- ಸೆ. 9ರಂದು ಬೆಂಗಳೂರಿನಲ್ಲಿ ಅತಿ ಹಿಂದುಳಿದ ಸಮುದಾಯದ ಚಿಂತನ-ಮಂಥನ ಸಮಾವೇಶ
- ರಾಜಕೀಯವಾಗಿ ಬಿಲ್ಲವ ಮುಖಂಡರನ್ನು ಮುಗಿಸುವ ಹುನ್ನಾರ ಎಂದ ಬಿಲ್ಲವ ಸ್ವಾಮೀಜಿ
ರಾಜಕೀಯವಾಗಿ ಬಿಲ್ಲವ ಮುಖಂಡರನ್ನು ಮುಗಿಸುವ ಹುನ್ನಾರ ನಡೆಯುತ್ತಿದೆ. ಒಂದು ವೇಳೆ ಇದು ಇದೇ ರೀತಿ ಮುಂದುವರಿದರೆ ಬಿಲ್ಲವರೇ ಸೇರಿಕೊಂಡು ಸ್ವತಂತ್ರ ಪಕ್ಷ ರಚನೆ ಮಾಡಬೇಕಾಗಬಹುದು. ಮುಂದಿನ ದಿನಗಳಲ್ಲಿ ಈ ಬಗ್ಗೆಯೂ ಚರ್ಚೆ ನಡೆಸಲಿದ್ದೇವೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಲ್ಲವ, ನಾಮಧಾರಿ, ಈಡಿಗ ಸೇರಿದಂತೆ ಅನೇಕ ಹಿಂದುಳಿದ ಸಮುದಾಯದವರನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳಿಂದ ವಂಚಿತರನ್ನಾಗಿಸಲಾಗುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕದ ಬಿಲ್ಲವ, ಈಡಿಗ, ದೇವರು, ನಾಮಧಾರಿ, ಮಡಿವಾಳ, ವಿಶ್ವಕರ್ಮ, ಅಲೆಮಾರಿ, ಅರೆ ಅಲೆಮಾರಿ, ಬೆಸ್ತ, ತಿಗಳ, ಕ್ಷೌರಿಕ, ದೇವಾಂಗ, ಗೊಲ್ಲ, ಯಾದವ, ಉಪ್ಪಾರ, ಹಾಲಕ್ಕಿ ಒಕ್ಕಲಿಗ, ಮೇದಾರ, ಕುಂಬಾರ, ಗೆಜೆಗಾರ ಸೇರಿದಂತೆ ನಾನಾ ಹೆಸರಿನಲ್ಲಿ ಗುರುತಿಸಿಕೊಂಡಿರುವ ಸುಮಾರು ಒಂದು ಕೋಟಿ ಜನಸಂಖ್ಯೆ ಇದ್ದರೂ ಇವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬೆಳವಣಿಗೆಗೆ ಈ ಅತಿ ಹಿಂದುಳಿದ ಜಾತಿಗಳಲ್ಲಿ, ಪರಸ್ಪರ ಸಮನ್ವಯತೆ ಮತ್ತು ಒಗ್ಗಟ್ಟಿನ ಕೊರತೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ನಮ್ಮ ಅತಿ ಹಿಂದುಳಿದ ಜಾತಿಗಳ ನಡುವೆ ಪರಸ್ಪರ ಸಂವಾದ ಮತ್ತು ಪರಸ್ಪರ ಕೊಡು ಕೊಳ್ಳುವಿಕೆಯ ಚರ್ಚೆಗಳು ಆಗಬೇಕಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
ಎಲ್ಲ ಪಕ್ಷಗಳು ಬಿಲ್ಲವರನ್ನು ಬಳಸಿಕೊಂಡು ಬಳಿಕ ಮೂಲೆಗುಂಪು ಮಾಡಿವೆ. ಬಿಲ್ಲವರ ನಿಗಮ ಮಂಡಳಿ ರಚಿಸಿ ₹250 ಕೋಟಿ ನೀಡುವುದಾಗಿ ನೀಡಿದ ಆಶ್ವಾಸನೆ ಕಾರ್ಯಗತಗೊಂಡಿಲ್ಲ. ಕಾಂಗ್ರೆಸ್‌ನಲ್ಲಿ ಜನಾರ್ದನ ಪೂಜಾರಿಯವರನ್ನು ಮೂಲೆಗುಂಪು ಮಾಡಿದಂತೆ ಬಿ.ಕೆ.ಹರಿಪ್ರಸಾದ್ ಅವರನ್ನೂ ಮೂಲೆಗುಂಪು ಮಾಡಲಾಗುತ್ತಿದೆ. ದ.ಕ., ಉತ್ತರ ಕನ್ನಡ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಲ್ಲವರಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ನಮಗೆ ಪಕ್ಷ ಮುಖ್ಯವಲ್ಲ, ಸಮಾಜ ಬಾಂಧವರ ಏಳಿಗೆ ಮುಖ್ಯ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.
‘ಸಮುದಾಯದ ಏಳಿಗೆ ಬಗ್ಗೆ ಸಮಗ್ರವಾಗಿ ಚರ್ಚಿಸಿ ಎಲ್ಲರೂ ಒಂದೇ ವೇದಿಕೆಯಲ್ಲಿ ಒಗ್ಗೂಡಲು ಪೂರಕವಾಗಿ ಬೆಂಗಳೂರಿನಲ್ಲಿ ಈ ಎಲ್ಲ ಸಮುದಾಯದ ಮುಖಂಡರ ಸಭೆಯನ್ನು ಕರೆಯಲಾಗಿದೆ. ರಾಜ್ಯಾದ್ಯಂತ ಈ ಎಲ್ಲಾ ಸಮುದಾಯವನ್ನೂ ಒಗ್ಗೂಡಿಸಿ ಮುಂದಿನ ಜನವರಿ ತಿಂಗಳಲ್ಲೂ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಸಂಘಟಿಸುವ ಕುರಿತೂ ಕೂಡ ಚರ್ಚಿಸಿ ನಿರ್ಧರಿಸಲಾಗುವುದು. ಈ ಸಂದರ್ಭದಲ್ಲಿ ಎಲ್ಲಾ ಸಮುದಾಯದ ಸ್ವಾಮೀಜಿಗಳೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂದರು.
ಮುಂದಿನ ಸೆಪ್ಟೆಂಬರ್ ತಿಂಗಳ 9ರ ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಲ್ಲವ, ಅತಿ ಹಿಂದುಳಿದ ಸಮುದಾಯಗಳ ಚಿಂತನ-ಮಂಥನ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಪ್ರಣವಾನಂದ ಸ್ವಾಮೀಜಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಜಿಲ್ಲಾಧ್ಯಕ್ಷ ಸುರೇಶ್ ಚಂದರ್ ಕೋಟ್ಯಾನ್, ಕೋಶಾಧಿಕಾರಿ ಲೋಕನಾಥ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಪ್ರೇಮನಾಥ್, ಮಹಿಳಾ ಕಾರ್ಯದರ್ಶಿ ಶೋಭಾ ಕೇಶವ್ ಮತ್ತು ನಿತಿನ್ ಪೂಜಾರಿ ಉಪಸ್ಥಿತರಿದ್ದರು.
ವಿಡಿಯೋ ಕೃಪೆ: SANMARGA NEWS