ಬೆಂಗಳೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆರೋಪದ ಮೇಲೆ ಅಮಾನತುಗೊಂಡಿದ್ದ ಐವರೂ ಪೊಲೀಸ್ ಅಧಿಕಾರಿಗಳ ಅಮಾನತನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ.
ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ್ದ ಕಾಲ್ತುಳಿತ ದುರಂತಕ್ಕೆ ಐವರು ಪೊಲೀಸ್ ಅಧಿಕಾರಿಗಳನ್ನು ಹೊಣೆಯಾಗಿಸಿದ ಸರ್ಕಾರ ಐವರನ್ನು ಅಮಾನತುಗೊಳಿಸಿತ್ತು. ಈ ಬಗ್ಗೆ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿತ್ತು.
ಇದನ್ನು ಓದಿದ್ದೀರಾ? ಬೆಂಗಳೂರು ಕಾಲ್ತುಳಿತ ದುರಂತ | ಹೈಕೋರ್ಟ್ಗೆ ವರದಿ ಸಲ್ಲಿಸಲು ಒಂದು ವಾರ ಕಾಲಾವಕಾಶ ಕೋರಿದ ಸರ್ಕಾರ
ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ್, ಐಪಿಎಸ್ ಅಧಿಕಾರಿಗಳಾದ ವಿಕಾಸ್ ಕುಮಾರ್ ವಿಕಾಸ್, ಡಿಸಿಪಿ ಶೇಖರ್ ಹೆಚ್ ಟಿ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಎಎಸ್ಐ ಬಾಲಕೃಷ್ಣ ಹಾಗೂ ಇನ್ಸ್ಪೆಕ್ಟರ್ ಎ ಕೆ ಗಿರೀಶ್ ಅವರನ್ನು ಅಮಾನತು ಮಾಡಿತ್ತು. ಇದೀಗ ಈ ಪೈಕಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಹೊರತುಪಡಿಸಿ ಉಳಿದೆಲ್ಲ ಅಧಿಕಾರಿಗಳ ಅಮಾನತು ಸರ್ಕಾರ ಹಿಂಪಡೆದಿದೆ. ಈಗಾಗಲೇ ವಿಕಾಸ್ ಕುಮಾರ್ ಅವರ ಅಮಾನತನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ರದ್ದುಗೊಳಿಸಿತ್ತು.
ಜೂನ್ 4ರಂದು ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಸಂಬಂಧ ಈಗಾಗಲೇ ನ್ಯಾಯಮೂರ್ತಿ ಡಿ. ಮೈಕಲ್ ಕುನ್ಹಾ ಏಕ ಸದಸ್ಯ ಆಯೋಗ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಸಂಪುಟದಲ್ಲಿ ಚರ್ಚೆಯೂ ನಡೆದಿದೆ. ಅದಾದ ಬಳಿಕ ಆರ್ಸಿಬಿ, ಡಿಎನ್ಎ ಹಾಗೂ ಕೆಎಸ್ಸಿಎ ವಿರುದ್ಧ ಕ್ರಮಕ್ಕೆ ನಿರ್ಧರಿಸಲಾಗಿದೆ. ಕುನ್ಹಾ ವರದಿಯು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ಶಿಫಾರಸು ಮಾಡಿದೆ.
