ಧರ್ಮಸ್ಥಳದ ಸೌಜನ್ಯ ಕೊಲೆಯಾದ ದಿನವನ್ನು ರಾಜ್ಯದ ವಿವಿಧ ಸಂಘಟನೆಗಳು ಸೇರಿ ಜನಾಗ್ರಹ ದಿನವನ್ನಾಗಿ ಆಚರಿಸಲು ಸಿದ್ಧತೆ ನಡೆಸಿವೆ. ಅಕ್ಟೋಬರ್ 9 ರಂದು ರಾಜ್ಯಾದ್ಯಂತ ಪ್ರತಿಭಟನೆ /ಸತ್ಯಾಗ್ರಹ / ದೀಪ ಹಚ್ಚಿ ಸಂತಾಪ ಸೂಚಿಸಲು ಹಲವು ಸಂಘಟನೆಗಳು ತಯಾರಿ ನಡೆಸಿವೆ.
ಸೌಜನ್ಯ ಕೊಲೆ ಸೇರಿದಂತೆ ಧರ್ಮಸ್ಥಳದ ಸುತ್ತಲೂ ನಡೆದ ಎಲ್ಲಾ ಅಸಹಜ ಸಾವುಗಳ ಸಮಗ್ರ ಮರು ತನಿಖೆಯನ್ನು ಎಸ್ಐಟಿ ಕೈಗೆತ್ತಿಕೊಳ್ಳಲು ಸರ್ಕಾರ ಆದೇಶಿಸಲೇಬೇಕು ಎಂದು ಸಂಘಟನೆಗಳು ಒತ್ತಾಯಿಸಲಿವೆ.
ಈ ಬಗ್ಗೆ ಅಕ್ಟೋಬರ್ 2, ಗಾಂಧಿ ಜಯಂತಿಯ ದಿನ ಸಮಾನ ಮನಸ್ಕ ಸಂಘಟನೆಯ ಪ್ರತಿನಿಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಕರೆ ನೀಡಿದ್ದರು.
“ರಾಷ್ಟ್ರಪಿತ ಮಹಾತ್ಮ ಗಾಂಧಿ ಕಂಡ ಕನಸು ಕನಸಾಗಿಯೇ ಉಳಿದುಬಿಟ್ಟಿದೆ. ಮಹಿಳೆಯರ ಬಗ್ಗೆ, ಮಹಿಳಾ ಸುರಕ್ಷತೆಯ ಬಗ್ಗೆ ಗಾಂಧೀಜಿ ಅಪಾರ ಕಾಳಜಿ ಹೊಂದಿದ್ದರು. ಆದರೆ ನಮ್ಮನ್ನಾಳುವ ಸರ್ಕಾರಗಳ ಘೋರ ನಿರ್ಲಕ್ಷ್ಯದಿಂದಾಗಿ ಮಹಿಳಾ ಸುರಕ್ಷತೆ ಎಂಬುದು ಕನಸಾಗಿಯೇ ಉಳಿದಿದೆ. ಕರ್ನಾಟಕದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಹೆಣ್ಣುಮಕ್ಕಳಿಗೆ ನ್ಯಾಯ ಸಿಕ್ಕಿಲ್ಲ. ದಶಕಗಳೇ ಕಳೆದರೂ ಅಪರಾಧಿಗಳನ್ನು ಪತ್ತೆಹಚ್ಚಲಾಗಿಲ್ಲ. ಈ ಉದ್ದೇಶಕ್ಕಾಗಿ ಹಾಲಿ ರಚನೆಯಾಗಿರುವ SIT ಕೂಡ ದಿಕ್ಕು ತಪ್ಪಿರುವುದು ಎದ್ದುಕಾಣುತ್ತದೆ. ಧರ್ಮಸ್ಥಳದ ನೆಲದಲ್ಲಿ ಕ್ರೂರವಾಗಿ ಹತ್ಯೆಯಾದ ಕುಮಾರಿ ಸೌಜನ್ಯ ಮತ್ತು ಇತರೆ ಅಮಾಯಕ ಜೀವಗಳಿಗೆ ನ್ಯಾಯ ಸಿಗುವುದು ಮರೀಚಿಕೆಯಾಗುತ್ತಿದೆ. ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದ ಫಾಸಲೆಯಲ್ಲಾದ ಅಸಹಜ ಸಾವು, ಕೊಲೆ ಇತ್ಯಾದಿಗಳ ಸಮಗ್ರ ತನಿಖೆ ಕೈಗೆತ್ತಿಕೊಳ್ಳಲು ಈ SIT ವಿಫಲವಾಗಿದೆ. ಮಾತ್ರವಲ್ಲ, SIT ರಚಿಸಿದ ಸರ್ಕಾರವೇ ಇಂಥಾ ಸಮಗ್ರ ತನಿಖೆಗೆ ತಾಂತ್ರಿಕ ಕಾರಣಗಳೆಂಬ ಅಡ್ಡಗೋಡೆ ನಿರ್ಮಿಸಿದೆ. ಸಾಕ್ಷಿ ಹೇಳಲು ಮುಂದೆ ಬಂದ ವ್ಯಕ್ತಿಗಳು ತಮ್ಮ ದೂರನ್ನು ಪರಿಗಣಿಸುವಂತೆ ಹೈಕೋರ್ಟ್ ಮೊರೆ ಹೋಗಬೇಕಾದ ದುಸ್ಥಿತಿಯಿದೆ. ಇಂಥಾ ಸನ್ನಿವೇಶದಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಮೂಕಪ್ರೇಕ್ಷಕರಾಗಿರಲು ಸಾಧ್ಯವಿಲ್ಲ.
ಇದೇ ಅಕ್ಟೋಬರ್ 9 ಕ್ಕೆ ಕುಮಾರಿ ಸೌಜನ್ಯಳ ದಾರುಣ ಹತ್ಯೆಯಾಗಿ 13 ವರ್ಷಗಳು ತುಂಬುತ್ತವೆ. ಈ ಅಕ್ಟೋಬರ್ 9 ರಂದು ಸಾರ್ವಜನಿಕರು, ಸಂಘಸಂಸ್ಥೆಗಳು, ಮಹಿಳಾ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಒಟ್ಟುಗೂಡಿ ತಂತಮ್ಮ ಊರುಗಳಲ್ಲಿ ಸಾಧ್ಯವಿರುವ ರೀತಿಯಲ್ಲಿ ಶಾಂತಿಯುತ ಸತ್ಯಾಗ್ರಹ ಕಾರ್ಯಕ್ರಮ ನಡೆಸೋಣ. ಧರ್ಮಸ್ಥಳದ ಫಾಸಲೆಯಲ್ಲಿ ದಶಕಗಳಿಂದಲೂ ಪತ್ತೆಯಾಗದ ಆ ಎಲ್ಲಾ ಪಾತಕ ಕೃತ್ಯಗಳನ್ನೆಸಗಿದ ಅಪರಾಧಿಗಳನ್ನು ಪತ್ತೆ ಹಚ್ಚುವಂತೆ ಸರ್ಕಾರಕ್ಕೆ ಒತ್ತಾಯಿಸೋಣ. ಸಂವಿಧಾನ ವಿರೋಧಿ ರಾಜಕೀಯ ಶಕ್ತಿಗಳ ಒತ್ತಡಗಳಿಗೆ ಮಣಿದಿರುವ ಸರ್ಕಾರವು ತಾಂತ್ರಿಕ ಅಡಚಣೆಯ ಹೆಸರಿನಲ್ಲಿ SIT ತನಿಖೆಗೆ ಮುಳ್ಳುಬೇಲಿ ಹಾಕಿ ನಿರ್ಬಂಧ ಹೇರುವ ಕ್ರಮವನ್ನು ಖಂಡಿಸೋಣ. ಧರ್ಮಸ್ಥಳ ಗ್ರಾಮ ಹಾಗೂ ಸುತ್ತಮತ್ತಲ ಪ್ರದೇಶದಲ್ಲಿ ಕಳೆದ ಹಲವು ದಶಕಗಳಿಂದ ನಡೆದಿರುವ ಎಲ್ಲಾ ಅತ್ಯಾಚಾರ, ಕೊಲೆ, ಅಸಹಜ ಸಾವುಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಈ SITಗೆ ಸ್ಪಷ್ಟ ಆದೇಶ ಕೊಡಬೇಕೆಂದು ಸರ್ಕಾರಕ್ಕೆ ಆಗ್ರಹ ಪತ್ರ ಸಲ್ಲಿಸೋಣ” ಎಂದು ಕರೆ ನೀಡಿದ್ದರು.
ಲೇಖಕಿ ಚಂದ್ರಕಲಾ ನಂದಾವರ, ರಂಗಕರ್ಮಿ ಗೀತಾ ಸುರತ್ಕಲ್, ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ್, ಸಾಮಾಜಿಕ ಕಾರ್ಯಕರ್ತೆ ಮಮತಾ ರೈ, ಮಹಿಳಾ ಮುನ್ನಡೆ ಗೌರಿ, ಸಾಮಾಜಿಕ ಕಾರ್ಯಕರ್ತೆ ಸ್ವರ್ಣಾ ಭಟ್, ಅತ್ರಾಡಿ ಅಮೃತಾ ಡೀಕಯ್ಯ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಗುಲಾಬಿ ಬಿಳಿಮಲೆ, ಲೇಖಕಿ ಸುಖಲಾಕ್ಷಿ, ಜಾಗೃತ ಕರ್ನಾಟಕದ ಸುಚಿತ್ರಾ ಎಸ್ ಎ, ಸೌಜನ್ಯ ಹೋರಾಟಗಾರರಾದ ಶಶಿಕಲಾ ಶೆಟ್ಟಿ, ಪರಿಸರವಾದಿ ಬಿ.ಸಿ.ಶೆಟ್ಟಿ, ಸೌಜನ್ಯ ಹೋರಾಟ ವೇದಿಕೆಯ ಗಿರೀಶ್ ಮಟ್ಟಣ್ಣನವರ್, ಸಾಮಾಜಿಕ ಕಾರ್ಯಕರ್ತ ಶ್ರೀಕುಮಾರ್, ಸಾಮಾಜಿಕ ಕಾರ್ಯಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ, ತುಳುನಾಡು ಸಂಸ್ಕೃತಿ ಚಿಂತಕ ತಮ್ಮಣ್ಣ ಶೆಟ್ಟಿ, ಜಾಗೃತ ಕರ್ನಾಟಕದ ಸಂಚಾಲಕ ಡಾ. ಬಿ.ಸಿ.ಬಸವರಾಜು, ಸೌಜನ್ಯಪರ ಹೋರಾಟಗಾರ್ತಿ ಪ್ರಸನ್ನ ರವಿ, ಜಾಗೃತ ಕರ್ನಾಟಕದ ಕಾರ್ಯಕರ್ತರಾದ ಸೀತಾಲಕ್ಷ್ಮಿ ಮತ್ತು ರಾಜಶೇಖರ ಅಕ್ಕಿ ಮುಂತಾದವರು ಇರುವ ಸಮಾನ ಮನಸ್ಕರ ವೇದಿಕೆ ಈ ಕರೆ ನೀಡಿತ್ತು.
ಈ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಮೈಸೂರಿನ ʼಸಮಾನ ಮನಸ್ಕರ ವೇದಿಕೆʼ ಕೂಡಾ ಜನಾಗ್ರಹಕ್ಕೆ ಕರೆ ನೀಡಿದೆ. ಮೈಸೂರಿನ ಟೌನ್ಹಾಲ್ ಬಳಿ ಬೆಳಿಗ್ಗೆ ೧೦ ಗಂಟೆಗೆ ಪ್ರತಿಭಟನಾ ಸಭೆ ನಡೆಸಲಿದ್ದಾರೆ. ʼಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆʼ ಕೂಡಾ ನ್ಯಾಯಕ್ಕಾಗಿ ಜನಾಗ್ರಹ ನಡೆಸಲಿದೆ.
“ಧರ್ಮಸ್ಥಳದ ಸುತ್ತಣ ಅಪರಾಧ ಕೃತ್ಯಗಳ ತನಿಖೆಗಾಗಿ ರಚಿಸಲಾಗಿರುವ SIT ಮೇಲೆ ಅತಿಯಾದ ರಾಜಕೀಯ ಒತ್ತಡ ಇರುವುದು ಅಂಗೈ ಹುಣ್ಣಿನಂತೆ ನಿಚ್ಚಳವಾಗಿದೆ. ಈ ಪರಿಣಾಮವಾಗಿ SIT ದಿಕ್ಕು ತಪ್ಪಿದೆಯೆಂಬ ಆತಂಕ ಎಲ್ಲೆಡೆ ಮನೆ ಮಾಡಿದೆ. ಇಂಥಾ ವಿಷಮ ಸನ್ನಿವೇಶದಲ್ಲಿ ಕಾನೂನು ಆಡಳಿತ ( Rule of Law) ದಲ್ಲಿ ನಂಬಿಕೆ ಇರಿಸಿರುವ ನಾಗರಿಕರಾದ ನಾವು ಮೂಕಪ್ರೇಕ್ಷಕರಾಗಿರುವುದು ಸಾಧ್ಯವಿಲ್ಲ. ಇದೇ ಅಕ್ಟೋಬರ್ 9 ಕ್ಕೆ ನಮ್ಮ ಮನೆಮಗಳು ಸೌಜನ್ಯಳ ಅತ್ಯಾಚಾರ ಮತ್ತು ಹತ್ಯೆ ನಡೆದು 13 ವರ್ಷಗಳೇ ಕಳೆದವು. ನ್ಯಾಯ ಇನ್ನೂ ಮರೀಚಿಕೆಯಾಗಿದೆ. ಧರ್ಮಸ್ಥಳ ಫಾಸಲೆಯಲ್ಲಿ ದಾರುಣವಾಗಿ ಹತ್ಯೆಯಾದ ಎಲ್ಲ ಜೀವಗಳಿಗೂ ನ್ಯಾಯ ಸಿಗಲೇಬೇಕು. ಆದ್ದರಿಂದ ನಿಮ್ಮ ನಿಮ್ಮ ಊರುಗಳಲ್ಲಿ ಸಾಧ್ಯವಿರುವ ರೀತಿಯಲ್ಲಿ ಪ್ರತಿಭಟನಾ ಕಾರ್ಯಕ್ರಮ ರೂಪಿಸಿ. ಈಗಾಗಲೇ ಕಾರ್ಯಕ್ರಮ ರೂಪುಗೊಂಡಿದ್ದರೆ ಅವರ ಜೊತೆಗೆ ಕೈಜೋಡಿಸಿ. ವೇದಿಕೆಯ ಬ್ಯಾನರ್ ಗಳು ಸಾಂದರ್ಭಿಕ. ಹೋರಾಟದ ಆಶಯವೊಂದೇ ಶಾಶ್ವತ. ಹೀಗಾಗಿ ಯಾವುದೇ ಸಂಕುಚಿತ ಧೋರಣೆ, ಸಂಕುಚಿತ ಹಿತಾಸಕ್ತಿಗೆ ಆಸ್ಪದ ಕೊಡದೆ ಈ ಸಮಾನ ಆಶಯಕ್ಕಾಗಿ ಎಲ್ಲರೂ ಒಂದಾಗಬೇಕು” ಎಂದು ಸಾಮಾಜಿಕ ಕಾರ್ಯಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ತಿಳಿಸಿದ್ದಾರೆ.
ಸೌಜನ್ಯ ಕೊಲೆಯಾಗಿ ಹದಿಮೂರು ವರ್ಷ
2012 ಅಕ್ಟೋಬರ್ 9ರಂದು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ನಾಪತ್ತೆಯಾಗಿ ಭೀಕರವಾಗಿ ಅತ್ಯಾಚಾರಗೊಂಡು ಕೊಲೆಯಾದ ಧರ್ಮಸ್ಥಳದ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಪಾಂಗಳದ ಸೌಜನ್ಯಳ ಕೊಲೆಗಾರರನ್ನು ಪತ್ತೆ ಹಚ್ಚಲು ಸಮಗ್ರ ತನಿಖೆಗೆ ಎಸ್ಐಟಿ ರಚಿಸುವಂತೆ ಒತ್ತಾಯಿಸಿ ಇದೇ ಅಕ್ಟೋಬರ್ 9ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನಾಗ್ರಹ ಸಭೆ ನಡೆಯಲಿದೆ. ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಹೋರಾಟಗಾರರು ಮನವಿ ಸಲ್ಲಿಸಲಿದ್ದಾರೆ. ಸೌಜನ್ಯ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಕೋರ್ಟ್ 2023 ಜೂನ್ನಲ್ಲಿ ತೀರ್ಪು ನೀಡಿ, ಸಂತೋಷ್ ರಾವ್ ನಿರಪರಾಧಿ ಎಂದಿತ್ತು. ಅಷ್ಟೇ ಅಲ್ಲ, ಅತ್ಯಾಚಾರವಾಗಿದ್ದರೂ ಪೊಲೀಸರು ಸಾಕ್ಷ್ಯ ಸಂಗ್ರಹ ಮಾಡದೇ ಕರ್ತವ್ಯಲೋಪ ಎಸಗಿದ್ದಾರೆ ಎಂದು ನ್ಯಾಯಾದೀಶರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಪ್ರಕರಣವನ್ನು ಮರು ತನಿಖೆ ನಡೆಸಲು ಒತ್ತಾಯಿಸಿ ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಹೈಕೋರ್ಟ್ ಮರು ತನಿಖೆ ಕೋರಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.
ಇದಾದ ನಂತರ ನಾಲ್ಕು ತಿಂಗಳ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದು, ನೂರಾರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿಗಳ ಶವಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಬಂದ ಮಾಜಿ ಸ್ವಚ್ಛತಾ ಕಾರ್ಮಿಕ ಚಿನ್ನಯ್ಯನ ಪ್ರವೇಶದೊಂದಿದೆ ಸೌಜನ್ಯ ಪ್ರಕರಣದ ಹೋರಾಟಕ್ಕೆ ಮತ್ತೆ ಮರುಜೀವ ಬಂದಿದೆ. ತಾನು ಪಾಪಪ್ರಜ್ಞೆಯಿಂದ ಹೊರಬರಲು ಸತ್ಯ ಹೇಳಲು ಬಂದಿದ್ದೇನೆ ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ನಂತರ ಸರ್ಕಾರ ಎಸ್ಐಟಿ ರಚನೆ ಮಾಡಿತ್ತು. ಎಸ್ಐಟಿ ತಂದ ಧರ್ಮಸ್ಥಳದ ನೇತ್ರಾವತಿ ದಡದಲ್ಲಿ ಚಿನ್ನಯ್ಯ ತೋರಿಸಿದ ಹದಿಮೂರು ಜಾಗಗಳಲ್ಲಿ ಎರಡು ವಾರಗಳ ಕಾಲ ಉತ್ಖನನ ನಡೆಸಿದಾಗ ಎರಡು ಜಾಗಗಳಲ್ಲಿ ಮಾತ್ರ ಮನುಷ್ಯನ ತಲೆ ಬುರುಡೆ ಮತ್ತು ಮೂಳೆಗಳು ಸಿಕ್ಕಿದ್ದವು. ಅದಾಗಲೇ ಚಿನ್ನಯ್ಯ ಯಾವುದೋ ಬಾಹ್ಯ ಒತ್ತಡಕ್ಕೆ ಮಣಿದು ಸರಿಯಾದ ಜಾಗಗಳನ್ನು ತೋರಿಸಿಲ್ಲ ಎಂದು ಹೇಳಲಾಗುತ್ತಿದೆ. ಆ ನಂತರ ಎಸ್ಐಟಿ ತನಿಖೆಯ ವೇಳೆ ತಾನು ಸುಳ್ಳು ಹೇಳಿರುವುದಾಗಿ, ಬೇರೆಯವರ ಒತ್ತಡಕ್ಕೆ ಮಣಿದು ಆರೋಪ ಮಾಡಿರುವುದಾಗಿ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದ. ಚಿನ್ನಯ್ಯ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆದರೆ, ಎರಡು ವರ್ಷಗಳ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾಡಿಕೊಂಡಿದ್ದ ಚಿನ್ನಯ್ಯನ ಮೊದಲ ಹೇಳಿಕೆಯ ವಿಡಿಯೋದಲ್ಲಿ ಸೌಜನ್ಯ ಪ್ರಕರಣದ ಬಗ್ಗೆಯೂ ಕೆಲವು ಹೆಸರುಗಳನ್ನು ಹೇಳಿರುವುದು ಮತ್ತು ಸೌಜನ್ಯ ಅಪಹರಣವನ್ನು ಪ್ರಕೃತಿ ಚಿಕಿತ್ಸಾ ಕೇಂದ್ರದ ಬಳಿ ನಿಂತು ನೋಡಿರುವುದಾಗ ಮಂಡ್ಯದ ಮಹಿಳೆಯೊಬ್ಬರು ಎಸ್ಐಟಿ ಮುಂದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಸೌಜನ್ಯ ತನಿಖೆಗೆ ಪ್ರತ್ಯೇಕ ಎಸ್ಐಟಿ ರಚಿಸಬೇಕು ಎಂಬ ಬೇಡಿಕೆಗೆ ಜೀವ ಬಂದಿದೆ.