ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಮಹಿಳೆಯರಲ್ಲಿ ರಕ್ತ ಹೀನತೆ ಹಾಗೂ ತಾಯಿ- ಶಿಶುಮರಣ ಹೆಚ್ಚಾಗುತ್ತಿರುವುದನ್ನು ಖಂಡಿಸಿ ರಾಜ್ಯ ಮಹಿಳಾ ಒಕ್ಕೂಟ(ಕುಟುಂಬ ಬಲವರ್ಧನೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಚಳವಳಿ)ದ ವತಿಯಿಂದ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದಾರೆ.
ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಅಣಕು ಗರ್ಭಿಣಿ ಹಾಗೂ ನವಜಾತ ಶಿಶುವಿನ ಪ್ರತಿಕೃತಿಗೆ ಹೂವಿನ ಹಾರ ಹಾಕಿ ಸತ್ತಂತೆ ಬಿಂಬಿಸಿ ಶೋಕ ವ್ಯಕ್ತಪಡಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲೆಯ ಲಿಂಗಸುಗೂರು, ರಾಯಚೂರು ತಾಲೂಕು, ಮಾನ್ವಿ ಸೇರಿ ಹಲವೆಡೆ ಬಾಣಂತಿಯರು, ನವಜಾತ ಶಿಶು ಮೃತಪಟ್ಟ ಕುಟುಂಬಸ್ಥರು ಭಾಗವಹಿಸಿ ಸರ್ಕಾರದ, ಅಧಿಕಾರಿಗಳ ನಿಷ್ಕಾಳಜಿ, ಅವ್ಯವಸ್ಥೆಯಿಂದಾಗಿ ಜೀವಹಾನಿಗಳಾಗಿದೆ ಎಂದು ಅಳುತ್ತಾ ವ್ಯವಸ್ಥೆಯ ವಿರುದ್ದ ತಮ್ಮ ಅಳಲು ವ್ಯಕ್ತಪಡಿಸಿದ್ದು ಮನಕಲುಕುವಂತಿತ್ತು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮೌಕ್ಷಮ್ಮ ಮಸ್ಕಿ ರಾಯಚೂರು ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಿಶೋರಿಯರಲ್ಲಿ, ಗರ್ಭಿಣಿಯರಲ್ಲಿ ರಕ್ತಹೀನತೆಯಿಂದಾಗಿ ತಾಯಿ ಮರಣ ಹಾಗೂ ಶಿಶು ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಅತಿಹೆಚ್ಚು ಶಿಶುಮರಣಗಳು ಹೆಚ್ಚಾಗಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿ ವಹಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ. ಮಕ್ಕಳ ಹಾಗೂ ಮಹಿಳೆಯರ ಅಪೌಷ್ಟಿಕತೆ ನಿವಾರಣೆಗಾಗಿ ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು ರಕ್ತ ಹೀನತೆ ಹಾಗೂ ಮಕ್ಕಳು ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆ, ಶಿಶುಮರಣ ಹಾಗೂ ತಾಯಿ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಈ ಬಗ್ಗೆ 2025ರ ಜನವರಿ 25 ರಂದು ರಾಯಚೂರಿನ ಜಿಲ್ಲಾ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಅನಿರ್ಧಿಷ್ಠಾವಧಿ ಧರಣಿ ನಡೆಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಸ್ಪಂದಿಸಿ ನಾವು ಈಗಾಗಲೇ ಅಪೌಷ್ಟಿಕತೆ ನಿವಾರಣೆಗೆ ಪ್ರಯೋಗಿಕ ಯೋಹನೆ ಅನುಷ್ಠಾನಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದರೂ ಆದರೆ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ ಎಂದು ದೂರಿದರು.

ಕಳೆದ ಎರಡು ವರ್ಷಗಳಿಂದ ಅನೇಕ ಹೋರಾಟ ಮಾಡಿ ಈ ಭಾಗದ ಸಚಿವರು, ಶಾಸಕರು ಕಾಲಮಿತಿಯಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರೂ ಕಾರ್ಯರೂಪಕ್ಕೆ ಬರಲಿಲ್ಲ. ತಾಯಿ ಹಾಗೂ ಶಿಶುಮರಣ ಹೆಚ್ಚಾಗುತ್ತಲೇ ಇದೆ ಸರ್ಕಾರ ಕೂಡಲೇ ನಿರ್ಧಿಷ್ಟ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು
ಧರಣಿಯಲ್ಲಿ ಮಹಿಳಾ ಒಕ್ಕೂಟದ ಸಂಚಾಲಕಿ ವಿದ್ಯಾ ಪಾಟೀಲ್, ಶಾಂಭವಿ, ರೇಣುಕಾ, ಗುರುರಾಜ, ಮಾರೆಮ್ಮ, ಬಸವರಾಜ, ಈರಮ್ಮ, ಗಿರಿಜಮ್ಮ , ಪಾರ್ವತಿ ಸಿರವಾರ, ಲಕ್ಷ್ಮೀ ಹಲ್ಕಾವಾಟಗಿ ಮತ್ತಿತರರು ಪಾಲ್ಗೊಂಡಿದ್ದರು.
