ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರು ವಿದ್ಯುತ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದು, ದಾವಣಗೆರೆ-ಹೊಸದುರ್ಗ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಗುಂಜಿಗನೂರು ವಿದ್ಯುತ್ ವಿತರಣಾ ಕೇಂದ್ರದ ಬಳಿ ಚಿಕಂದವಾಡಿ, ಗುಂಜನೂರ್, ಅರಸನಘಟ್ಟ, ಚಿಕ್ಕಜಾಜೂರು, ಬಿದುರ್ಗ, ಚನ್ನಪಟ್ಟಣ, ಅಪರಸನಹಳ್ಳಿ, ಕೋಟೆಹಾಳ್, ಎಮ್ಮಿಗನೂರು ಸೇರಿದಂತೆ ಇತರ ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿದರು.
“ಹೊಳಲ್ಕೆರೆ ತಾಲೂಕಿನಲ್ಲಿ ಗುಂಜಿಗನೂರು ವಿದ್ಯುತ್ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ರೈತರಿಗೆ ಕೇವಲ ಒಂದು ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಅದೂ ಕೂಡ ಅಸಮರ್ಪಕವಾಗಿದ್ದು, ಕಣ್ಣಾ ಮುಚ್ಚಾಲೆಯಾಟ ಆಡುತ್ತಿದೆ. ವಿದ್ಯುತ್ ಇಲಾಖೆ ರೈತರ ಬದುಕಿನಲ್ಲಿ ಆಟವಾಡುತ್ತಿದೆ” ಎಂದು ಆರೋಪಿಸಿದರು.
“ಮುಂಗಾರು ಮಳೆ ಮತ್ತು ಹಿಂಗಾರು ಮಳೆಗಳು ಕೈ ಕೊಟ್ಟಿದ್ದು, ರೈತ ಬರದ ಪರಿಸ್ಥಿತಿಯಲ್ಲಿ ಕಂಗಾಲಾಗಿದ್ದಾನೆ. ಈ ಸಮಯದಲ್ಲಿ ಸರ್ಕಾರ ಮುಂಜಾಗ್ರತೆ ವಹಿಸಿ ರೈತರಿಗೆ ಅವಶ್ಯಕವಾದ ವಿದ್ಯುತ್ ಪೂರೈಕೆ ಮಾಡಬೇಕಾಗಿತ್ತು. ಆದರೆ ಅದನ್ನು ನಿರ್ವಹಿಸುವಲ್ಲಿ ಸರ್ಕಾರ ಮತ್ತು ವಿದ್ಯುತ್ ಇಲಾಖೆ ವಿಫಲವಾಗಿದೆ. ಕೂಡಲೇ ಪ್ರತಿದಿನ 6ರಿಂದ 7ಗಂಟೆಗಳ ಕಾಲ ಥ್ರೀ ಫೇಸ್ ವಿದ್ಯುತ್ ಪೂರೈಸಬೇಕು. ನಿರಂತರವಾಗಿ ಉತ್ತಮ ಗುಣಮಟ್ಟದಲ್ಲಿ ವಿದ್ಯುತ್ ಪೂರೈಸಬೇಕು” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ತಾಲೂಕಿನಲ್ಲಿ ಅತಿ ಹೆಚ್ಚು ವಾಣಿಜ್ಯ ಬೆಳೆಯ ತೋಟಗಳಿದ್ದು, ಅದನ್ನೇ ನಂಬಿ ಬಹುತೇಕ ರೈತ ಕುಟುಂಬಗಳು ಬದುಕಿವೆ. ಇತ್ತ ಮಳೆಯೂ ಬಾರದೆ ತೋಟಗಳಿಗೆ ಕೊಳವೆ ಬಾವಿಗಳಿಂದ ನೀರುಣಿಸಲು ವಿದ್ಯುತ್ ಇಲ್ಲದೆ ತಾಲೂಕಿನ ರೈತರು ಕಂಗಾಲಾಗಿದ್ದು, ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಮೇಲಾಧಿಕಾರಿಗಳು ಕೂಡಲೇ ಸಮಸ್ಯೆಯನ್ನು ಪರಿಹರಿಸಬೇಕು” ಎಂದು ಆಗ್ರಹಿಸಿದರು.
ಈ ಬಗ್ಗೆ ರೈತ ಮುಖಂಡ ಶಶಿಧರ್ ಗುಂಟನೂರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ಸರ್ಕಾರವನ್ನು ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಒತ್ತಾಯಿಸುತ್ತಿದ್ದೇವೆ. ಇಲ್ಲಿ ರೈತರು ತೋಟಗಾರಿಕೆ ಬೆಳೆಗಳಿಗೆ ಬೋರ್ವೆಲ್ ಮೂಲಕ ನೀರು ಹಾಯಿಸಲು ವಿದ್ಯುತ್ ಅವಲಂಬಿಸಿದ್ದು, ವಿದ್ಯುತ್ ಇಲಾಖೆಯವರು ವಿದ್ಯುತ್ ಪೂರೈಸದೆ ಕಂಗಾಲಾಗಿದ್ದೇವೆ. ಸರ್ಕಾರ ರೈತರಿಗೆ ಸರಿಯಾದ ವಿದ್ಯುತ್, ನೀರಾವರಿ ಪೂರೈಕೆ ಮಾಡಿದರೆ ನಾವೇ ಸರ್ಕಾರವನ್ನು ಸಾಕುತ್ತೇವೆ” ಎಂದರು.
ಭೋವಿ ಸಮಾಜದ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, “ಈ ಸರ್ಕಾರ ರೈತರಿಂದಲೇ ಅಧಿಕಾರಕ್ಕೆ ಬಂದಿದೆ. ಆದರೆ ಭಾಗ್ಯಗಳ ಮೊರೆ ಹೋಗಿ ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತರು ತಕ್ಕ ಪಾಠ ಕಲಿಸುತ್ತಾರೆ. ಹಾಗಾಗಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಹೊಳಲ್ಕೆರೆ ತಾಲೂಕು ವಿದ್ಯುತ್ ಇಲಾಖೆಯ ಎಇಇ ನಾಗರಾಜ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾತನಾಡಿ, “ನಮಗೆ ಪೂರೈಕೆಯಾಗುತ್ತಿರುವ ವಿದ್ಯುತ್‌ನಲ್ಲಿ ಕೊರತೆ ಇದ್ದು, ಮಾರ್ಗ ಮಧ್ಯದ ರಿಪೇರಿಗಳು ಕೂಡ ವಿದ್ಯುತ್ ರೇಖೆಗೆ ತಡೆಯಾಗುತ್ತವೆ. ಒಂದೆರಡು ದಿನಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಹಾಗೂ ಹೆಚ್ಚಿನ ವಿದ್ಯುತ್ ಪೂರೈಕೆಗೆ ಮನವಿ ಮಾಡಿದ್ದು, ಬೇಡಿಕೆ ಸಲ್ಲಿಸಲಾಗಿದೆ. ಒಂದೆರಡು ದಿನಗಳಲ್ಲಿ ರೈತರಿಗೆ ನಿರಂತರ ಐದು ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೋಮು ದ್ವೇಷ ಬಿತ್ತುವ ಕೇಂದ್ರವಾಗುತ್ತಿದೆ ಕೇಂದ್ರೀಯ ವಿವಿ; ಸಂಯುಕ್ತ ಹೋರಾಟ ಕರ್ನಾಟಕ ಖಂಡನೆ
ಅಧಿಕಾರಿಗಳು ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಪ್ರತಿಭಟನಾಕಾರರು ಎರಡು ದಿನಗಳು ಸಮಯ ನೀಡುತ್ತೇವೆ. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ರೈತರು ಆಗಮಿಸಿ ತೀವ್ರ ಹೋರಾಟಕ್ಕೆ ಮುಂದಾಗುತ್ತೇವೆ” ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಮುಂದೂಡಿದರು.
ಪ್ರತಿಭಟನೆಯಲ್ಲಿ ವಿಶ್ವನಾಥ್, ಸತೀಶ್, ರುದ್ರೇಶ್, ಶಿವಕುಮಾರ್, ಮನು, ಯೋಗೇಶ್, ಗಿರೀಶ್, ಹರ್ಷ, ಅರುಣ್, ಮಧು, ಜಗದೀಶ್, ದಿವಾಕರ್, ಯೋಗೇಶಪ್ಪ, ರಾಜು, ಉಮೇಶ್ ಸೇರಿದಂತೆ ಹಲವು ರೈತ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ರೈತರು ಇದ್ದರು.