“ದಲಿತ ವ್ಯಕ್ತಿ ಈ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕೂತಿರುವುದು ಸನಾತನಿಗಳಿಗೆ ಇಷ್ಟವಿಲ್ಲ. ಸಂವಿಧಾನಕ್ಕೆ ಯಾರು ಧಿಕ್ಕಾರ ಹೇಳಿದರೋ ಅದೇ ಶಕ್ತಿಗಳು ಈ ಕೆಲಸ ಮಾಡಿವೆ" ಎಂದು ಎಸ್.ಬಾಲನ್ ತಿಳಿಸಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್.ಗವಾಯಿ ಅವರ ಮೇಲೆ ದಲಿತ ಎಂಬ ಕಾರಣಕ್ಕಾಗಿಯೇ ಶೂ ಎಸೆಯಲು ಯತ್ನಿಸಲಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಮತ್ತು ಹಿರಿಯ ವಕೀಲ ಎಸ್.ಬಾಲನ್ ಖಂಡಿಸಿದ್ದಾರೆ.
‘ಈದಿನ’ದ ಜೊತೆ ಮಾತನಾಡಿದ ಜಸ್ಟಿಸ್ ದಾಸ್ ಅವರು, “ಗವಾಯಿಯವರು ಮಾತನಾಡಿರುವ ವಿಚಾರ ಎಲ್ಲ ಪತ್ರಿಕೆಗಳಲ್ಲೂ ಬಂದಿತ್ತು. ಅದನ್ನು ತಪ್ಪಾಗಿ ಅರ್ಥೈಸಿದಾಗ ಸಿಜೆಐ ಸ್ಪಷ್ಟನೆಯನ್ನೂ ನೀಡಿದ್ದಾರೆ. ಇಷ್ಟಾದರೂ ಅವರ ಮೇಲೆ ಹಲ್ಲೆ ಮಾಡಲು ಯತ್ನಿಸಲಾಗಿದೆ. ಒಬ್ಬ ದಲಿತ ಸಿಜೆಐ ಆಗಿರುವುದನ್ನು ಸಹಿಸಿಕೊಳ್ಳಲಾಗದಷ್ಟು ಅಸಹನೆ, ಅಸಹಿಷ್ಣುತೆ ಸಮಾಜದಲ್ಲಿದೆ. ಇಂತಹ ಪ್ರವೃತ್ತಿಯನ್ನು ಯಾರೂ ಪ್ರೋತ್ಸಾಹಿಸಬಾರದು. ಎಲ್ಲರೂ ಒಗ್ಗೂಡಿ ಖಂಡಿಸಬೇಕು” ಎಂದು ತಿಳಿಸಿದರು.
“ಮುಖ್ಯ ನ್ಯಾಯಮೂರ್ತಿಯವರ ಹೇಳಿಕೆ ಒಪ್ಪಿಗೆಯಾಗದಿದ್ದರೆ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಟೀಕೆ ಮಾಡಬಹುದು, ಪ್ರಶ್ನೆ ಮಾಡಬಹುದು. ಈ ಹಿಂದೆ ಸಿಜೆಐ ಆಗಿದ್ದ ಚಂದ್ರಚೂಡ್ ಅವರು ಕೆಲವು ಹೇಳಿಕೆ ಕೊಟ್ಟಿದ್ದನ್ನು ವ್ಯಾಪಕ ಚರ್ಚೆಗೆ ಒಳಪಡಿಸಲಾಗಿತ್ತು. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ರಚನಾತ್ಮಕವಾಗಿ, ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಆ ಕೆಲಸ ಮಾಡಬಹುದು. ಆದರೆ ಈಗ ನಡೆದಿರುವ ಘಟನೆ ಒಪ್ಪಲಾಗದ್ದು” ಎಂದು ಹೇಳಿದರು.
“ವಿಮರ್ಶೆಗೆ ಒಳಪಡಿಸಬೇಕು ಎನ್ನುವಂತಹ ಹೇಳಿಕೆಯನ್ನೂ ಸಿಜೆಐ ಕೊಟ್ಟಿರಲಿಲ್ಲ. ತಮ್ಮ ಅನುಭವದ ನೆಲೆಯಲ್ಲಿ ಈ ದೇಶದ ಧರ್ಮ, ದೇವರು, ಜಾತಿ ವ್ಯವಸ್ಥೆ, ಮೂಢನಂಬಿಕೆ, ತಾರತಮ್ಯ- ಇವೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತಮ್ಮ ಅಭಿಪ್ರಾಯವನ್ನು ಹೇಳಿದ್ದರು. ಇದರಲ್ಲಿ ತಪ್ಪೇನಿದೆ?” ಎಂದು ಪ್ರಶ್ನಿಸಿದರು.
“ಈ ಆರೋಪಿಯನ್ನು ನ್ಯಾಯಾಂಗ ನಿಂದನೆಗೆ ಒಳಪಡಿಸಬಹುದು. ನೀತಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆಂದು ಬಾರ್ ಕೌನ್ಸಿಲ್‌ನವರು ಈ ಸದರಿ ವಕೀಲನ ಸನ್ನದ್ಧನ್ನು ರದ್ದುಪಡಿಸಬಹುದು. ಅಂತಹ ಕ್ರಮಗಳನ್ನು ಜರುಗಿಸಲೇಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿರಿ: ಸುಪ್ರೀಂ ಕೋರ್ಟ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮೇಲೆ ವಕೀಲನಿಂದ ಶೂ ಎಸೆತ ಯತ್ನ – ಈ ದಿನ.ಕಾಮ್
“ಕೋರ್ಟ್ ಹಾಲ್‌ನಲ್ಲಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿರುವುದು, ಕೂಗಾಡಿರುವುದು ಕೆಳಹಂತದ ನ್ಯಾಯಾಲಯಗಳಲ್ಲಿ ಈ ಹಿಂದೆಯೂ ನಡೆದಿವೆ. ಆದರೆ ಆ ಘಟನೆಗಳೆಲ್ಲ ವೈಯಕ್ತಿಕ ನೆಲೆಯಲ್ಲಿದ್ದವು. ಆರೋಪಿ ಅಥವಾ ಅಪರಾಧಿಗಳು ವೈಯಕ್ತಿಕ ಕೋಪ, ದ್ವೇಷಕ್ಕೆ ಹೀಗೆ ವರ್ತಿಸಿದ್ದುಂಟು. ಆದರೆ ಈ ಘಟನೆಗೂ ಈ ಹಿಂದೆ ಇತರೆ ನ್ಯಾಯಾಲಯಗಳಲ್ಲಿ ನಡೆದಿರುವ ಘಟನೆಗಳಿಗೂ ವ್ಯತ್ಯಾಸವಿದೆ. ಇಲ್ಲಿ ವೈಯಕ್ತಿನ ನೋವು, ಆಕ್ರೋಶಕ್ಕಿಂತ ಸಾಮಾಜಿಕ ಸ್ಥಿತಿಗಳು ಕಾಣುತ್ತಿವೆ” ಎಂದು ಅಭಿಪ್ರಾಯಪಟ್ಟರು.
ಹೈಕೋರ್ಟ್‌ನ ಹಿರಿಯ ವಕೀಲ ಬಾಲನ್ ಮಾತನಾಡಿ, “ದಲಿತ ವ್ಯಕ್ತಿ ಈ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕೂತಿರುವುದು ಸನಾತನಿಗಳಿಗೆ ಇಷ್ಟವಿಲ್ಲ. ಸನಾತನಾ ಧರ್ಮಕ್ಕೆ ಅವಮಾನ ಎಂದು ಶೂ ಎಸೆದಿದ್ದಾನೆ. ಗಾಂಧಿಯನ್ನು ಯಾರು ಕೊಂದರು? ಶಂಭೂಕನ ತಲೆ ಕತ್ತರಿಸಿದವರು ಯಾರು? ಏಕಲವ್ಯನ ಬೆರಳು ಕತ್ತರಿಸಿದವರು ಯಾರು? ಅಂಬೇಡ್ಕರ್ ಅವರಿಗೆ ಧಿಕ್ಕಾರ ಹೇಳಿದವರು ಯಾರು? ಸಂವಿಧಾನಕ್ಕೆ ಯಾರು ಧಿಕ್ಕಾರ ಹೇಳಿದರೋ ಅದೇ ಶಕ್ತಿಗಳು ಈ ಕೆಲಸ ಮಾಡಿವೆ. ಸನಾತನ ಧರ್ಮಗಳ ಮನಸ್ಥಿತಿಗಳ ಅನಾವರಣ ಆಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
