ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಮುಂಚಿತವಾಗಿ, ಕೇಂದ್ರ ಸರ್ಕಾರವು ಇಂದು (ಭಾನುವಾರ) ಸರ್ವಪಕ್ಷಗಳ ಸಭೆ ಕರೆದಿದೆ. ಸಭೆಯಲ್ಲಿ ಐದು ದಿನಗಳ ಅಧಿವೇಶನದ ಬಗ್ಗೆ ಸರ್ಕಾರವು ಒಂದಷ್ಟು ಮಾಹಿತಿ ಹಂಚಿಕೊಳ್ಳಲಿದೆ ಮತ್ತು ಎಲ್ಲ ಪಕ್ಷಗಳ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ತಿಳಿದು ಬಂದಿದೆ.
‘ಸಂವಿಧಾನ ಸಭೆ’ಯಿಂದ ಆರಂಭಿಸಿ ಸಂಸತ್ತಿನ 75 ವರ್ಷಗಳ ಪಯಣದ ವಿಶೇಷ ಚರ್ಚೆಯೇ ಪಟ್ಟಿ ಮಾಡಲಾದ ಕಾರ್ಯಸೂಚಿಯಲ್ಲಿನ ಪ್ರಮುಖ ವೈಶಿಷ್ಟ್ಯವಾಗಿದ್ದರೂ ಸೋಮವಾರದಿಂದ ಪ್ರಾರಂಭವಾಗುವ ವಿಶೇಷ ಅಧಿವೇಶನದ ಬಗ್ಗೆ ಎಲ್ಲರಲ್ಲೂ ತೀವ್ರ ಕುತೂಹಲವಿದೆ. ಸರ್ಕಾರವು ಈಗಾಗಲೇ ಪಟ್ಟಿ ಮಾಡಿದಂತೆ ಅಧಿವೇಶನದಲ್ಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ನೇಮಕದ ಮಸೂದೆಯನ್ನು ಪರಿಗಣನೆಗೆ ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು. ಕಳೆದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಗಿತ್ತು.
ಪಟ್ಟಿ ಮಾಡಲಾದ ಕಾರ್ಯಸೂಚಿಯ ಭಾಗವಾಗಿರದ ಕೆಲವು ಹೊಸ ಶಾಸನಗಳು ಅಥವಾ ಇತರ ವಿಷಯಗಳನ್ನೂ ಸಂಸತ್ತಿನಲ್ಲಿ ಮಂಡಿಸುವ ವಿಶೇಷ ಅಧಿಕಾರವನ್ನು ಸರ್ಕಾರ ಹೊಂದಿದೆ. ಯಾವುದೇ ಸಂಭಾವ್ಯ ಹೊಸ ಶಾಸನದ ಬಗ್ಗೆ ಅಧಿಕೃತ ಪ್ರಕಟಣೆ ಇಲ್ಲದಿದ್ದರೂ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ಚುನಾಯಿತ ಶಾಸಕಾಂಗಗಳಲ್ಲಿ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆ ಮಂಡಿಸಬಹುದು ಎನ್ನಲಾಗುತ್ತಿದೆ.
ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಹೊಸ ಕಟ್ಟಡಕ್ಕೆ ಸಂಸತ್ತು ಸ್ಥಳಾಂತರಗೊಳ್ಳುವ ಸಾಧ್ಯತೆಯು ಅಧಿವೇಶನದ ಸುತ್ತಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ವಿವಿಧ ಇಲಾಖೆಗಳ ಸಂಸದೀಯ ಸಿಬ್ಬಂದಿ ಸರ್ಕಾರ ನಿಗಹದಿಪಡಿಸಿರುವ ಹೊಸ ಸಮವಸ್ತ್ರವನ್ನು ಧರಿಸಲು ಸಿದ್ಧವಾಗಿದೆ. ಒಂದು ವಿಭಾಗದ ಸಿಬ್ಬಂದಿಗೆ ನಿಗದಿ ಮಾಡಲಾಗಿರುವ ಹೂವಿನ ಹೊಸ ಡ್ರೆಸ್ ಕೋಡ್‌ಗೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಇದನ್ನು ‘ಆಡಳಿತ ಪಕ್ಷದ ಚುನಾವಣಾ ಚಿಹ್ನೆಯಾದ ಕಮಲದ ಹೂವನ್ನು ಪ್ರಚಾರ ಮಾಡುವ ಅಗ್ಗದ ತಂತ್ರ’ ಎಂದು ಟೀಕಿಸಿದೆ.
ಇದನ್ನು ಓದಿದ್ದೀರಾ: ಜನ ಪಾಪ್‌ಕಾರ್ನ್ ಬೆಲೆಗೆ ಹೆದರಿ ಮಲ್ಟಿಫ್ಲೆಕ್ಸ್, ಥಿಯೇಟರ್‌ಗಳಿಗೆ ಬರುತ್ತಿಲ್ಲವೇ?
ಆಗಸ್ಟ್ 31 ರಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ಸೆಪ್ಟೆಂಬರ್ 18 ರಿಂದ ಐದು ದಿನಗಳ ಕಾಲ ಸಂಸತ್ತಿನ ‘ವಿಶೇಷ ಅಧಿವೇಶನ’ವನ್ನು ಘೋಷಿಸುವಾಗ, ಅದಕ್ಕೆ ಯಾವುದೇ ನಿರ್ದಿಷ್ಟ ಕಾರ್ಯಸೂಚಿಯನ್ನು ಪ್ರಕಟಿಸಿರಲಿಲ್ಲ. “ಅಮೃತ ಕಾಲದ ಮಧ್ಯೆ, ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳನ್ನು ನಡೆಸಲು ಎದುರು ನೋಡುತ್ತಿದ್ದೇನೆ” ಎಂದಷ್ಟೆ ಜೋಶಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಕಾಂಗ್ರೆಸ್ ಒತ್ತಾಯ
ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಒತ್ತಾಯ ಕೇಳಿಬಂದಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಹೇಳಿದ್ದಾರೆ.