ತಮ್ಮ ಇಬ್ಬರು ಸಹೋದ್ಯೋಗಿ ಪ್ರಾಧ್ಯಾಪಕರು ಮತ್ತು ಇಬ್ಬರು ವಿದ್ಯಾರ್ಥಿಗಳು ತಮ್ಮ ಮೇಲೆ ಹಲ್ಲೆ ಮಾಡಿ, ಜಾತಿ ದೌರ್ಜನ್ಯ ಎಸಗಿದ್ದಾರೆ ಎಂದು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದಲಿತ ಸಹಾಯಕ ಪ್ರಾಧ್ಯಾಪಕಿ ಒಬ್ಬರು ಆರೋಪಿಸಿದ್ದಾರೆ.
ಮೂರು ತಿಂಗಳ ಹಿಂದೆಯೇ ಘಟನೆ ನಡೆದಿದೆ. ಅಂದೇ ಪ್ರಾಧ್ಯಾಪಕಿಯು ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಬರೋಬ್ಬರಿ ಮೂರು ತಿಂಗಳ ನಂತರ ಆಗಸ್ಟ್ 27ರಂದು ಎಫ್‌ಐಆರ್ ದಾಖಲಾಗಿದೆ. ಆದೂ, ಆಕೆ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವಾಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಮತ್ತು ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ದೂರುದಾರ ಪ್ರಾಧ್ಯಾಪಕಿ ಆರೋಪಿಸಿದ್ದಾರೆ.
“ನಾನು ದಲಿತೆ ಎಂಬ ಕಾರಣಕ್ಕೆ ಆರೋಪಿಗಳು ನನ್ನನ್ನು ಗುರಿಯಾಗಿಸಿಕೊಂಡಿದ್ದರು. ನನ್ನನ್ನು ಹುದ್ದೆಯಿಂದ ತೆಗೆದು ಹಾಕುವಂತೆ ಒತ್ತಡ ಹಾಕಿದ್ದರು. ಅವರ ಒತ್ತದ ಹೊರತಾಗಿಯೂ ನಾನು ನನ್ನ ಹುದ್ದೆಯನ್ನು ಉಳಿಸಿಕೊಂಡಿದ್ದೇನೆ. ಆಗಿನಿಂದ, ನನ್ನ ಮೇಲೆ ಆರೋಪಿಗಳು ವೈಷಮ್ಯ ಹೆಚ್ಚಿಕೊಂಡು, ಹಲ್ಲೆ ಮಾಡಿದ್ದರು” ಎಂದು ದೂರುದಾರರು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಆರೋಪಿಗಳು ಆಕೆಯನ್ನು ವಿವಸ್ತ್ರಗೊಳಿಸಿ, ವಿಶ್ವವಿದ್ಯಾಲಯದ ಸುತ್ತ ಸುತ್ತವಂತೆ ಮಾಡಬೇಕೆಂದು ಮಾತಾನಾಡಿಕೊಂಡಿದ್ದರು. ಮೇ 22ರಂದು ಆರೋಪಿಗಳಲ್ಲಿ ಒಬ್ಬರು ಆಕೆಯ ಬೇಂಬರ್‌ಗೆ ನುಗ್ಗಿ, ಹುದ್ದೆಯಿಂದ ತೆಗೆದು ಹಾಕಿಸುವುದಾಗಿ ಮತ್ತು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
“ಅಂದು ಆರೋಪಿಯೊಬ್ಬ ನನ್ನ ಚೇಂಬರ್‌ನಲ್ಲಿ ಗಲಾಟೆ ಮಾಡಿದ್ದರಿಂದ ನಾನು ಕೊಠಡಿಯಿಂದ ಹೊರ ಬಂದೆ. ಅಲ್ಲಿ ಇತರ ಆರೋಪಿಗಳು ಕೊಠಡಿಯ ಬಾಗಿಲು ಮುಚ್ಚಿದರು. ಒಬ್ಬ ನನ್ನನ್ನು ಹಿಡಿದುಕೊಂಡು ನನ್ನ ಬಟ್ಟೆಗಳನ್ನು ಹರಿದು ಹಾಕಿದ. ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ” ಎಂದು ಪ್ರಾಧ್ಯಾಪಕಿ ಅರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಉ. ಪ್ರದೇಶ | ಮುಸ್ಲಿಂ ಪ್ರಯಾಣಿಕರ ನಮಾಝ್‌ಗೆ ಅವಕಾಶ ನೀಡಿ ಅಮಾನತಾಗಿದ್ದ ಬಸ್ ಕಂಡಕ್ಟರ್ ಆತ್ಮಹತ್ಯೆ
ಪೊಲೀಸರು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 342 (ತಪ್ಪಾದ ಬಂಧನ), 354-ಬಿ (ವಿವಸ್ತ್ರಗೊಳ್ಳುವ ಉದ್ದೇಶದಿಂದ ಮಹಿಳೆಯ ಮೇಲೆ ಹಲ್ಲೆ), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 (ಅಪರಾಧ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಜೊತೆಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳಲ್ಲಿ ಒಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಆರೋಪಗಳು ಆಧಾರರಹಿತವೆಂದು ಹೇಳಿದ್ದಾರೆ. “ಆಕೆ ಇತರರ ವಿರುದ್ಧವೂ ಇದೇ ರೀತಿಯ ದೂರುಗಳನ್ನು ದಾಖಲಿಸಿದ್ದಾರೆ” ಎಂದು ಆರೋಪಿ ಹೇಳಿದ್ದಾರೆ.