ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿತವಾಗಿದ್ದು ಪರಿಣಾಮ ಓರ್ವ ಕಾರ್ಮಿಕ ಸಾವನ್ನಪ್ಪಿ, ಮತ್ತೊಬ್ಬನಿಗೆ ಗಂಭೀರ ಗಾಯವಾಗಿದೆ,
ಎಂಬಸಿ ಗ್ರೂಪ್‌ಗೆ ಸೇರಿದ ಕಟ್ಟಡ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಸೋಮವಾರ ಸಂಭವಿಸಿದೆ. ಯಲಹಂಕ ವ್ಯಾಪ್ತಿಯ ಎಂಬಸಿ ಗ್ರೂಪ್‌ನ ಕಟ್ಟಡ ನಿರ್ಮಾಣ ಕಾಮಗಾರಿಯೊಂದರಲ್ಲಿ ಕಾರ್ಮಿಕರು ಮಣ್ಣು ಅಗೆಯುವ ಕೆಲಸದಲ್ಲಿ ತೊಡಗಿದ್ದರು. ಈ ವೇಳೆ ಭಾರೀ ಮಳೆಯಿಂದಾಗಿ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿ ಕುಸಿದು ಬಿದ್ದಿದೆ ಎನ್ನಲಾಗಿದೆ.
ಈ ಕುಸಿತದಲ್ಲಿ ಇಬ್ಬರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದರು ಎನ್ನಲಾಗಿದ್ದು, ಆಂಧ್ರಪ್ರದೇಶ ಮೂಲದ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆತನನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೆಪ್ಟೆಂಬರ್ ಮೊದಲ ದಿನವೇ ಜೋರು ಮಳೆ ಸುರಿದಿದೆ. ಮಳೆಗಾಲದ ದಿನಗಳಿಗೆ ಹೋಲಿಸಿದ್ರೆ ಸೋಮವಾರ ಸಂಜೆ ಸುರಿದ ಮಳೆ ಬಿರುಸಾಗಿತ್ತು. ರಸ್ತೆಯಲ್ಲಿ ಜನ, ವಾಹನ ಸಂಚಾರ ಸಾಧ್ಯವಾಗದಷ್ಟು ಜೋರಿತ್ತು. ಮಿಂಚು ಗುಡುಗು ಕೂಡ ಇದ್ದು ಜನ ಭಯ ಭೀತರಾದರು. ವಾಹನ ಸವಾರರು ಮಳೆಯಲ್ಲಿ ಸಂಚಾರ ಮಾಡುವ ಧೈರ್ಯ ಮಾಡದೇ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಮರ, ಕಟ್ಟಡಗಳ ಬಳಿ ಆಶ್ರಯ ಪಡೆದಿದ್ದರು. ಇನ್ನೂ ಅಲ್ಲಲ್ಲಿ ಟ್ರಾಫಿಕ್ ದಟ್ಟಣೆ ಕೂಡ ಉಂಟಾಗಿತ್ತು.
ರಾಜಾಜಿನಗರ, ಟೌನ್ ಹಾಲ್, ಕಾರ್ಪೋರೇಷನ್, ಜಯನಗರ, ಜೆಪಿ ನಗರ ಸುತ್ತಮುತ್ತ, ವಿಲ್ಸನ್ ಗಾರ್ಡನ್, ಶಾಂತಿನಗರ, ಲಾಲ್ ಬಾಗ್ ಸುತ್ತಮುತ್ತ, ಮಲ್ಲೇಶ್ವರಂ ರಸ್ತೆ, ಮಂತ್ರಿ ಮಾಲ್ ಯಲ್ಲಿ ಜೋರು ಮಳೆ ಉಂಟಾಗಿತ್ತು. ಅಲ್ಲದೇ ಬಿಬಿಎಂಪಿ ವಲಯ ಕಚೇರಿ ಮುಂದಿನ ರಸ್ತೆಯೇ ತುಂಬಿ ಹರಿಯುತ್ತಿದ್ದ ದೃಶ್ಯವೂ ಕಂಡುಬಂದಿತು. ಅಲ್ಲದೇ ಕೆ.ಆರ್ ಮಾರ್ಕೆಟ್, ಶಾಂತಿನಗರದಲ್ಲೂ ಜೋರು ಮಳೆಯಾಗಿದ್ದು, ರಸ್ತೆಗಳು ಜಲಾವೃತವಾಗಿದ್ದವು.
ಏಕಾಏಕಿ ಸುರಿದ ಮಳೆಯಿಂದಾಗಿ ಕೆಲ ಸಮಯದ ರಸ್ತೆಯಲ್ಲಿ 2 ರಿಂದ 3 ಅಡಿಯಷ್ಟು ನೀರು ಆವೃತವಾಗಿತ್ತು. ಅಲ್ಲಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದರಿಂದ ದುರ್ವಾಸನೆ ಬೀರುತ್ತಿತ್ತು. ಇದು ವಾಹನ ಸವಾರರನ್ನೂ ಹೈರಾಣಾಗುವಂತೆ ಮಾಡಿತ್ತು. ಇನ್ನೂ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿತ್ತು.