ಸುಮಾರು ಒಂದುವರೆ ವರ್ಷಗಳಿಂದ ಬೀಡು ಬಿಟ್ಟಿದ್ದ, ಪುಂಡಾನೆ ಕೊನೆಗೂ ಸೆರೆಯಾಗಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡಹಳ್ಳದಲ್ಲಿ ನಡೆದಿದೆ.
ಒಂಟಿ ಸಲಗ ವಗಡೆ, ಕಾನೂರು, ಬಾಳೆಹಿತ್ತಲು, ಸಾತ್ವಾನಿ, ಗುಂಡ್ವಾನಿ, ಗುಬ್ಬಿಗಾ, ಹೊರಬೈಲು, ನೇರ್ಲೆ, ಗೋಣಿಕೊಪ್ಪ, ಚಿಟ್ಟಿಕೊಡಿಗೆ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ನಿರಂತರವಾಗಿ ಬೆಳೆ ಹಾನಿ ಮಾಡುತ್ತಿದ್ದು, ರೈತರ ತೋಟಗಳಿಗೆ ಅಪಾರ ನಷ್ಟ ಉಂಟಾಗಿತ್ತು. ಇದರಿಂದ ಗ್ರಾಮಸ್ಥರು ಅರಣ್ಯ ಇಲಾಖೆ ಹಾಗೂ ಶೃಂಗೇರಿ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಸ್ಥಳೀಯರ ಒತ್ತಾಯದ ಮೇರೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಆನೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಆದೇಶಿಸಿದ್ದರು.
ಹೀಗಾಗಿ ಸಕ್ರೆಬೈಲಿನಿಂದ ಮೂರು ಕುಮ್ಮಿ ಆನೆಗಳು ಹಾಗೂ ಕುಶಾಲನಗರದ ದುಬಾರೆಯಿಂದ ಮೂರು ಆನೆಗಳು ಸೇರಿ ಒಟ್ಟು ಆರು ಕುಮ್ಮಿಗಳು ಕಾರ್ಯಾಚರಣೆಗೆ ಆಗಮಿಸಿದ್ದವು. ಸೋಮವಾರ ಬೆಳಿಗ್ಗೆ ಗುಡ್ಡೆಹಳ್ಳ ಬಳಿ ಅರವಳಿಕೆ ಹೊಡೆದು ಆನೆಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l 1% ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು; ಎದ್ದೇಳು ಕರ್ನಾಟಕ
ಈ ಕುರಿತು ಕೊಪ್ಪ ಡಿಎಫ್‌ಒ ಅವರ ಮಾರ್ಗದರ್ಶನದಲ್ಲಿ ಎಲಿಫಂಟ್ ಟಾಸ್‌ಫೋರ್ಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆನೆ ಸರಿಯಾದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸಧ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಹಾಗೆಯೇ, ಒಂಟಿ ಸಲಗದ ಕಾರ್ಯಾಚರಣೆಗೆ ಆಗಮಿಸಿದ ದುಬಾರೆಯ ಮತ್ತು ಸಕ್ರೆಬೈಲಿನಿಂದ ಆಗಮಿಸಿದ ಮಾವುತರಿಗೂ ಹಾಗೂ ಕಾವಾಡಿಗರಿಗೂ ಕಾರ್ಯಪಡೆಗೆ ಬೆಂಬಲ ನೀಡುತ್ತಿರುವ ಸ್ಥಳೀಯ ಗ್ರಾಮಸ್ಥರಿಗೂ ಮಾನ್ಯ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.