ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿದ್ದ ಕಾರಣ ಬಂಧನಕ್ಕೆ ಒಳಗಾದ ಬಳಿಕ ಹೊಸ ಚರ್ಚೆಗಳು ಶುರುವಾಗಿದೆ. ಸಿನಿಮಾ ನಟರು, ಖ್ಯಾತನಾಮರು, ರಾಜಕಾರಣಿಗಳು ಇಂತಹದ್ದೆ ಪೆಂಡೆಂಟ್ ಧರಿಸಿರುವುದು ವಿವಾದದ ಕೇಂದ್ರ ಬಿಂದುವಾಗಿದೆ. ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಬೇರೆ ಕಾನೂನೇ ಎಂದು ಜನಸಾಮಾನ್ಯರು ಕೇಳಲಾರಂಭಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಳಿಯ ಕೂಡ ಹುಲಿ ಉಗುರು ಧರಿಸಿದ್ದಾರೆ ಎಂಬ ಆರೋಪ ಬಂದಿದೆ.
ಮುಖ್ಯವಾಗಿ ನಟ, ರಾಜ್ಯಸಭಾ ಬಿಜೆಪಿ ಸದಸ್ಯ ಜಗ್ಗೇಶ್ ಅವರು ಸಂದರ್ಶನವೊಂದರಲ್ಲಿ ತನ್ನ ಬಳಿ ಇರುವ ಹುಲಿ ಉಗುರಿನ ಪೆಂಡೆಂಟ್ ತೋರಿಸುತ್ತಾ, “ನಾನು ಇಪ್ಪತ್ತು ವರ್ಷದವನಾಗಿದ್ದಾಗ ನನ್ನ ತಾಯಿ ಕೊಟ್ಟಿದ್ದು. ನನ್ನ ಮಗ ಹುಲಿಯಂತೆ ಇರಬೇಕೆಂದು ಒರಿಜಿನಲ್ ಹುಲಿ ಉಗುರಲ್ಲಿ ಮಾಡಿಸಿದ್ದು ಇದು” ಎಂದಿರುವ ವಿಡಿಯೊ ತುಣುಕು ವೈರಲ್ ಆಯಿತು. ಪ್ರಕರಣ ಬಿಜೆಪಿ ಸಂಸದನ ಸುತ್ತ ಸುತ್ತಿಕೊಂಡ ತಕ್ಷಣ, ಮುಸ್ಲಿಂ ದ್ವೇಷವನ್ನೇ ರಾಜಕೀಯದ ದಾಳವಾಗಿಸಿಕೊಂಡವರು ತರಹೇವಾರಿ ಕಥೆಗಳನ್ನು, ನಿರೂಪಣೆಗಳನ್ನು ಹರಿಯಬಿಟ್ಟಿದ್ದಾರೆ.
ರಾಷ್ಟ್ರಪ್ರಾಣಿ ಹುಲಿಯನ್ನು ಕೊಂದ ಟಿಪ್ಪುವನ್ನು ಕಾಂಗ್ರೆಸ್ ಆರಾಧಿಸುತ್ತಿದೆ, ರಾಷ್ಟ್ರಪಕ್ಷಿ ನವಿಲಿನ ಗರಿಗಳನ್ನು ಮುಸ್ಲಿಂ ಬಾಬಾಗಳು ಬಳಸುತ್ತಾರೆ- ಇತ್ಯಾದಿ ನಿರೂಪಣೆಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿದ್ದು 1972ರಲ್ಲಿ. ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಆಳಿದಾತ. ಬ್ರಿಟಿಷರ ವಿರುದ್ಧ ಯುದ್ಧ ಮಾಡುತ್ತಾ 1799ರಲ್ಲಿ ವೀರ ಮರಣವನ್ನು ಅಪ್ಪಿದ ಟಿಪ್ಪು ಸುಲ್ತಾನ್, ’ಮೈಸೂರು ಹುಲಿ’ಯೆಂದೇ ಖ್ಯಾತನಾದವನು. ಈತನ ಹೋರಾಟದ ಗುಣಕ್ಕೆ ಅನ್ವರ್ಥವಾಗಿ ‘ಹುಲಿಯೊಂದಿಗೆ ಕಾದಾಡಿದ ವರ್ಣಚಿತ್ರ’ವೂ ಜನಜನಿತ. ಹಾಗೆ ನೋಡಿದರೆ ‘ವ್ಯಾಘ್ರನಖ’ (ಹುಲಿಯ ಉಗುರು) ಎಂದೇ ಖ್ಯಾತವಾದ ಡ್ರಾಗನ್ನಿಂದ ಶಿವಾಜಿಯು 1659ರಲ್ಲಿ ಬಿಜಾಪುರ ಸುಲ್ತಾನನ ಸೇನಾಧಿಪತಿ ಅಫ್ಜಲ್ ಖಾನ್ನನ್ನು ಕೊಂದ ಇತಿಹಾಸವಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಮೈಸೂರು ಹುಲಿ ಖ್ಯಾತಿಯ ಟಿಪ್ಪುವಿನ ವಿರುದ್ಧ ಮರಾಠರು, ಹೈದ್ರಾಬಾದಿನ ನಿಜಾಮರು ಕೈ ಜೋಡಿಸಿದ್ದನ್ನು ಗಮನಿಸಬೇಕು. ಮುಸ್ಲಿಂ v/s ಹಿಂದೂ ಎಂಬಂತೆ ಇಂದಿನ ಕೋಮುವಾದೀಕರಣದ ಕಣ್ಣಿನಲ್ಲಿ ಇತಿಹಾಸವನ್ನು ನೋಡುವುದೇ ತಪ್ಪಾಗುತ್ತದೆ. ಇದರ ನಡುವೆ ನವಿಲನ್ನು ಎಳೆದು ತಂದು ಮುಸ್ಲಿಮರತ್ತ ಬಾಣ ಬಿಡುವವರಿಗೆ ನವಿಲುಗರಿಯನ್ನು ಎಲ್ಲ ಸಮುದಾಯದವರು ಧಾರ್ಮಿಕ ಸೂಚಕವಾಗಿ ಬಳಸುತ್ತಾರೆಂಬ ಕನಿಷ್ಠ ಅರಿವು ಇದ್ದಂತೆ ಕಾಣಿಸುತ್ತಿಲ್ಲ.

ನವಿಲುಗರಿಯನ್ನು ಸಂಗ್ರಹಿಸುವುದು ಕೂಡ ಅಪರಾಧ ಎನ್ನುತ್ತದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ. ಈ ಕಾನೂನು ಬದುಕಿಗೆ ಉಪಯೋಗವಾದದ್ದು ಉಂಟು, ಹಲವು ಜನರ ಹೊಟ್ಟೆ ಮೇಲೆ ಹೊಡೆದದ್ದೂ ಉಂಟು. ಹಾವಾಡಿಸುತ್ತಾ, ಮಂಗನ ಕುಣಿಸುತ್ತಾ ಜೀವನ ಕಟ್ಟಿಕೊಂಡಿದ್ದ ಅಲೆಮಾರಿ ಸಮುದಾಯಗಳ ಕಣ್ಣಿಗೆ ಇಂತಹ ಕಾನೂನುಗಳು ಕಾಣುವುದೇ ಬೇರೆಯ ರೀತಿ. ಬಡಜನರಿಗೆ ಮಾರಕವಾಗುವ ಅಂಶಗಳಿರುವ ಕಾಯ್ದೆಗಳನ್ನು ಪುನರಾಮರ್ಶೆ ಮಾಡಿದರೆ ತಪ್ಪೇನೂ ಇಲ್ಲ. ಆದರೆ ನವಿಲುಗರಿಯ ಪ್ರಕರಣ ಇಟ್ಟುಕೊಂಡು ಮತ್ತೊಂದು ಧರ್ಮವನ್ನು ನಿಂದಿಸುವವರ ಉದ್ದೇಶವೇನು?
’ಸಂವಾದ’ ಚಾನೆಲ್ನ ಸಂಪಾದಕ ವೃಶಾಂಕ್ ಭಟ್ ಮಾಡಿರುವ ಎರಡು ಪೋಸ್ಟ್ಗಳು ಮುಸ್ಲಿಂ ದ್ವೇಷಕ್ಕೆ ಪ್ರಚೋದಿಸಿದಂತೆ ಕಾಣುತ್ತಿವೆ. “ನವಿಲುಗರಿ ಸಂಗ್ರಹವೂ ಶಿಕ್ಷಾರ್ಹ ಅಪರಾಧ ಎಂದು ಸರ್ಕಾರ ಹೇಳಿದೆ. ಅಂಗಡಿಗಳಿಂದ ಹಣ ಸಂಗ್ರಹಿಸುವ ಈ ಸ್ಮೋಕಿಂಗ್ ಬಾಬಾಗಳನ್ನು ಕಾಂಗ್ರೆಸ್ ಸರ್ಕಾರ ಅರೆಸ್ಟ್ ಮಾಡತ್ತ?” ಎಂಬ ಪ್ರಶ್ನೆಯನ್ನು ಮುಸ್ಲಿಂ ಬಾಬಾರೊಬ್ಬರ ಫೋಟೋದೊಂದಿಗೆ ಕೇಳಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, “ಹುಲಿ ಸಂತತಿ ನಾಶಕ್ಕೆ ಪ್ರೇರಣೆಯಾದ ಘಟನೆ” ಎಂದು ಟಿಪ್ಪು ಸುಲ್ತಾನ್ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕ ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸಿ ವಿವಾದ ಸೃಷ್ಟಿಸಿದ್ದ ರೋಹಿತ್ ಚಕ್ರತೀರ್ಥ ಅವರು ಇಂತಹ ಕೋಮುದ್ವೇಷಪೂರಿತ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ! ಇಂತಹ ಅಸೂಕ್ಷ್ಮ ವ್ಯಕ್ತಿಯು ರೂಪಿಸಿದ ಪಾಠಗಳನ್ನು ಓದಬೇಕಾದ ಸ್ಥಿತಿ ರಾಜ್ಯದ ಮಕ್ಕಳಿಗೆ ಓದಿಸಬೇಕಾದ ಸ್ಥಿತಿ ಬಂದದ್ದು ಮಾತ್ರ ಚಾರಿತ್ರಿಕ ಲೋಪ, ಇರಲಿ.
“ಹುಲಿಯನ್ನು ಕೊಲ್ಲುತ್ತಿರುವ ಸಳ- ಹೊಯ್ಸಳ ಸಾಮ್ರಾಜ್ಯದ ಲಾಂಛನವಾಗಿತ್ತು. ಹೊಯ್ಸಳರೇ ಈ ನಾಡಿನ ವನ್ಯಜೀವಿಗಳ ಅವನತಿಗೆ ಕಾರಣ ಎಂದು ಆರೋಪಿಸಲು ಸಾಧ್ಯವೇ? ಇಷ್ಟು ಕಾಮನ್ ಸೆನ್ಸ್ ಇಲ್ಲವೇ?” ಎಂದು ಜನರು ಸಂವಾದದ ಸಂಪಾದಕ ವೃಷಾಂಕ್ ಭಟ್ ಅವರನ್ನು ಪ್ರಶ್ನಿಸುತ್ತಿದ್ದಾರೆ.
“ನವಿಲು ಗರಿಗಳನ್ನು ಮುಸ್ಲಿಂ ಬಾಬಾಗಳು ಮಾತ್ರ ಬಳಸುತ್ತಾರೆ” ಎಂಬುದು ಸರಿಯಾದ ತಿಳಿವಳಿಕೆ ಅಲ್ಲ. ಇಸ್ಲಾಂ ಭಾರತೀಕರಣಗೊಂಡು ಇಲ್ಲಿ ಸೂಫಿ ಪರಂಪರೆ ಬೆಳೆದಿದೆ. ಹಿಂದೂ- ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ದರ್ಗಾಗಳಲ್ಲಿಯೂ ನವಿಲುಗರಿಗಳನ್ನು ಬಳಸುತ್ತಾರೆ.
ಇತರ ಧರ್ಮಗಳಲ್ಲೂ ಧಾರ್ಮಿಕತೆಯ ಭಾಗವಾಗಿ ನವಿಲುಗರಿ ಬಳಕೆಯಲ್ಲಿದೆ. ಅಹಿಂಸೆಯ ಪ್ರತಿರೂಪವಾಗಿ ಗೌರವಿಸಲ್ಪಡುವ ದಿಗಂಬರ ಜೈನ ಮುನಿಗಳೂ ನವಿಲುಗರಿ ಬಳಸುತ್ತಾರೆ. ಸರ್ವಸಂಗ ಪರಿತ್ಯಾಗಿಗಳಾದ ಅವರು, ನವಿಲುಗರಿ ಗುಚ್ಛದ ಮೂಲಕ ಗುಪ್ತಾಂಗವನ್ನು ಮುಚ್ಚಿಕೊಳ್ಳುವುದುಂಟು.

ಗ್ರಾಮದೇವತೆಗಳ ಅಲಂಕಾರದಲ್ಲಿ ನವಿಲುಗರಿಗಳನ್ನು ಕಾಣಬಹುದು. ಎಲ್ಲವ್ವನನ್ನೋ, ಮಾರವ್ವನನ್ನೋ, ದುರುಗವ್ವ- ಮುರುಗವ್ವನನ್ನೋ ಹೊತ್ತು ಉರುಮೆ ನುಡಿಸುತ್ತಾ ಭಿಕ್ಷಾಟನೆ ಮಾಡುವ ಅಲೆಮಾರಿ ಸಮುದಾಯದವರು, ಬುಡುಬುಡುಕೆಯವರು, ಜೋಗತಿಯಮ್ಮಂದಿರು, ಹೀಗೆ ವಿವಿಧ ಜನ ಸಮೂಹ ನವಿಲು ಗರಿಗಳನ್ನು ಬಳಸುತ್ತಾರೆ. ಇದೆಲ್ಲವೂ ಹೊಟ್ಟೆಪಾಡಿನ ಭಾಗ. ಬಹುತ್ವ ಭಾರತದ ಬದುಕಿನ ಕುರಿತು ಅರಿವು ಉಳ್ಳವರ್ಯಾರೂ ನವಿಲುಗರಿಯನ್ನು ಮತಾಂಧತೆಯನ್ನು ಪ್ರಚೋದಿಸುವುದಕ್ಕಾಗಿ ನೋಡುವುದಿಲ್ಲ. ಹೇಳಬೇಕೆಂದರೆ, ಹಿಂದೂ ಧರ್ಮಗುರುಗಳೂ ಆಗಾಗ್ಗೆ ನವಿಲುಗರಿ ಗುಚ್ಛಗಳನ್ನು ಪಕ್ಕದಲ್ಲಿ ಇಟ್ಟುಕೊಂಡಿರುತ್ತಾರೆ. ಯಕ್ಷಗಾನದ ಕಲಾವಿದರು ಕೃಷ್ಣನ ವೇಷಕ್ಕೂ ಗರಿಗಳನ್ನು ಬಳಸುವುದುಂಟು.

ಪ್ರಧಾನಿ ನರೇಂದ್ರ ಮೋದಿಯವರೇ ನವಿಲಿನ ಜೊತೆ ಇರುವ, ನವಿಲು ಗರಿಗಳನ್ನು ಹೊಂದಿದ ವೇಷಭೂಷಣದಲ್ಲಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ವೈರಲ್ ಆಗುತ್ತಿವೆ. ಕಾನೂನಿನ ಚೌಕಟ್ಟನ್ನು ಮೀರಿ ನೋಡಿದರೂ ಹುಲಿ ಉಗುರಿಗೂ, ನವಿಲುಗರಿಗೂ ವ್ಯತ್ಯಾಸಗಳಿವೆ. ಬೇಲಿ ಮರೆಯಲ್ಲಿ ಓಡಾಡುತ್ತಾ ಅಥವಾ ಬಯಲು ಪ್ರದೇಶದಲ್ಲಿ ನರ್ತಿಸುತ್ತಾ ಗಂಡು ನವಿಲುಗಳು ಗರಿಗಳನ್ನು ಉದುರಿಸುವುದು ಉಂಟು. ಹಳ್ಳಿಗಳ ಗದ್ದೆ ಬಯಲಿನಲ್ಲಿ, ಕೆರೆ ಅಂಗಳದಲ್ಲಿ ನವಿಲುಗಳು ಚೆಲ್ಲಿದ ಗರಿಗಳು ಕಾಣಸಿಗುತ್ತವೆ. ಹುಲಿ ಉಗುರುಗಳು ಬೇಕೆಂದು ಹುಲಿಗಳನ್ನೇ ಕೊಲ್ಲುತ್ತಾರೆಂದು ಹೇಳಬಹುದಾದರೂ ನವಿಲು ಗರಿಗಳಿಗಾಗಿ ನವಿಲುಗಳನ್ನು ಕೊಲ್ಲುತ್ತಾರೆಂದು ವಾದಿಸುವುದು ಕಷ್ಟ. ಅಂದಹಾಗೆ ನವಿಲಿನ ಮಾಂಸಕ್ಕಾಗಿ ಕೊಂದು ಕಾನೂನಿನ ಕುಣಿಕೆಗೆ ಸಿಲುಕುವವರು ಇದ್ದೇ ಇದ್ದಾರೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.