ಉಡುಪಿ ಜಿಲ್ಲೆಯ ಹೆಸರಾಂತ ಎಕೆಎಂಎಸ್ ಬಸ್ ಮಾಲಕ ಹಾಗೂ ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣದ ತನಿಖೆ ಮತ್ತೊಂದು ತಿರುವು ಪಡೆದಿದೆ. ಬಂಧಿತ ಮೂವರು ಆರೋಪಿಗಳನ್ನು ಬಳಸಿಕೊಂಡು ಕೆಲವರು ಈ ಕೊಲೆ ಮಾಡಿಸಿರುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಹಣಕ್ಕಾಗಿ ಈ ಕೊಲೆ ನಡೆದಿರುವುದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಇಂದು ಎಸ್ಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಗಳಾದ ಫೈಝಲ್, ಶರೀಫ್ ಹಾಗೂ ಶುಕೂರಿಗೆ ಸೈಫ್‌ನ ವಿರುದ್ಧ ವೈಯಕ್ತಿಕ ಧ್ವೇಷ ಇತ್ತು ಎಂದು ಹೇಳಿದರು. ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಸೈಫ್ ಯಾವುದೇ ರೀತಿಯ ಸಹಕಾರ ನೀಡದಿದ್ದ ಕಾರಣದಿಂದ ಶರೀಫ್ ಮತ್ತು ಶುಕೂರು ಅಸಮಾಧಾನಗೊಂಡಿದ್ದರು. ಫೈಝಲ್‌ಗೂ ತನ್ನ ಪತ್ನಿಯೊಂದಿಗೆ ಸೈಫ್ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನದಿಂದ ದ್ವೇಷ ಹುಟ್ಟಿತ್ತು. ಈ ಕಾರಣಗಳನ್ನು ಬಳಸಿಕೊಂಡು ಕೆಲವು ಮಂದಿ ಸೇರಿ ಕೊಲೆಗೈದಿದ್ದಾರೆ ಎಂದು ಹೇಳಿದರು.

ಸೈಫ್‌ನನ್ನು ಕೊಲೆ ಮಾಡಲು ಆರೋಪಿಗಳು ಹಲವು ತಿಂಗಳಿನಿಂದ ಸಂಚು ರೂಪಿಸಿದ್ದರು. ಸುಮಾರು ಎರಡು ತಿಂಗಳ ಹಿಂದೆ ಈ ಯೋಜನೆ ಅಂತಿಮಗೊಂಡಿತ್ತು. ಸೆಪ್ಟೆಂಬರ್ 27ರಂದು ಫೈಝಲ್ ಸೈಫ್‌ನನ್ನು “ಬಸ್ಸಿನ ವ್ಯವಹಾರದ ಕುರಿತು ಮಾತನಾಡಲು ಮಂಗಳೂರಿಗೆ ಹೋಗೋಣ” ಎಂದು ಹೇಳಿ ಮನೆಗೆ ಕರೆದುಕೊಂಡು ಬಂದಿದ್ದ. ನಂತರ “ನಿನ್ನನ್ನು ನೋಡಲು ರಿಧಾ ಕೊಡವೂರಿನ ಮನೆಯಲ್ಲಿ ಕಾಯುತ್ತಿದ್ದಾಳೆ” ಎಂದು ಸುಳ್ಳು ಹೇಳಿ ಆತನನ್ನು ಕೊಡವೂರಿನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಶರೀಫ್ ಮತ್ತು ಶುಕೂರು ಶೆಡ್‌ನಲ್ಲಿ ಅಡಗಿ ಕುಳಿತಿದ್ದು, ಸೈಫ್ ಮನೆಗೆ ಪ್ರವೇಶಿಸುತ್ತಿದ್ದಂತೆಯೇ ಮೂವರು ಸೇರಿಕೊಂಡು ಕೊಲೆಗೈದಿದ್ದಾರೆ ಎಂದು ಎಸ್ಪಿ ವಿವರಿಸಿದರು.

ಈ ಸಂಚಿನಲ್ಲಿ ಫೈಝಲ್‌ನ ಪತ್ನಿ ರಿಧಾ ಶಭಾನಳೂ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆಕೆಯನ್ನು ಈಗಾಗಲೇ ಬಂಧಿಸಲಾಗಿದೆ. ಸೈಫ್ ಆಕೆಗೆ ಕಿರುಕುಳ ನೀಡುತ್ತಿದ್ದಾನೆ ಎಂಬ ಫೈಝಲ್‌ನ ಹೇಳಿಕೆಯನ್ನು ಪೊಲೀಸರು ಪರಿಶೀಲಿಸಿದಾಗ, ಅವರಿಬ್ಬರ ಮಧ್ಯೆ ಸಾಕಷ್ಟು ಫೋನ್‌ಕಾಲ್‌ಗಳು ಹಾಗೂ ಚಾಟ್‌ಗಳ ದಾಖಲೆಗಳು ದೊರೆತಿದ್ದು, ಕಿರುಕುಳದ ಆರೋಪ ಸಾಬೀತಾಗಿಲ್ಲವೆಂದು ಎಸ್ ಪಿ ಸ್ಪಷ್ಟಪಡಿಸಿದರು. ಕನಿಷ್ಠ ಒಂದು ವರ್ಷದಿಂದ ಸೈಫ್ ಮತ್ತು ರಿಧಾಳ ನಡುವೆ ಸಂಪರ್ಕ ಇದ್ದದ್ದು ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಇನ್ನೂ ಕೆಲವರು ಸಂಚಿನಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಅವರನ್ನೂ ಬಂಧಿಸುವ ಕಾರ್ಯ ನಡೆಯುತ್ತಿದೆ. ಸಂಚಿನಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.