ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಹೊರಡಿಸಿದ ನಿರ್ದೇಶನದಂತೆ ತಮಿಳುನಾಡಿಗೆ ಕರ್ನಾಟಕವು ಕೆಆರ್‌ಎಸ್ ಜಲಾಶಯದಿಂದ ನೀರು ಹರಿಸಲು ಆರಂಭಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂದಿನ ಹದಿನೈದು ದಿನಗಳ ಕಾಲ ಸೆಪ್ಟೆಂಬರ್ 12ರವರೆಗೆ ಪ್ರತಿದಿನ 5,000 ಕ್ಯೂಸೆಕ್ (ಸೆಕೆಂಡಿಗೆ ಘನ ಅಡಿ) ನೀರು ತಮಿಳುನಾಡಿಗೆ ಹರಿಸಬೇಕು. ಅಷ್ಟು ನೀರು ತಮಿಳುನಾಡು ತಲುಪುತ್ತಿದ್ದೆಯೇ ಎಂಬುದನ್ನು ಬಿಳಿಗುಂಡ್ಲು ಬಳಿ ಖಾತ್ರಿ ಪಡಿಸಬೇಕು ಎಂದು ಪ್ರಾಧಿಕಾರವು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿತ್ತು.
ಅದರಂತೆ ನೀರು ಹರಿಸಲಾಗುತ್ತಿದೆ. ಮಂಡ್ಯದ ಶ್ರೀರಂಗಪಟ್ಟಣ ಬಳಿಯ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟು ಮತ್ತು ಕಬಿನಿ ಜಲಾಶಯದಿಂದ ನದಿಗೆ ನೀರು ಬಿಡಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಡಿಎಚ್ ವರದಿ ಮಾಡಿದೆ.
ಕೆಆರ್‌ಎಸ್ ಮತ್ತು ಕಬಿನಿ ಜಲಾಶಯದಿಂದ ನೀರು ಬಿಡುವುದನ್ನು ವಿರೋಧಿಸಿ ರೈತಸಂಘದ ಕಾರ್ಯಕರ್ತರು ಕೆಆರ್‌ಎಸ್ ಬಳಿ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.