ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಗ್ರಾಹಕರ ಪಾಲಿಗೆ ʼಕಣ್ಣಿರುʼಳ್ಳಿ ಯಾಗುತ್ತಿದೆ. ಒಂದು ಕೆಜಿ ಈರುಳ್ಳಿ ದರ 80ರಿಂದ 120ರೂಪಾಯಿ ಇದ್ದು, ಮತ್ತಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಬೆಲೆ ಏರಿಕೆಯಿಂದ ವಿಜಯಪುರದ ರೈತರಿಗೆ ಲಾಭ ಸಿಗುತ್ತಿಲ್ಲ. ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ಕಣ್ಣೀರು ತರಿಸುತ್ತಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಗ್ರಾಹಕರು 100 ರೂ.ವರೆಗೆ ಕೆ.ಜಿ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ. ಆದರೆ, ಇದರ ಲಾಭ ರೈತರ ಕೈಸೇರುತ್ತಿಲ್ಲ. ರೈತರು ಕ್ವಿಂಟಾಲ್ ಈರುಳ್ಳಿಯನ್ನು 2,500 ರೂ.ನಿಂದ 6,000 ರೂ.ವರೆಗೆ ಮಾತ್ರವೇ ಮಾರಾಟ ಮಾಡುತ್ತಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಾಗುತ್ತಿದೆ. ಈ ಬಾರಿ ಮಳೆಯ ಕೊರತೆಯ ಮಧ್ಯೆ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಾಗಿತ್ತು. ಆದರೆ, ಮಳೆಯಾಗದ ಕಾರಣ ಶೇಕಡಾ 45ರಿಂದ 50ರಷ್ಟು ಈರುಳ್ಳಿ ಬೆಳೆ ಹಾನಿಯಾಗಿದೆ. ಇದೆಲ್ಲದರ ನಡುವೆಯೂ, ವಿಜಯಪುರದ ಎಪಿಎಂಸಿ ಆವರಣದಲ್ಲಿ ಬಹಿರಂಗ ಹರಾಜಿನಲ್ಲಿ ಒಂದು ಕ್ವಿಂಟಾಲ್ ಈರುಳ್ಳಿ 2,500ರಿಂದ 6000 ರೂಪಾಯಿವರೆಗೆ ಮಾತ್ರವೇ ಮಾರಾಟವಾಗಿದೆ. ಬೆಳೆ ನಷ್ಟದಿಂದಾಗಿ ರೈತರು ನಷ್ಟ ಅನುಭಸಿದ್ದಾರೆ.
ಈರುಳ್ಳಿ ದರ ನಿತ್ಯ ಏರಿಕೆಯಾಗುತ್ತಿದೆ ಎಂಬುದನ್ನು ಕಂಡು ಹಲವಾರು ರೈತರು ಈರುಳ್ಳಿ ಕಟಾವು ಮಾಡಿದ್ದಾರೆ. ಆದರೆ, ಅವರಾರಿಗೂ ಬೆಲೆ ಏರಿಕೆಯ ಲಾಭ ದೊರೆತಿಲ್ಲ. ರೈತರು ಕಡಿಮೆ ದರಕ್ಕೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.