ತಾವು ಆರ್ಡರ್ ಮಾಡಿದ್ದ ಊಟವನ್ನು ತರುವಲ್ಲಿ ಜೊಮ್ಯಾಟೊ ಡೆಲಿವರಿ ಏಜೆಂಟ್ ತಡವಾಗಿದ್ದಕ್ಕೆ, ಆತನ ಮೇಲೆ ಇಬ್ಬರು ಪುಂಡ ಯುವಕರು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶೋಭಾ ಥಿಯೇಟರ್ ಬಳಿ ಘಟನೆ ನಡೆದಿದೆ. ತಾವು ಆರ್ಡರ್ ಮಾಡಿದ್ದ ಊಟವನ್ನು ತಲುಪಿಸುವಲ್ಲಿ ವಿಳಂಬವಾದ ಕಾರಣ ಡೆಲಿವರಿ ಏಜೆಂಟ್ ಮೇಲೆ ಇಬ್ಬರು ಆರೋಪಿಗಳು ತಮ್ಮ ಸುತ್ತಲೂ ಬಿದ್ದಿದ್ದ ವಸ್ತುಗಳನ್ನು ಎತ್ತಿಕೊಂಡು ಥಳಿಸಿದ್ದಾರೆ.
ಘಟನೆಯ ವೀಡಿಯೊ ವೈರಲ್ ಆಗಿದ್ದು, ಅದರಲ್ಲಿ ಒಬ್ಬ ವ್ಯಕ್ತಿ ಹತ್ತಿರದಲ್ಲಿದ್ದ ಪ್ಲಾಸ್ಟಿಕ್ ಪಾತ್ರೆಯನ್ನು ಎತ್ತಿಕೊಂಡು ಡೆಲಿವರಿ ಏಜೆಂಟ್ ತಲೆಗೆ ಎರಡು ಬಾರಿ ಹೊಡೆದಿದ್ದಾರೆ. ನಂತರ, ಮತ್ತೊಬ್ಬ ವ್ಯಕ್ತಿ ಕುರ್ಚಿಯಿಂದ ಥಳಿಸಿದ್ದಾರೆ.
ಪೊಲೀಸರು ಶೀಘ್ರದಲ್ಲೇ ಮಧ್ಯಪ್ರವೇಶಿಸಿ ಗಲಾಟೆಯನ್ನು ತಡೆದಿದ್ದಾರೆ. ಡೆಲಿವರಿ ಏಜೆಂಟ್ ಮತ್ತು ಇಬ್ಬರು ಪುರುಷರಿಂದ ಹೇಳಿಕೆಗಳನ್ನು ಪಡೆದ್ದಾರೆ. ಆದಾಗ್ಯೂ, ಡೆಲಿವರಿ ಏಜೆಂಟ್ ಅಧಿಕೃತ ದೂರು ದಾಖಲಿಸಿಲ್ಲ.
ಬೆಂಗಳೂರಿನಲ್ಲಿ ಡೆಲವರಿ ಏಜೆಂಟ್‌ಗಳ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಆಗ್ಗಾಗ್ಗೆ ಬೆಳಕಿಗೆ ಬರುತ್ತಿವೆ. ಇದೇ ವರ್ಷದ ಜನವರಿಯಲ್ಲಿ, ರಾತ್ರಿ ವೇಳೆ ಊಟ ಆರ್ಡರ್ ಮಾಡಲು ಪ್ರಯತ್ನಿಸುವಾಗ ಸತತ ಸೇವಾ ವೈಫಲ್ಯಗಳಿಂದ ಸಿಟ್ಟಾಗಿದ್ದ ಮಹಿಳೆ, ಆಹಾರವನ್ನು ತಂದ ಏಜೆಂಟ್ ಜೊತೆ ಗಲಾಟೆ ನಡೆಸಿದ್ದರು. ಇನ್ನು, ಫೆಬ್ರವರಿಯಲ್ಲಿ ಆಹಾರದ ಪಾರ್ಸೆಲ್ ಕೊಟ್ಟಿಲ್ಲವೆಂದು ಕೇಳಿದ್ದಕ್ಕೆ ಹೋಟೆಲ್ ಸಿಬ್ಬಂದಿಗಳು ಡೆಲಿವರಿ ಏಜೆಂಟ್ ಮೇಲೆ ಹಲ್ಲೆ ನಡೆಸಿದ್ದರು.