ಕರ್ನಾಟಕದ ಯುವಜನತೆ ಭವಿಷ್ಯದ ಉದ್ಯೋಗಾವಕಾಶಗಳಿಗೆ ಸಿದ್ಧರಾಗಲು, ರಾಜ್ಯ ಸರ್ಕಾರವು ದೃಢವಾದ ಕೌಶಲ್ಯಾಭಿವೃದ್ಧಿ ಪರಿಸರ ವ್ಯವಸ್ಥೆ ನಿರ್ಮಿಸಲು ಬದ್ಧವಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಕೌಶಲ್ಯ ಶೃಂಗಸಭೆ 2025 ಕುರಿತು ವಿವರ ಹಂಚಿಕೊಂಡರು.
ನವೆಂಬರ್ 4 ರಿಂದ 6ರವರೆಗೆ ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್ನಲ್ಲಿ ನಡೆಯಲಿರುವ ಈ ಶೃಂಗಸಭೆಯನ್ನು ರಾಜ್ಯದ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (KSDC) ಇದರ ಪ್ರಮುಖ ಆಯೋಜಕರಾಗಿದ್ದು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ಜ್ಞಾನ ಪಾಲುದಾರರಾಗಿ ಮತ್ತು ಟ್ರಿಸ್ಕಾನ್ ಗ್ಲೋಬಲ್ ಬಿಸಿನೆಸ್ ಪ್ರೈವೇಟ್ ಲಿಮಿಟೆಡ್ ತಾಂತ್ರಿಕ ಆಯೋಜಕರಾಗಿ ಕಾರ್ಯ ನಿರ್ವಹಿಸಲಿವೆ.
ಇದನ್ನು ಓದಿದ್ದೀರಾ? ಚುನಾವಣಾ ಅಕ್ರಮ ಆಳಂದಕ್ಕೆ ಮಾತ್ರವಲ್ಲ, ದೇಶಕ್ಕೆ ವ್ಯಾಪಿಸಿದ ಅಕ್ರಮ ಜಾಲ: ಸಿಎಂ ಸಿದ್ದರಾಮಯ್ಯ
“ಮಾನವ ಸಂಪನ್ಮೂಲ 2030: ವಿಸ್ತರಣೆ, ವ್ಯವಸ್ಥೆಗಳು, ಸಮನ್ವಯ” ಎಂಬ ಶೀರ್ಷಿಕೆಯನ್ನು ಕೇಂದ್ರ ವಿಷಯವನ್ನಾಗಿಸಿಕೊಂಡ ಈ ಶೃಂಗಸಭೆ, ಹೊರಹೊಮ್ಮುವ ಕೌಶಲ್ಯಗಳು, ಸರ್ವರಿಗೂ ಕೌಶಲ್ಯ, ನಾವೀನ್ಯತೆ ಮತ್ತು ಜಾಗತಿಕ ಕೌಶಲ್ಯ ಎಂಬ ನಾಲ್ಕು ಪ್ರಮುಖ ಆಯಾಮಗಳ ಮೇಲೆ ಚರ್ಚೆಗಳನ್ನು ಕೇಂದ್ರೀಕರಿಸಿದೆ. ಹಸಿರು ವಲಯದ ಉದ್ಯೋಗಗಳು, ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರ್ಥಿಕತೆ ಹಾಗೂ ಇಂಡಸ್ಟ್ರಿ 4.0 ನಂತಹ ಬೆಳವಣಿಗೆಗಳಿಗೆ ಹೊಂದಿಕೊಳ್ಳುವ ಅಗತ್ಯ, ಮಹಿಳೆಯರು, ಗ್ರಾಮೀಣ ಯುವಕರು, ವಿಕಲಚೇತನರು ಮತ್ತು ಗಿಗ್ ಕಾರ್ಮಿಕರಿಗೆ ಸಮಾನ ಅವಕಾಶ, ಜಾಗತಿಕ ಉತ್ತಮ ಅಭ್ಯಾಸಗಳ ಅಳವಡಿಕೆ ಹಾಗೂ ಅಂತಾರಾಷ್ಟ್ರೀಯ ಉದ್ಯೋಗ ಅವಕಾಶಗಳ ಸಾಧ್ಯತೆಗಳನ್ನು ವಿಶ್ಲೇಷಿಸುವ ಗುರಿ ಹೊಂದಿದೆ ಎಂದು ಸಚಿವರು ತಿಳಿಸಿದರು.
ಈ ಶೃಂಗಸಭೆಯಲ್ಲಿ ನೀತಿ ರೂಪಕರಿಂದ ಹಿಡಿದು ಉದ್ಯಮ ಮುಖಂಡರು, ಶಿಕ್ಷಣ ಸಂಸ್ಥೆಗಳು, ನಾಗರಿಕ ಸಮಾಜ ಸಂಘಟನೆಗಳು ಮತ್ತು ಯುವಜನರು ಭಾಗವಹಿಸಲಿದ್ದು, ಕೌಶಲ್ಯ ಎಕ್ಸ್ಪೋ, ವೃತ್ತಿ ಮಾರ್ಗದರ್ಶನ ವಲಯ, ನೀತಿ ಸಂವಾದಗಳು, ದುಂಡುಮೇಜಿನ ಚರ್ಚೆಗಳು, ಜೊತೆಗೆ B2B, B2G ಮತ್ತು G2G ಸಂವಾದಗಳೂ ನಡೆಯಲಿವೆ. ಸ್ಕಿಲ್ಲಥಾನ್ 2025 ಎಂಬ ಯುವ ಕೇಂದ್ರೀಕೃತ ಸ್ಪರ್ಧೆ ಶೃಂಗಸಭೆಯ ವಿಶೇಷ ಆಕರ್ಷಣೆಯಾಗಿದ್ದು, ನವೆಂಬರ್ 5ರಂದು ಅಂತಿಮ ಸುತ್ತು ನಡೆಯಲಿದೆ. ಅದೇ ರೀತಿ ಕೌಶಲ್ಯ ಕರ್ನಾಟಕ ಪ್ರಶಸ್ತಿಗಳು 2025 ಮೂಲಕ ಕೌಶಲ್ಯಾಭಿವೃದ್ಧಿಗೆ ಶ್ರೇಷ್ಠ ಕೊಡುಗೆ ನೀಡಿದ ಸರ್ಕಾರಿ-ಖಾಸಗಿ ಸಂಸ್ಥೆಗಳು, ತರಬೇತುದಾರರು ಮತ್ತು ಜಿಲ್ಲೆಗಳ ಸಾಧನೆಗಳನ್ನು ಗೌರವಿಸಲಾಗುತ್ತದೆ.
ಈ ಶೃಂಗಸಭೆಯ ಫಲಿತಾಂಶವಾಗಿ ಕರ್ನಾಟಕ ರಾಜ್ಯ ಕೌಶಲ್ಯ ನೀತಿ 2025-2032ರ ಅನುಷ್ಠಾನಕ್ಕೆ ಪಾಲುದಾರರ ಏಕಮತ, ಭವಿಷ್ಯದ ಅಗತ್ಯಗಳ ಕುರಿತ ಶಿಫಾರಸುಗಳು, ಸರ್ಕಾರ-ಉದ್ಯಮ-ಶೈಕ್ಷಣಿಕ ವಲಯಗಳ ಪಾಲುದಾರಿಕೆ, ಯಶಸ್ವಿ ಮಾದರಿಗಳ ದಾಖಲಾತಿ ಹಾಗೂ ಯುವಕರಿಗೆ ಹೆಚ್ಚುವರಿ ಜಾಗತಿಕ ಉದ್ಯೋಗಾವಕಾಶಗಳನ್ನು ನಿರೀಕ್ಷಿಸಲಾಗಿದೆ ಎಂದು ಸಚಿವರು ವಿವರಿಸಿದರು