ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡುವಂತೆ ಕೇಳಿದಾಗ ‘ನಿಮಗೆ ಬೇಕಾದಷ್ಟು ದಾಸ್ತಾನು ಅಕ್ಕಿ ನಮ್ಮಲ್ಲಿ ಇಲ್ಲ’ ಎಂದಿದ್ದ ಕೇಂದ್ರ ಸರ್ಕಾರವು, ಸಿಂಗಾಪುರಕ್ಕೆ ಅಕ್ಕಿಯನ್ನು ರಫ್ತು ಮಾಡಲು ಹೊರಟಿದೆ.
ಮಾನವೀಯ ಕಾರ್ಯಾಚರಣೆಗಳ ಅಡಿಯಲ್ಲಿ ಭಾರತವು ಸಿಂಗಾಪುರಕ್ಕೆ ಇನ್ನೊಮ್ಮೆ 50 ಸಾವಿರ ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡುತ್ತಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ತಿಳಿಸಿರುವುದಾಗಿ ‘ಮಿಂಟ್’ ವರದಿ ಮಾಡಿದೆ.
ಜುಲೈ 20ರಿಂದ ಅನ್ವಯವಾಗುವಂತೆ ಬಾಸ್ಮತಿಯೇತರ ಅಕ್ಕಿ ಮತ್ತು ಇತರ ಕೆಲವು ಧಾನ್ಯಗಳ ರಫ್ತು ಮಾಡುವುದಕ್ಕೆ ಕೇಂದ್ರ ಸರ್ಕಾರವು ನಿಷೇಧ ಹೇರಿತ್ತು. ಕೆಲ ದಿನಗಳ ಹಿಂದೆ ಮತ್ತೆ ಕುಚ್ಚಲಕ್ಕಿ ಮತ್ತು ಬಾಸ್ಮತಿ ಅಕ್ಕಿಯ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿದ್ದ ಪರಿಣಾಮ ಏಷ್ಯಾದಲ್ಲಿ ಅಕ್ಕಿ ಬೆಲೆಗಳು 15 ವರ್ಷಗಳ ನಂತರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದವು. ಭಾರತದ ಈ ನಿರ್ಧಾರವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿತ್ತು.

ಈ ನಡುವೆ ಭಾರತವು ಇತ್ತೀಚೆಗೆ ಯುಎಇ, ಭೂತಾನ್, ಮಾರಿಷಸ್ ಮತ್ತು ಸಿಂಗಾಪುರಕ್ಕೆ ನಿಷೇಧಿತ ವರ್ಗದಲ್ಲಿರುವ ಅಕ್ಕಿ ವಿಧದ ಸೀಮಿತ ರಫ್ತಿಗೆ ಅನುಮತಿ ನೀಡಿದೆ. ಜುಲೈ 20ರ ಭಾರತದ ನಿರ್ಧಾರದ ನಂತರ ಅಕ್ಕಿ ರಫ್ತು ಪುನರಾರಂಭಿಸಲು ಈ ದೇಶಗಳು ಮೋದಿ ಸರ್ಕಾರಕ್ಕೆ ಮನವಿ ಮಾಡಿದ್ದವು.
ಕಳೆದ ಆಗಸ್ಟ್ನಲ್ಲಿ ಸಿಂಗಾಪುರವು ಸುಮಾರು 110,000 ಟನ್ಗಳಷ್ಟು ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ಕಳುಹಿಸಿಕೊಡುವಂತೆ ವಿನಂತಿಸಿತ್ತು. ಆ ಮನವಿಗೆ 50 ಸಾವಿರ ಟನ್ಗಳ ರಫ್ತಿಗೆ ಅನುಮತಿ ನೀಡಿದೆ.
ಈ ನಡುವೆ ವಿಶ್ವಸಂಸ್ಥೆಯು ವಿಶ್ವ ಆಹಾರ ವಿತರಣಾ ಯೋಜನೆಯ ಮಾನವೀಯ ಕಾರ್ಯಕ್ರಮಗಳಿಗಾಗಿ 200,000 ಟನ್ಗಳಷ್ಟು ಅಕ್ಕಿಯನ್ನು ನೀಡುವಂತೆ ವಿನಂತಿಸಿದೆ. ಅಲ್ಲದೇ, ಅಕ್ಕಿ ಸೇರಿದಂತೆ ಕೆಲವು ಕೃಷಿ ಉತ್ಪನ್ನಗಳನ್ನು ಪೂರೈಕೆ ಮಾಡುವಂತೆ ಬಾಂಗ್ಲಾದೇಶ ಕೂಡ ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತವು ಆಗಸ್ಟ್ 17 ರವರೆಗೆ 1.97 ಮಿಲಿಯನ್ ಟನ್ ಬಾಸ್ಮತಿ ಅಲ್ಲದ ಬಿಳಿ ಅಕ್ಕಿಯನ್ನು ರಫ್ತು ಮಾಡಿದೆ. ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತುದಾರ ದೇಶವಾಗಿದ್ದು, ನಂತರದ ಸ್ಥಾನದಲ್ಲಿ ಥಾಯ್ಲೆಂಡ್ ಹಾಗೂ ವಿಯೆಟ್ನಾಂನಂತಹ ದೇಶಗಳಿವೆ.
On the rice issue, Karnataka CM Siddaramaiah says "They (Centre) are giving rice to Singapore but not to our state. The Central govt is doing politics. No rice is given to the poor people of Karnataka. We said we would pay for the rice but still, they did not provide us rice.… pic.twitter.com/URV1kotpk9
— ANI (@ANI) September 29, 2023
ಸಿಂಗಾಪುರಕ್ಕೆ ಅಕ್ಕಿ ಕಳುಹಿಸುವ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ “ಕೇಂದ್ರ ಸರ್ಕಾರದವರಿಗೆ ಸಿಂಗಾಪುರಕ್ಕೆ ನೀಡಲು ಅಕ್ಕಿ ಇದೆ. ನಮ್ಮ ರಾಜ್ಯಕ್ಕೆ ಕೇಳಿದಾಗ ಮಾತ್ರ ಅಕ್ಕಿ ಇಲ್ಲ. ಇದೆಲ್ಲ ರಾಜಕೀಯ ಅಂತ ಇದರಲ್ಲಿ ಸ್ಪಷ್ಟವಾಗಿ ಜನರಿಗೆ ಗೊತ್ತಾಗುತ್ತದೆ. ಕರ್ನಾಟಕದ ಬಡವರಿಗೆ ಅಕ್ಕಿ ನೀಡುವುದು ಕೇಂದ್ರ ಸರ್ಕಾರಕ್ಕೆ ಇಷ್ಟವಿಲ್ಲ. ಅನ್ನಭಾಗ್ಯದಡಿಯಲ್ಲಿ ಬಡವರಿಗೆ ಅಕ್ಕಿ ನೀಡಬೇಕಾಗಿತ್ತು. ಆದರೆ ನೀಡಲಿಲ್ಲ. ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಬಡವರ ವಿರುದ್ದವೇ ಕೆಲಸ ಮಾಡುತ್ತಿದೆ” ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕಕ್ಕೆ ನೀಡಲು ಇಲ್ಲ ಎಂದಿದ್ದ ಮೋದಿ ಸರ್ಕಾರ!
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಪಕ್ಷವು, ಅನ್ನಭಾಗ್ಯ ಯೋಜನೆಯಡಿಯಲ್ಲಿ 10 ಕೆ ಜೆ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಕಾಂಗ್ರೆಸ್ ಈ ಗ್ಯಾರಂಟಿಯನ್ನು ಜಾರಿಗೆ ತರಲು ಅಕ್ಕಿಯ ಕೊರತೆ ಎದುರಾಗಿತ್ತು. ಅನ್ನಭಾಗ್ಯ ಯೋಜನೆಯಡಿಯಲ್ಲಿ ಅಕ್ಕಿ ಪೂರೈಕೆ ಮಾಡುವ ನಿಟ್ಟಿನಲ್ಲಿ ಅಗತ್ಯಕ್ಕೆ ಬೇಕಿದ್ದ ಅಕ್ಕಿಯನ್ನು ಕೇಂದ್ರ ಆಹಾರ ನಿಗಮದಿಂದ ಖರೀದಿ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಕೇಂದ್ರ ಆಹಾರ ನಿಗಮ ರಾಜ್ಯಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿತ್ತು. ಹೀಗಾಗಿ, ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಕೊಡಲಾಗದೇ ತಲಾ 5 ಕೆ ಜಿ ಅಕ್ಕಿ ಹಾಗೂ ಉಳಿದ 5 ಕೆ ಜಿ ಬದಲಾಗಿ ಹಣವನ್ನು ನೀಡುತ್ತಿತ್ತು.
ಅಕ್ಕಿ ಕೊರತೆ ಎದುರಾದ ಹಿನ್ನೆಲೆಯಲ್ಲಿ ಐದು ಕೆ ಜಿ ಅಕ್ಕಿಯ ಬದಲಾಗಿ ಪ್ರತಿಯೊಬ್ಬರಿಗೆ ಪ್ರತಿ ತಿಂಗಳು 170 ರೂ ಹಣವನ್ನು ಹಾಕಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು. ಅದರಂತೆ ಅಕೌಂಟಿಗೆ 170 ರೂ. ಹಣವನ್ನು ಹಾಕಲಾಗಿತ್ತು. ಇದೀಗ ಮುಂಬರುವ ತಿಂಗಳಿಂದ ಹಣಕ್ಕೆ ಬದಲಾಗಿ ಹತ್ತು ಕೆಜಿ ಅಕ್ಕಿಯನ್ನು ಬರ ಪೀಡಿತ ತಾಲೂಕುಗಳಿಗೆ ಪೂರೈಕೆ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ ನಿನ್ನೆ ಬೆಂಗಳೂರಿನಲ್ಲಿ ತಿಳಿಸಿದ್ದರು.