ಬಡ್ಡಿಮತ್ತು ಸಾಲ ವಿವಾದದಿಂದಾಗಿ ಒಬ್ಬ ಮಹಿಳೆ ತನ್ನನ್ನು ಮತ್ತು ತನ್ನ ಚಿಕ್ಕ ಮಗುವನ್ನು ಅಪಹರಿಸಿ, ಕೂಡಿಹಾಕಿ, ದೌರ್ಜನ್ಯ ಎಸಗಿ, ಬಟ್ಟೆ ಬಿಚ್ಚುವಂತೆ ಕಿರುಕುಳ ನಿಡಿದ್ದೂ ಅಲ್ಲದೆ ವೀಡಿಯೊ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ನಾಲ್ವರ ಮೇಲೆ ಆರೋಪ ಮಾಡಿದ್ದಾರೆ.
ಫಾತಿಮಾ (ಹೆಸರು ಬದಲಾಯಿಸಲಾಗಿದೆ) ಬೆಂಗಳೂರಿನಲ್ಲಿ ಮನೆಗೆಲಸದ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಇವರು ಆರೋಪಿ ನಝತ್ ಬೇಗಂ ಅವರಿಂದ ₹50,000 ಸಾಲ ಪಡೆದಿದ್ದರು. ಪ್ರತಿ ವಾರ ₹5,000ದಂತೆ ಮರುಪಾವತಿ ಮಾಡುವುದಾಗಿ ಒಪ್ಪಂದವಾಗಿತ್ತು ಎನ್ನಲಾಗಿದೆ.
“ಸುಮಾರು ಎರಡು ವರ್ಷಗಳ ಹಿಂದೆ ರೇಷ್ಮಾ ಬಾನು ಅವರಿಂದ ₹1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಮಾಸಿಕ ಬಡ್ಡಿ ನೀಡುತ್ತಿದ್ದೆ. ಆದರೆ ಆರ್ಥಿಕ ತೊಂದರೆಯಿಂದಾಗಿ ಎರಡೂ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಕೊಡಲಾಗುತ್ತಿರಲಿಲ್ಲ” ಎಂದು ಪೊಲೀಸರಿಗೆ ಹೇಳಿರುವುದಾಗಿ ವರದಿಯಾಗಿದೆ.
“ರೇಷ್ಮಾ ಬಾನು ಪದೇ ಪದೆ ಬಡ್ಡಿ ಕೇಳುವುದಕ್ಕಾಗಿ ಮನೆಗೆ ಬರುತ್ತಿದ್ದರು. ಆದ್ದರಿಂದ ಅವರ ಫೋನ್ ನಂಬರ್‌ಗಳನ್ನು ಬ್ಲಾಕ್ ಮಾಡಿದ್ದೆ. ನಂತರ ರೇಷ್ಮಾ ಅವರ ತಾಯಿ ಮೂಲಕ ಬೆದರಿಕೆಗಳು ಬರಲಾರಂಭಿಸಿದವು. ಇದರಿಂದಾಗಿ ಸುಮಾರು ಎರಡು ತಿಂಗಳು ಮನೆಯಲ್ಲಿ ಇರದೆ ದೂರವಿದ್ದೆ” ಎಂದು ಹೇಳಿಕೊಂಡಿದ್ದಾರೆ.
ಘಟನೆ ಹಿನ್ನೆಲೆ
“ಆಗಸ್ಟ್ 27ರಂದು ನಝತ್ ನನ್ನನ್ನು ಕರೆದು ʼಕೆಲಸವಿದೆ, ಹಣ ಕೊಡುತ್ತೇನೆʼ ಎಂದು ಹೇಳಿದರು. ಹಾಗಾಗಿ ನಾನು ತನ್ನ ಚಿಕ್ಕ ಮಗುವಿನೊಂದಿಗೆ ಸುಮಾರು ಸಂಜೆ 5.30ಕ್ಕೆ ಮೆಟ್ರೋ ಲೇಔಟ್‌ನಲ್ಲಿರುವ ನಝತ್ ಮನೆಗೆ ಹೋದೆ. ಮಗುವಿಗೆ ಊಟ ಹಾಕುತ್ತಿದ್ದಾಗ ನಝತ್ ಹೊರಗೆ ಹೋಗಿ ಯಾರೊಂದಿಗೋ ಮಾತನಾಡಿದರು. ನಂತರ ರೇಷ್ಮಾ, ಅವರ ಪತಿ ಸುಹೈಲ್ ಮತ್ತು ಇನ್ನಿಬ್ಬರು ಮನೆಗೆ ಬಂದು ಬಾಗಿಲು ಬೀಗ ಹಾಕಿದರು” ಎಂದಿದ್ದಾರೆ.
ಸುಹೈಲ್ ₹11 ಲಕ್ಷ (ಬಡ್ಡಿ ಸೇರಿ) ಕೇಳಿದರು. ಚಾಕುವಿನಿಂದ ಕೈಗೆ ಹೊಡೆದರು. ಬಳಿಕ ನನ್ನ ಮಗು ಅಳತೊಡಗಿದಾಗ ರೇಷ್ಮಾ ಮತ್ತು ಸುಹೈಲ್ ನನ್ನನ್ನು ಹೊಡೆದು ಫೋನ್ ಕಸಿದುಕೊಂಡರು. ಸುಮಾರು ಸಂಜೆ 7ಕ್ಕೆ ನನ್ನನ್ನೂ ಮಗುವನ್ನೂ ಆಟೋದಲ್ಲಿ ಕುಂಬಳಗೋಡು ಬಳಿಯ ಮನೆಗೆ ಕರೆದೊಯ್ದರು. ಅಲ್ಲಿ ನಝತ್ ಮತ್ತು ಸುಹೈಲ್ ʼಬೇರೆ ಪುರುಷರನ್ನು ಕರೆತರುತ್ತೇವೆ, ನಿನಗೆ ಹಣ ಕೊಡಲಾಗದಿದ್ದರೆ ಅವನೊಟ್ಟಿಗೆ ವೇಶ್ಯಾವೃತ್ತಿ ಮಾಡುʼ ಎಂದು ಹೇಳಿ, ಬೆದರಿಸಿದರು. ನನ್ನನ್ನೂ ಮಗುವನ್ನೂ ರಾತ್ರಿಯೆಲ್ಲಾ ಕೋಣೆಯಲ್ಲಿ ಬಂಧಿಸಿದ್ದರು” ಎಂದು ಅಲವತ್ತುಕೊಂಡಿದ್ದಾರೆ.
“ಮರುದಿನ ಜ್ವರ ಬಂದಿತ್ತು. ಆದರೂ ನಝತ್, ಸುಹೈಲ್ ಹಾಗೂ ಸೈಫ್ ನನಗೆ ಮತ್ತೆ ಹೊಡೆದರು. ಸಂಜೆ ʼನಿನ್ನ ಬಟ್ಟೆ ಕಳಚಿಸಿ ವೀಡಿಯೊ ತೆಗೆದು, ಹಣ ಕೊಡದಿದ್ದರೆ ವೈರಲ್ ಮಾಡುತ್ತೇವೆʼ ಎಂದು ನಝತ್ ಬೆದರಿಕೆ ಹಾಕಿದರು. ಮರುದಿನ ರೇಷ್ಮಾ, ಸುಹೈಲ್ ಮತ್ತು ನಝತ್ ಮಾರುಕಟ್ಟೆ ಬಳಿಯ ವಕೀಲರ ಬಳಿ ಕರೆದುಕೊಂಡು ಹೋಗಿ ಕೆಲವು ಕಾಗದಗಳಿಗೆ ಸಹಿ ಹಾಕಿಸಿ ಮತ್ತೆ ಕುಂಬಳಗೋಡು ಮನೆಗೆ ತಂದುಬಿಟ್ಟರು. ಶೌಚಾಲಯಕ್ಕೆ ಹೋಗಲು ಅವಕಾಶ ಸಿಕ್ಕಿದಾಗ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದೆ. ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿದ್ದೀರಾ? ಗದಗ | ದಲಿತರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ನಡೆಯುತ್ತಿರುವುದನ್ನು ಖಂಡಿಸಿ ಬೃಹತ್ ಪ್ರತಿಭಟನೆ
“ಸಂತ್ರಸ್ತೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ ಬಳಿಕ, ಆಕೆಯನ್ನು ಕೂಡಿಹಾಕಿದ್ದ ಮನೆಗೆ ಧಾವಿಸಿ ಆಕೆಯನ್ನು ರಕ್ಷಿಸಿದ್ದು, ನಝತ್, ರೇಷ್ಮಾ ಹಾಗೂ ಸುಹೇಲ್ ಎಂಬುವವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು, ಡೇಟಾವನ್ನು ಮರುಪಡೆಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ” ಚಂದ್ರ ಲೇಔಟ್ ಪೊಲೀಸರು ಮಾಹಿತಿ ನೀಡಿದ್ದಾರೆ.





