ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಮನೆಯಲ್ಲಿ ಬೆಳ್ತಂಗಡಿ ಪೊಲೀಸರು ಮಹಜರು ನಡೆಸಿದ್ದಾರೆ.
ಎರಡ್ಮೂರು ದಿನ ವಿಚಾರಣೆ ನಡೆಸಿದರೂ ಸಹ ಸರಿಯಾದ ಮಾಹಿತಿ ಹಾಗೂ ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳನ್ನು ತರದಿರುವ ಕಾರಣ ಪೊಲೀಸರು ಕೋರ್ಟ್‌ನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದು, ಗುರುವಾರ ಬೆಂಗಳೂರಿನ ಬನ್ನೇರುಘಟ್ಟ ಸಮೀಪವಿರುವ ಸಮೀರ್ ಮನೆಗೆ ತೆರಳಿದ್ದಾರೆ. ಧರ್ಮಸ್ಥಳ ಕುರಿತ ವಿಡಿಯೋಗಳನ್ನು ಅವರು ಅದೇ ಮನೆಯಲ್ಲಿ ಚಿತ್ರೀಕರಿಸಿ, ಅಪ್‌ಲೋಡ್ ಮಾಡಿದ್ದಾರೆಯೇ ಎಂಬ ಕುರಿತು ಮಹಜರು ನಡೆಸಿದ್ದಾರೆ.
ಪೊಲೀಸರ ಜೊತೆ ಸೋಕೋ ಟೀಂ ಕೂಡ ತೆರಳಿದೆ. ಈ ಕಾರ್ಯಾಚರಣೆಯು ಧರ್ಮಸ್ಥಳ ಪ್ರಕರಣದಲ್ಲಿ ಸಮೀರ್‌ನ ಪಾತ್ರದ ಬಗ್ಗೆ ತನಿಖೆಯನ್ನು ತೀವ್ರಗೊಳಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡಿದ್ದಾರೆ ಎಂಬ ಪ್ರಕರಣದ ತನಿಖೆಯ ಭಾಗವಾಗಿದೆ.
ಧರ್ಮಸ್ಥಳದಲ್ಲಿ ಸಾಮೂಹಿಕ ಸಮಾಧಿಗಳಿವೆ ಎಂಬ ಆರೋಪದೊಂದಿಗೆ ಯೂಟ್ಯೂಬರ್‌ಗಳಾದ ಸಮೀರ್, ಅಭಿಷೇಕ್, ಜಯಂತ್ ಟಿ ಹಾಗೂ ಇತರರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋಗಳು ಧರ್ಮಸ್ಥಳದ ಆಧ್ಯಾತ್ಮಿಕ ಮಹತ್ವವನ್ನು ಕೆಡವುವಂತೆ ಸುಳ್ಳು ಮಾಹಿತಿಯನ್ನು ಹರಡಿದವು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಬೆಳ್ತಂಗಡಿ ಪೊಲೀಸರು ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಸಮೀರ್ ಎಂಡಿ ಎಂಬ ಯೂಟ್ಯೂಬರ್ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಅವನ ವಿರುದ್ಧ ತನಿಖೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
