾರದೆಂದು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾಡುತ್ತಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.ಈ ಯೋಜನೆಯಿಂದ ರಾಜ್ಯಕ್ಕೆ ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಲಭ್ಯವಾಗುತ್ತದೆ.
ಈ ಯೋಜನೆಗೆ ಯಾವುದೇ ನೀರಿನ ಹರಿವನ್ನು ನಾವು ನಿಲ್ಲಿಸುತ್ತಿಲ್ಲ. ಕೆಳಗಡೆಯಿಂದ ನೀರನ್ನು ಬ್ಯಾಲೆನ್ಸ್ ಡ್ಯಾಂಗೆ ಎತ್ತಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ ಅಷ್ಟೇ. ಯೋಜನೆಗೆ 120 ಎಕರೆ ಭೂಮಿ ಬೇಕು. ಪೈಪ್ ಲೈನ್ ಮೇಲೂ ಸಹ ನಾವು ಅರಣ್ಯ ಬೆಳೆಸಬಹುದು. ಇದು ಅತ್ಯಂತ ಸಿಂಪಲ್ ಯೋಜನೆ.
ಈಗ ಶರಾವತಿಯಿಂದ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಾದ ಮೇಲೆ ಮೂರು ಸಾವಿರ ಮೆಗಾವ್ಯಾಟ್ ಉತ್ಪಾದನೆ ಆಗುತ್ತದೆ. ಈ ಯೋಜನೆ ಮುಕ್ತಾಯವಾಗಬೇಕಾದರೆ ಮೂರ್ನಾಲ್ಕು ವರ್ಷ ಬೇಕಾಗುತ್ತದೆ. ಮುಂದಾಲೋಚನೆಯಿಂದ ಯೋಜನೆ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.
ನಮ್ಮ ರಾಜ್ಯದಲ್ಲಿ ಏಳೂವರೆ ಕೋಟಿ ಜನರಲ್ಲಿ ವಿರೋಧ ಮಾಡೋದಕ್ಕೆ ಸ್ವಲ್ಪ ಜನ ಇರ್ತಾರೆ. ವಿರೋಧ ಮಾಡುವವರಿಗೆ ಅನುಮಾನಗಳಿದ್ದರೆ, ಅದನ್ನು ನಾವು ಪರಿಹಾರ ಮಾಡುತ್ತೇವೆ. ಕೇಂದ್ರ ಹಾಗೂ ರಾಜ್ಯದ ಪರಿಸರ ಇಲಾಖೆ ಅನುಮತಿ ಪಡೆದು ನಾವು ಯೋಜನೆ ಮಾಡುತ್ತೇವೆ. ಕೇಂದ್ರದ ಪರಿಸರ ವಿಭಾಗ ಅನುಮತಿ ನೀಡುವಾಗ ನಿಯಮಾವಳಿ ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ.
ಪರಿಸರದ ವಿಚಾರದಲ್ಲಿ ನಾವು ಅವರಿಗೆ ಒತ್ತಡ ಹಾಕಲು ಬರೋದಿಲ್ಲ. ಅವರು ಏನು ಬೇಕೋ ಅದನ್ನು ಅಧ್ಯಯನ ಮಾಡಿ ವರದಿ ಕೊಡುತ್ತಾರೆ. ವರದಿ ನೀಡಿದ ನಂತರ ನಾವು ಯೋಜನೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.