ಕರ್ನಾಟಕ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2ಅನ್ನು ಸಮರ್ಪಕವಾಗಿ ನಡೆಸುವಂತೆ ಆಗ್ರಹ

Date:

Advertisements

ಕರ್ನಾಟಕದಲ್ಲಿ ನಡೆಯುತ್ತಿರುವ 2ನೇ ಜಾತಿ ಜನಗಣತಿ ಅಥವಾ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸಮಯ ಮಿತಿಯೊಳಗೆ ಪೂರ್ಣಗೊಳಿಸುವುದು ಎಷ್ಟು ಮುಖ್ಯವೋ, ಅದನ್ನು ಸಮರ್ಪಕವಾಗಿ ನಡೆಸುವುದು ಕೂಡಾ ಅಷ್ಟೇ ಮುಖ್ಯ. ಸಮೀಕ್ಷೆಯನ್ನು ಪರಿಪೂರ್ಣವಾಗಿ ಮತ್ತು ಸಮರ್ಪಕವಾಗಿ ನಡೆಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಕರ್ನಾಟಕ ಸರ್ವ ಸಮುದಾಯಗಳ ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನ, ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ, ಜಾಗೃತ ಕರ್ನಾಟಕ ಹಾಗೂ ಕರ್ನಾಟಕ ದಮನಿತ ಹಿಂದುಳಿದ ಸಮುದಾಯಗಳ ಸಂಘಟನೆಗಳ ಮುಖಂಡರು ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ, ಹಕ್ಕೊತ್ತಾಯ ಸಲ್ಲಿಸಿದ್ದಾರೆ.

“ಸಮೀಕ್ಷೆಯನ್ನು ಸಮಯ ಮಿತಿಯೊಳಗೆ ಮಾಡುವುದೆಂದರೆ, ಅವರಸರದಲ್ಲಿ ಮಾಡುವುದು ಎಂದಾಗಬಾರದು. ಈಗಾಗಲೇ 2015ರ ಮೊದಲ ಸಮೀಕ್ಷೆ ಬಗ್ಗೆ ಹಲವಾರು ಆಕ್ಷೇಪಗಳು ವ್ಯಕ್ತವಾಗಿ ಕೊನೆಗೆ ಅದರ ಫಲಿತಾಂಶವನ್ನು ಸರ್ಕಾರ ಅಂಗೀಕರಿಸದೆ, ಕೈಬಿಟ್ಟಿದೆ. ಇದು ದುರ್ಬಲ ಸಮುದಾಯಗಳಿಗೆ ಅಪಾರವಾದ ನಿರಾಶೆ ಮೂಡಿಸಿದೆ. ರಾಜಕೀಯ ಪ್ರೇರಿತ ಆಕ್ಷೇಪಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ. ಹಾಗಂತ ವಸ್ತುನಿಷ್ಠವಾದ ಆಕ್ಷೇಪಗಳನ್ನು ಉಪೇಕ್ಷಿಸುವುದು ಸರಿಯಾದ ಕ್ರಮವಾಗುವುದಿಲ್ಲ. ಎರಡನೆಯ ಸಮೀಕ್ಷೆ ವೇಳೆ ಇಂಥ ಲೋಪಗಳಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಯಾಕೆಂದರೆ, ಎರಡನೆ ಸಮೀಕ್ಷೆಯ ಫಲಿತಾಂಶವೂ ನೆನೆಗುದಿಗೆ ಬಿದ್ದರೆ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶ ನೆರವೇರದು” ಎಂದು ನಿಯೋಗದಲ್ಲಿದ್ದ ಸದಸ್ಯರು ಹೇಳಿದ್ದಾರೆ.

“ಸಮೀಕ್ಷೆಯು ಸಮರ್ಪಕವಾಗಿ ಆಗಬೇಕು; ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾಲಮಿತಿಯೊಳಗೆ ನಡೆಯಬೇಕು. ಆಯೋಗವು ದಸರಾ ರಜೆ ಅವಧಿಯಲ್ಲಿ ಶಿಕ್ಷಕರನ್ನು ಬಳಸಿಕೊಂಡು ಹದಿನೈದು ದಿನಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಯೋಜನೆ ಹೊಂದಿದೆ. ಮೊದಲ 2015ರ ಸಮೀಕ್ಷೆ ಮತ್ತು ಇತ್ತೀಚಿಗೆ ನಡೆದ ಒಳಮೀಸಲಾತಿ ಕುರಿತ ಸಮೀಕ್ಷೆಗಳ ಅನುಭದಲ್ಲಿ ಕಂಡುಕೊಂಡಂತೆ ಸಮೀಕ್ಷೆ ಮಾಡಿ ಮುಗಿಸಲು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯಾವಕಾಶ ತಗಲುತ್ತದೆ. ಇಷ್ಟೊಂದು ಸುದೀರ್ಘ ಅವಧಿಗೆ ಶಿಕ್ಷಕರ ಸೇವೆ ದೊರಕುವ ಸಾಧ್ಯತೆ ಕಡಿಮೆ. ಶಿಕ್ಷಕರ ರಜೆಯನ್ನು ವಿಸ್ತರಿಸಲು ಅವಕಾಶವಿದೆ ಎನ್ನಲಾಗುತ್ತಿದೆಯಾದರೂ ಇದಕ್ಕೆ ಕಾನೂನಿನ ತೊಡಕುಗಳಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಕಾರಣದಿಂದ ಸಮೀಕ್ಷೆ ಪೂರ್ಣಗೊಳ್ಳದೆ ಹೋದರೆ ಇಡೀ ಪ್ರಕ್ರಿಯೆಗೆ ತೀವ್ರ ಹಿನ್ನೆಡೆ ಉಂಟಾಗಬಹುದು. ದಸರಾ ರಜೆ ವೇಳೆ ಹಬ್ಬ ಹರಿದಿನಗಳು ಇರುವುದರಿಂದ ಗಣತಿದಾರರು ಮತ್ತು ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳದೆ ಹೋಗುವ ಸಾಧ್ಯತೆಯೂ ಇದೆ. ಆದುದರಿಂದ ಇರುವ ಸೀಮಿತ ಸಮಯಾವಕಾಶ ಮತ್ತು ಸರ್ಕಾರದಿಂದ ಅಗತ್ಯ ಸಹಕಾರ ಪಡೆದು ಸಮರ್ಪಕವಾಗಿ ಸಮೀಕ್ಷೆ ನಡೆಸಬೇಕಾದ ದೊಡ್ಡ ಜವಾಬ್ದಾರಿಯನ್ನು ಆಯೋಗ ಸಮರ್ಥವಾಗಿ ನಿಭಾಯಿಸಬೇಕು” ಎಂದು ಒತ್ತಾಯಿಸಿದ್ದಾರೆ.

“ಎಲ್ಲ ಸಮುದಾಯದ ಜೊತೆ ಸಮಾಲೋಚನೆ ನಡೆಸಬೇಕು; ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಮತ್ತು ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸಲು ಎಲ್ಲ ಸಮುದಾಯಗಳಿಗೆ ಅರಿವು ಮೂಡಿಸುವ ಕೆಲಸವನ್ನು ಸಮೀಕ್ಷೆಗೆ ಪೂರ್ವಭಾವಿಯಾಗಿ ನಡೆಸುವುದು ತುಂಬಾ ಅಗತ್ಯ. ಈ ಕುರಿತು ಆಯೋಗದ ಕಡೆಯಿಂದ ನಡೆದಿರುವ ಪ್ರಯತ್ನಗಳು ಕಾಣಿಸುತ್ತಿಲ್ಲ. ವಿವಿಧ ಸಂಘಟನೆಗಳು ಅವುಗಳಿಗೆ ತಿಳಿದಹಾಗೆ ಅರಿವು ಮೂಡಿಸಲು ಪ್ರಾರಂಭಿಸಿವೆ. ಆದರೆ, ಹಿಂದುಳಿದ, ತೀರಾ ಹಿಂದುಳಿದ, ಸಣ್ಣ, ಅತಿಸಣ್ಣ ಸಮುದಾಯಗಳಲ್ಲಿ ಇಂತಹ ಪ್ರಯತ್ನಗಳು ನಡೆಯುತ್ತಿಲ್ಲ. ಈ ಜಾತಿಗಳಿಗೆ ಸಮೀಕ್ಷೆಯ ಮಹತ್ವವನ್ನು ತಿಳಿಸದಿದ್ದರೆ ಅವು ಸಮೀಕ್ಷೆ ಪ್ರಕ್ರಿಯೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ತೊಡಕಾಗುವ ಸಾಧ್ಯತೆ ಇರುತ್ತದೆ. ಜೊತೆಗೆ ಪಟ್ಟಭದ್ರ ಹಿತಾಸಕ್ತಿಗಳು ಸಮೀಕ್ಷೆಯ ಬಗ್ಗೆ ಹುಟ್ಟು ಹಾಕುತ್ತಿರುವ ಹಲವು ರೀತಿಯ ಗೊಂದಲಗಳನ್ನು ನಿವಾರಿಸುವ ದೃಷ್ಟಿಯಲ್ಲೂ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಎಲ್ಲಾ ಸಮುದಾಯಗಳ ಜೊತೆ ಸಮಾಲೋಚನೆ ನಡೆಸಿ ಅವುಗಳನ್ನು ವಿಶ್ವಾಸಕ್ಕೆ ಪಡೆಯುವುದು ತುಂಬಾ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆಯೋಗವೂ ಸಮುದಾಯಗಳನ್ನು ಸಮಾಲೋಚನೆಗೆ ಆಹ್ವಾನಿಸಬೇಕು” ಎಂದು ಆಗ್ರಹಿಸಿದ್ದಾರೆ.

“ವ್ಯಾಪಕ ಪ್ರಚಾರ ನಡೆಸಬೇಕು; ಸಮೀಕ್ಷೆ ಕುರಿತು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಗೊಂದಲಗಳನ್ನು ಹುಟ್ಟುಹಾಕುತ್ತಿದ್ದಾರೆ. ಇದು ಕೆಲವೇ ಕೆಲವು ಸಮುದಾಯಗಳ ಹಿತಕಾಯುವ ಹುನ್ನಾರ ಎಂಬ ಸುಳ್ಳನ್ನು ಬಿತ್ತುತ್ತಿದ್ದಾರೆ. ಸಮೀಕ್ಷೆ ಮೂಲಕ ಜಾತಿ ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಯತ್ನಿಸಲಾಗುತ್ತಿದೆ ಎನ್ನುವ ನಿರೂಪಣೆಯನ್ನು ಎಣೆಯಲಾಗುತ್ತಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ಜನಗಣತಿ ಮಾಡುತ್ತಿರುವಾಗ ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಜಾತಿ ಸಮೀಕ್ಷೆ ಮಾಡುವ ಅಗತ್ಯ ಏನಿದೆ? ಕೇಂದ್ರ ಸರ್ಕಾರದ ಜನಗಣತಿಯಲ್ಲೇ ಜಾತಿ ಗಣತಿಯೂ ಇರುವುದರಿಂದ ರಾಜ್ಯ ಸರ್ಕಾರ ಜಾತಿಗಳ ಸಮೀಕ್ಷೆ ಮಾಡುವ ಅಗತ್ಯ ಏನು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಎರಡನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎಂಬುದು ತಲೆ ಎಣಿಕೆ ಅಲ್ಲ, ರಾಜ್ಯದ ಏಳು ಕೋಟಿಗೂ ಹೆಚ್ಚು ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಅರಿಯುವ ಸಮಗ್ರವಾದ ಕೆಲಸ. ಕೇಂದ್ರ ಸರ್ಕಾರ ಮಾಡುತ್ತಿರುವುದು ಗಣತಿ, ರಾಜ್ಯ ಸರ್ಕಾರ ಮಾಡುತ್ತಿರುವುದು ಸಮೀಕ್ಷೆ ಎನ್ನುವುದನ್ನು ಜನರಿಗೆ ತಿಳಿಸಬೇಕಾಗಿದೆ. ಅದಕ್ಕಾಗಿ ವ್ಯಾಪಕ ಪ್ರಚಾರ ಮಾಡಬೇಕಾಗಿದೆ. ಜನರು ಸಮೀಕ್ಷೆಗೆ ಮುಕ್ತವಾಗಿ ಸ್ಪಂದಿಸುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಆಯೋಗವು ವ್ಯಾಪಕ ಪ್ರಚಾರ ಮಾಡಲು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಕೋಮು ಪ್ರಯೋಗಶಾಲೆಯಾಗಿ ಮಂಡ್ಯ; ಸಂಘಪರಿವಾರದ ಹುನ್ನಾರಕ್ಕೆ ಜೆಡಿಎಸ್ ಬಲಿ?

“ಸಮೀಕ್ಷೆಯು ಪಾರದರ್ಶಕವಾಗಿ ಆಗಬೇಕು; ಸಮೀಕ್ಷೆ ಹಿನ್ನೆಲೆಯಲ್ಲಿ ವಿವಿಧ ಜಾತಿಗಳ ಕರಡು ಪಟ್ಟಿಯನ್ನು ಬಿಡುಗಡೆ ಮಾಡುವ ಒಂದು ಪತ್ರಿಕಾ ಜಾಹಿರಾತಿನ ಹೊರತಾಗಿ ಆಯೋಗದ ಕಡೆಯಿಂದ ಯಾವುದೇ ರೀತಿಯ ಪ್ರಚಾರಾಂದೋಲನಗಳೂ ನಡೆದಿಲ್ಲ. ಎಲ್ಲಾ ಜಾತಿಗಳಿಗೂ ಸಮೀಕ್ಷೆಯ ಮಹತ್ವವನ್ನು ತಿಳಿಸಿಕೊಡುವ ಕೆಲಸಗಳು ಕಾಣಸಿಗುತ್ತಿಲ್ಲ. ಎಲ್ಲಾ ಸಮುದಾಯಗಳು ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆಗೆ ತೊಡಗಿಸಿಕೊಳ್ಳದಿದ್ದರೆ ಮತ್ತು ಮಾಹಿತಿ ನೀಡದಿದ್ದರೆ ಸರ್ಕಾರ ಎಷ್ಟೇ ಹಣ ಖರ್ಚು ಮಾಡಿದರೂ, ಆಯೋಗ ಎಷ್ಟೇ ಶ್ರಮ ಹಾಕಿದರೂ ಸಮೀಕ್ಷೆ ಯಶಸ್ವಿಯಾಗಲು ಸಾಧ್ಯವಿಲ್ಲ. ಮೊದಲ ಸಮೀಕ್ಷೆ ಸಂದರ್ಭದಲ್ಲಿ ದ್ವಿತೀಯ ಮೂಲದ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಿರಲಿಲ್ಲ. ಮೊದಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾರಿಯಾಗದಿರಲು ಸರ್ಕಾರಗಳ ಇಚ್ಚಾಶಕ್ತಿಯ ಕೊರತೆ ಕಾರಣವಾಗಿತ್ತೇ ವಿನಃ ಆಯೋಗವಾಗಿರಲಿಲ್ಲ. ಆದರೂ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಪಾಡಿಕೊಳ್ಳದೆ ಪ್ರಮಾದ ಎಸಗಲಾಗಿತ್ತು. ಅದಕ್ಕಾಗಿ ಎರಡನೇ ಸಮೀಕ್ಷೆ ವೇಳೆ ಇಡೀ ಪ್ರಕ್ರಿಯೆ ಪಾರದರ್ಶವಾಗಿರಬೇಕು” ಎಂದಿದ್ದಾರೆ.

“ಸಾಮಾನ್ಯವಾಗಿ ಕೇಂದ್ರ ಸರ್ಕಾರದ ಜನಗಣತಿ ಮಾಡುವವರು ಮತ್ತು ವಿವಿಧ ಚುನಾವಣೆಗಳಲ್ಲಿ ಕೆಲಸ ಮಾಡುವ ಸಮೀಕ್ಷಕರಿಗೆ ಅಥವಾ ಶಿಕ್ಷಕರಿಗೆ ಅಥವಾ ಇನ್ಯಾವುದೇ ಸರ್ಕಾರಿ ನೌಕರರಿಗೆ ‘ತಾವು ರಾಷ್ಟ್ರಕ್ಕಾಗಿ ಕೆಲಸ ಮಾಡುತ್ತಿದ್ದೇವೆ’ ಎಂಬ ಹೆಮ್ಮೆಯ ಭಾವ ಇರುತ್ತದೆ. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವವರಿಗೆ ‘ಹೆಚ್ಚುವರಿ ಹೊರೆ’ ಎನಿಸುತ್ತದೆ. ಪ್ರಶ್ನೆಗಳು ಭಾರ ಎನಿಸುವ ಸಾಧ್ಯತೆಯೂ ಇರುತ್ತದೆ. ದಸರಾ ರಜೆಯಲ್ಲಿ ಸಮೀಕ್ಷೆ ಮಾಡಬೇಕಾಗಿರುವುದರಿಂದ ಅನ್ಯಮನಸ್ಕರಾಗಿ ಕೆಲಸ ಮಾಡುವ ಸಾಧ್ಯತೆಗಳೂ ಹೆಚ್ಚಿರುತ್ತವೆ. ಇದನ್ನು ಮನಗಂಡು ಈ ಸಮೀಕ್ಷೆಯಲ್ಲಿ ತೊಡಗುವುದು ಕೂಡಾ ರಾಷ್ಟ್ರದ ಕೆಲಸ ಮತ್ತು ಇದು ಕೂಡಾ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯ ವಿಧಾನ ಮಂಡಲ ಅಂಗೀಕರಿಸಿದ ವಿಧೇಯಕದ ಪ್ರಕಾರ ನಡೆಯುವ ಸಮೀಕ್ಷೆಯೆ ಹೊರತು ಕೆಲವರು ಪ್ರತಿಪಾದಿಸುವಂತೆ ರಾಜಕೀಯ ಪ್ರೇರಿತವಾದುದಲ್ಲ ಎಂದು ಸಮೀಕ್ಷೆ ನಡೆಸುವವರಿಗೆ ಸ್ಪಷ್ಟವಾಗಿ ತಿಳಿ ಹೇಳಬೇಕಾದ ಮತ್ತು Motivate ಮಾಡಬೇಕಾದ ಅಗತ್ಯ ತುಂಬಾ ಇದೆ. ಇವೆಲ್ಲವನ್ನೂ ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಡಬೇಕು” ಒಂದು ಆಗ್ರಹಿಸಿದ್ದಾರೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ನಿಯೋಗದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ.ಆರ್ ರಮೇಶ್, ಹಿಂದುಳಿದ ವರ್ಗಗಳ ಮುಖಂಡರಾದ ಸಣ್ಣಭತ್ತಪ್ಪ, ಪತ್ರಕರ್ತರಾದ ಧರಣೀಶ್ ಬೂಕನಕೆರೆ, ಜಾಗೃತ ಕರ್ನಾಟಕದ ಮುಖಂಡರಾದ ವಿನೋದ್ ಕುಮಾರ್ ಇಟಗಿ ಮತ್ತು ಅನಿಲ್ ಕುಮಾರ್ ಚಿಕ್ಕದಾಳವಟ್ಟ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಬುಕ್‌ ಆಫ್‌ ರೆಕಾರ್ಡ್‌’ | ಶಕ್ತಿ ಪ್ರದರ್ಶಿಸಿದ ‘ಶಕ್ತಿ ಯೋಜನೆ’!

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿಗಳು ರಾಜ್ಯದ ಜನರನ್ನು ಸೋಂಬೇರಿಗಳ್ಳಾನ್ನಾಗಿ...

ರಾಹುಲ್ ಗಾಂಧಿಗೆ ಜೀವ ಬೆದರಿಕೆ; ಮೋದಿ, ಶಾ ಮೌನ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ

ಬಿಜೆಪಿ ಮತ್ತು ಸಂಘಪರಿವಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿರುವ ಲೋಕಸಭೆಯ ವಿರೋಧ...

ಕಲಬುರಗಿ ರೈತರಿಗೆ ₹1417.02 ಕೋಟಿ ಪರಿಹಾರ, ಬಿಜೆಪಿಯಿಂದ ನಕಲಿ ಪ್ರತಿಭಟನೆ: ಪ್ರಿಯಾಂಕ್‌ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

Download Eedina App Android / iOS

X