ರಾಜ್ಯ ರಾಜಧಾನಿ ಬೆಂಗಳೂರಿನ ಕಾಡುಗೋಡಿ ಬಳಿ ಇರುವ ದಿನ್ನೂರು ಗ್ರಾಮದಲ್ಲಿ ದಲಿತರ ಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳಲು ಮುಂದಾಗಿದೆ. ದಲಿತರ ಹೆಸರಿನಲ್ಲಿರುವ ಭೂಮಿಯನ್ನು ಅರಣ್ಯ ಭೂಮಿಯ ಅಕ್ರಮ ಒತ್ತುವರಿ ಎಂದು ಬಿಂಬಿಸಿರುವ ಸರ್ಕಾರ, ಆ ಭೂಮಿಯಲ್ಲಿ ಗಿಡಗಳನ್ನು ನೆಡಲು ಮುಂದಾಗಿದೆ ಎಂದು ಆರೋಪಿಸಲಾಗಿದೆ. ಆ ಭೂಮಿಯ ವಿಚಾರವಾಗಿ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನೀಡಿರುವ ‘ತಡೆಯಾಜ್ಞೆ’ಯನ್ನೂ ಉಲ್ಲಂಘಿಸಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ದಲಿತರ ಭೂಮಿಯಲ್ಲಿ ಗುಂಡಿಗಳನ್ನು ತೆಗೆದು, ಸಸಿ ನೆಡಲು ಮುಂದಾಗಿದ್ದಾರೆ. ದಿನ್ನೂರಿನ ದಲಿತ ಮಹಿಳೆಯರು ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದಿನ್ನೂರಿನ ದಲಿತ ಕಾಲೋನಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ 120.6 ಎಕರೆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆ ಭೂಮಿಯನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈಗ ಅರಣ್ಯ ಇಲಾಖೆ ಏಕಾಏಕಿ ಆ ಪ್ರದೇಶಕ್ಕೆ ನುಗ್ಗಿದ್ದು, ಅದನ್ನು ಅರಣ್ಯ ಭೂಮಿಯೆಂದು ವಾದಿಸುತ್ತಿದ್ದಾರೆ. ಅರಣ್ಯ ಭೂಮಿಯನ್ನು ದಲಿತರು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ತೆರವುಗೊಳಿಸುತ್ತಿದ್ದೇವೆ ಎನ್ನುತ್ತಿದ್ದಾರೆ.
ಅರಣ್ಯ ಇಲಾಖೆಯ ಕಣ್ಣು ತಮ್ಮ ಭೂಮಿಯ ಮೇಲೆ ಬಿದ್ದಿದೆ ಎಂಬುದನ್ನು ಅರಿತ ದಲಿತರು, ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಆದಾಗ್ಯೂ, ಪೊಲೀಸರ ಸಮ್ಮುಖದಲ್ಲಿ ಅರಣ್ಯ ಅಧಿಕಾರಿಗಳು ಜೆಸಿಬಿಗಳ ಮೂಲಕ ಗುಂಡಿಗಳನ್ನು ತೆಗೆದು, ಸಸಿ ನೆಡಲು ಮುಂದಾಗಿದ್ದಾರೆ.
ಸ್ಥಳದಲ್ಲಿ ದಲಿತ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಪ್ರಾಣ ಹೋದರೂ ಸರಿಯೇ – ಭೂಮಿಯನ್ನು ಮಾತ್ರ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
“ಗ್ರಾಮದ ಪುರುಷರನ್ನು ಅಧಿಕಾರಿಗಳು ಮತ್ತು ಪೊಲೀಸರು ಬಲವಂತವಾಗಿ ಖಾಲಿ ಮಾಡಿದ್ದಾರೆ. ಪುರುಷರನ್ನೆಲ್ಲಾ ಹೊರದೂಡಿ, ಮಾಧ್ಯಮಗಳ ಕಣ್ಣು ತಪ್ಪಿಸಿ ಅಧಿಕಾರಿಗಳು ಸಸಿ ನೆಡಲು ಬಂದಿದ್ದಾರೆ. ಬಡ ಜನರಾದ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ” ಎಂದು ಅಲ್ಲಿನ ಮಹಿಳೆಯರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಧನಕರ್ ರಾಜೀನಾಮೆ ಹಿಂದಿದೆಯೇ ಅಧಿಕಾರದಾಹಿ BJPಯ ಬಿಹಾರ ಚುನಾವಣಾ ಲೆಕ್ಕಾಚಾರ?
“ನಮ್ಮ ಜಮೀನಿನ ಸುತ್ತಮುತ್ತ ಐಟಿ-ಬಿಟಿ ಕಂಪನಿಗಳಿವೆ. ಹೀಗಾಗಿ, ಭೂಮಿಗೆ ಭಾರೀ ಬೆಲೆ ಇದೆ. ಈ ಭೂಮಿಯನ್ನು ನಮ್ಮಿಂದ ಕಸಿದುಕೊಳ್ಳಲು ನಮ್ಮ ಭೂಮಿಯನ್ನು ಅರಣ್ಯ ಭೂಮಿಯೆಂದು ಇಲಾಖೆ ಸುಳ್ಳು ಹೇಳುತ್ತಿದೆ. ನಮ್ಮ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲು ಮುಂದಾಗಿದೆ” ಎಂದು ದೂರಿದ್ದಾರೆ.
ಪ್ರತಿಭಟನಾನಿರತ ಮಹಿಳೆಯರು ಅರಣ್ಯ ಇಲಾಖೆಗೆ ತೆಗೆದಿರುವ ಗುಂಡಿಗಳಲ್ಲಿ ಕುಳಿತು, ಮೊದಲು ನಮ್ಮನ್ನು ಹೂತು ಹಾಕಿ, ನಂತರ, ಸಸಿಗಳನ್ನು ನೆಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಭೂಮಿಯಲ್ಲಿ ಪರಿಸರವನ್ನು ಉಳಿಸಿಕೊಳ್ಳುವುದು ನಮಗೆ ಗೊತ್ತಿದೆ. ಅರಣ್ಯ ಇಲಾಖೆ ನಮ್ಮ ಭೂಮಿಯನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.