ಪ್ರಥಮ ಬಾರಿಗೆ, ನಮ್ಮ ಮೆಟ್ರೋ ದೇಣಿಗೆಯಾದ ಮಾನವ ಯಕೃತ್ತನ್ನು ಶಸ್ತ್ರಚಿಕಿತ್ಸೆಗಾಗಿ ಸಾಗಿಸಲು ಸಹಕಾರ ನೀಡಿದೆ. ಶುಕ್ರವಾರ, ಆಗಸ್ಟ್ 1ರ ರಾತ್ರಿ 8:38ಕ್ಕೆ, ಯಕೃತ್ತನ್ನು ವೈದ್ಯರೊಬ್ಬರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ಸುರಕ್ಷಿತವಾಗಿ ಸಾಗಿಸಲಾಯಿತು.
ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಸ್ವೀಕರಿಸಿ, ದಾಖಲೆ ಕಾರ್ಯ ಮತ್ತು ಭದ್ರತಾ ಪರಿಶೀಲನೆಗಳನ್ನು ಸಂಯೋಜಿಸಿದರು.
ಇದನ್ನು ಓದಿದ್ದೀರಾ? ‘ನಮ್ಮ ಮೆಟ್ರೋ’ ಪ್ರಯಾಣ ದರ ಏರಿಕೆ | ಕೇಂದ್ರ ಸರ್ಕಾರದ ಸಮಿತಿಯಿಂದಲೇ ದರ ನಿಗದಿ: ಸಿಎಂ ಸ್ಪಷ್ಟನೆ
ಆ ಬಳಿಕ, ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಟ್‌ಫೀಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9.48ಕ್ಕೆ ರಾಜರಾಜೇಶ್ವರಿ ನಗರ (ಆರ್‌ಆರ್ ನಗರ) ಮೆಟ್ರೋ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಮತ್ತೊಬ್ಬ ASO ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಕಾಯುತ್ತಿರುವ ಆಂಬ್ಯುಲೆನ್ಸ್ ವರ್ಗಾವಣೆ ಮಾಡುವಲ್ಲಿ ನೆರವಾಯಿತು. ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.
ಮೊದಲಬಾರಿ ನಮ್ಮ ಮೆಟ್ರೋ ದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಣೆ pic.twitter.com/Ee6qBBIInO
— eedina.com ಈ ದಿನ.ಕಾಮ್ (@eedinanews) August 2, 2025
ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಮಯೋಚಿತ ಸಹಕಾರ ಮತ್ತು ಜವಾಬ್ದಾರಿ ತೋರ್ಪಡಿಸಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡುಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಕಾರ್ಯಾಚರಣೆ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಸಂಯುಕ್ತ ಕಾರ್ಯವಿಧಾನ ಆದೇಶ (JPO)ದ ಮಾರ್ಗಸೂಚಿಗಳಡಿ ನೆರವೇರಿಸಲಾಯಿತು.
