ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆದ ಘಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕಲಬುರಗಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾ ಹೇಳಿಕೆಯನ್ನು ಹೊರಡಿಸಿ ಮಾತನಾಡಿದ ಅವರು, “ಸಿಜೆಐ ಗವಾಯಿ ಅವರ ಮೇಲೆ ತೆರೆದ ನ್ಯಾಯಾಲಯದ ಕೋಣೆಯಲ್ಲೇ ಶೂ ಎಸೆಯುವುದು ಅತ್ಯಂತ ಆಘಾತಕಾರಿ ಮತ್ತು ಪ್ರಜಾಪ್ರಭುತ್ವದ ಸಾಂವಿಧಾನಿಕ ವ್ಯವಸ್ಥೆಗೆ ವಿರುದ್ಧವಾದ ಕೃತ್ಯ” ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನಲ್ಲಿ ನೋಂದಾಯಿಸಿಕೊಂಡಿರುವ ಹಾಗೂ ಬಂಧಿಸಲ್ಪಟ್ಟಿರುವ ಸಂಬಂಧಪಟ್ಟ ವಕೀಲರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ವತಿಯಿಂದ ಆಗ್ರಹಿಸಿದರು.
‘ಸನಾತನ ಧರ್ಮದ ಘೋಷಣೆಗಳನ್ನು ಕೂಗುತ್ತಾ ನ್ಯಾಯಾಲಯದೊಳಗೆ ನಡೆದ ಈ ಕೃತ್ಯವು ಜಾತಿವಾದಿ, ಮನುವಾದಿ ಮತ್ತು ಕೋಮುವಾದಿ ವಿಚಾರಧಾರೆಗೆ ಬಲ ನೀಡುತ್ತಿರುವ ರಾಜಕೀಯ ಶಕ್ತಿಗಳ ಪ್ರೇರಿತ ಫಲಿತಾಂಶವಾಗಿದೆ’ ಎಂದರು.
‘ಭಾರತೀಯ ಜನತಾ ಪಕ್ಷದ ನಾಯಕರ ಇತ್ತೀಚಿನ ಜಾತಿ–ಧಾರ್ಮಿಕ ವಿವಾದಾತ್ಮಕ ಹೇಳಿಕೆಗಳು ಇಂತಹ ಅತಿರೇಕದ ಕೃತ್ಯಗಳಿಗೆ ಧೈರ್ಯ ತುಂಬಿವೆ ಎಂದು ಆರೋಪಿಸಿದರು. “ಈ ಘಟನೆ ಹಿಂದುತ್ವ ಕೋಮುವಾದಿ ಶಕ್ತಿಗಳ ಅಸಹಿಷ್ಣುತೆ ಮತ್ತು ವಿಭಿನ್ನ ಅಭಿಪ್ರಾಯಗಳನ್ನು ಸಹಿಸಲಾರದ ಮನೋಭಾವದ ಮತ್ತೊಂದು ನಿದರ್ಶನವಾಗಿದೆ,” ಎಂದು ಹೇಳಿದರು.
ಸಿಜೆಐ ಗವಾಯಿ ಅವರಿಗೆ ಕೇಂದ್ರ ಸರ್ಕಾರವು ಸಂಪೂರ್ಣ ಭದ್ರತೆ ಒದಗಿಸಬೇಕು ಹಾಗೂ ಅಸಹಿಷ್ಣುತೆಯನ್ನು ಪ್ರೋತ್ಸಾಹಿಸುವ ವ್ಯಕ್ತಿ–ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.