ನಾಡಿನ ಧೀಮಂತ ಪತ್ರಕರ್ತ, ದೇಶ ವಿದೇಶಗಳ ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಸಂಪಾದಕರಾಗಿದ್ದ ಟಿಜೆಎಸ್ ಜಾರ್ಜ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಥಾಯಿಲ್ ಜೇಕಬ್ ಸೋನಿ ಜಾರ್ಜ್ ಅವರ ಪೂರ್ಣ ಹೆಸರು. ಜಾರ್ಜ್ ಅವರಿಗೆ 97 ವಯಸ್ಸಾಗಿತ್ತು. ಭಾರತೀಯ ಪತ್ರಿಕೋದ್ಯಮ ಮತ್ತು ಸಾಹಿತ್ಯ ಲೋಕದ ದೈತ್ಯ ಪ್ರತಿಭೆ ಆಗಿದ್ದ ಜಾರ್ಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಿದೆ. ಏಷ್ಯಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಮ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಕೇರಳದಲ್ಲಿ ಜನಿಸಿದ ಜಾರ್ಜ್ ಅವರು ತಮ್ಮ ಜೀವಿತಾವಧಿಯ ಜೀವನವನ್ನು ಬೆಂಗಳೂರು ಮತ್ತು ಕೊಯಮತ್ತೂರಿನಲ್ಲಿ ಕಳೆದರು. ಅವರಿಗೆ ಶಿಭಾ ಥಾಯಿಲ್ ಮತ್ತು ಜೀತ್ ಥಾಯಿಲ್ ಇಬ್ಬರು ಮಕ್ಕಳಿದ್ದಾರೆ.
ಫ್ರೀ ಪ್ರೆಸ್ ಜರ್ನಲ್, ಇಂಟರ್‌ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್, ದಿ ಸರ್ಚ್ ಲೈಟ್, ಹಾಂಕಾಂಗ್ ಏಷ್ಯಾ ವೀಕ್ ಪತ್ರಿಕೆಗಳನ್ನು ಮುನ್ನಡೆಸಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಂಪಾದಕೀಯ ಸಲಹೆಗಾರರಾಗಿದ್ದರು. ಸಾಮಾಜಿಕ ಅನ್ಯಾಯ, ಭ್ರಷ್ಟಾಚಾರ, ಧಾರ್ಮಿಕ ಅಸಹಿಷ್ಣುತೆ ಹಾಗೂ ಜನತಾಂತ್ರಿಕ ಮೌಲ್ಯಗಳ ಪತನದ ವಿರುದ್ಧ ಜಾರ್ಜ್ ಬಹುದೊಡ್ಡ ಧ್ವನಿಯಾಗಿದ್ದವರು.
‘ಫಾಯಿಂಟ್ ಆಫ್ ವ್ಯೂವ್’ ಅವರ ದೀರ್ಘ ಕಾಲ ಪ್ರಕಟವಾದ ಅವರ ಅಂಕಣ. ಇದು 25 ವರ್ಷಗಳ ಕಾಲ ಪ್ರಕಟವಾಗಿದ್ದು, 2022ರಲ್ಲಿ ಕೊನೆಯಾಯಿತು. ಈ ಅಂಕಣ ಕನ್ನಡಪ್ರಭದಲ್ಲಿ ʼನೇರಮಾತುʼ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು.
ನಿರ್ಭೀತ ಪತ್ರಿಕೋದ್ಯಮಕ್ಕೆ ಜೀವನವಿಡಿ ಬದ್ಧರಾಗಿದ್ದರು ಜಾರ್ಜ್. 1965 ರಲ್ಲಿ ಬಿಹಾರ ಸರ್ಕಾರ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಹೀಗಾಗಿ ಸ್ವತಂತ್ರ ಭಾರತದಲ್ಲಿ ಬಂಧನಕ್ಕೊಳಗಾದ ಪತ್ರಿಕಾ ಸಂಪಾದಕರು ಜಾರ್ಜ್ ಆಗಿದ್ದಾರೆ. ಅಂದಿನ ಕೇಂದ್ರ ಸರ್ಕಾರದ ರಕ್ಷಣಾ ಸಚಿವ ವಿ ಕೆ ಕೃಷ್ಣ ಮೆನನ್ ಅವರು ಜಾರ್ಜ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಸಾಕ್ಷಿ ನುಡಿದಿದ್ದರು.
ವಿ ಕೆ ಕೃಷ್ಣ ಮೆನನ್, ಚರಿತ್ರಾರ್ಹ ಚಿತ್ರನಟಿ ನಟಿ ನರ್ಗಿಸ್, ಮಹಾನ್ ಶಾಸ್ತ್ರೀಯ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನ ಚರಿತ್ರೆ ರಚಿಸಿದ್ದಾರೆ. ಪತ್ರಿಕೋದ್ಯಮಿಯಾಗಿ ಅವರ ಅನುಭವಗಳನ್ನು ದಾಖಲಿಸಿದ ಪುಸ್ತಕ ‘ಘೋಷಯಾತ್ರಾ’.
ಭಾನುವಾರ ಹೆಬ್ಬಾಳದಲ್ಲಿ ಅಂತ್ಯ ಸಂಸ್ಕಾರ ನಡೆಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.
ಸಿಎಂ ಸೇರಿ ಗಣ್ಯರ ಸಂತಾಪ
“ಹಿರಿಯ ಪತ್ರಕರ್ತ, ಸಂಪಾದಕ ಮತ್ತು ಲೇಖಕ ಟಿಜೆಎಸ್ ಜಾರ್ಜ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ತಮ್ಮ ತೀಕ್ಷ್ಣವಾದ ಲೇಖನಿ ಮತ್ತು ರಾಜಿಯಾಗದ ಧ್ವನಿಯಿಂದ ಅವರು ಆರು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಪತ್ರಿಕೋದ್ಯಮವನ್ನು ಶ್ರೀಮಂತಗೊಳಿಸಿದರು. ಓದುಗರನ್ನು ಯೋಚಿಸುವಂತೆ, ಪ್ರಶ್ನಿಸುವಂತೆ ಮತ್ತು ತೊಡಗಿಸಿಕೊಳ್ಳುವಂತೆ ಮಾಡಿದ ನಿಜವಾದ ಸಾರ್ವಜನಿಕ ಬುದ್ಧಿಜೀವಿ ಅವರು. ಅವರ ಕುಟುಂಬ, ಸಹೋದ್ಯೋಗಿಗಳು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಕುಮಾರಸ್ವಾಮಿ ಸಂತಾಪ
“ಹಿರಿಯ ಪತ್ರಕರ್ತರು, ಲೇಖಕರು ಆಗಿದ್ದ ಪದ್ಮಭೂಷಣ ಟಿ.ಜೆ.ಎಸ್. ಜಾರ್ಜ್ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವುಂಟಾಯಿತು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳ ಸಂಪಾದಕ, ಸಂಪಾದಕೀಯ ನಿರ್ದೇಶಕ, ಸಂಪಾದಕೀಯ ಸಲಹೆಗಾರ ಸೇರಿ ಅನೇಕ ಮಹತ್ವದ ಹೊಣೆಗಳನ್ನು ನಿರ್ವಹಿಸಿ ‘ಅನುಭವದ ಸಮೃದ್ಧ ಗಣಿ’ಯೇ ಆಗಿದ್ದ ಶ್ರೀಯುತರು, The New Indian Express ಪತ್ರಿಕೆಯಲ್ಲಿ ಬರೆಯುತ್ತಿದ್ದ Point of View ಅಂಕಣವನ್ನು ನಿಕಟವಾಗಿ ಓದಿದ್ದೇನೆ. ಸಂಗೀತ ಸಾಮ್ರಾಜ್ಞಿ ಶ್ರೀಮತಿ ಎಂ.ಎಸ್. ಸುಬ್ಬುಲಕ್ಷ್ಮಿ ಜೀವನ ಆಧರಿತ ಅವರ MS – A Life in Music ಕೃತಿಯನ್ನು ಓದಿ ಅವರ ಬರವಣಿಗೆಯ ಪ್ರತಿಭೆಗೆ ಮಾರು ಹೋಗಿದ್ದೆ. ಅಗಲಿದ ಹಿರಿಯ ಚೇತನಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ, ಅಭಿಮಾನಿಗಳು, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ ಸಂತಾಪ
“ಖ್ಯಾತ ಪತ್ರಕರ್ತ ಟಿ.ಜೆ.ಎಸ್ ಜಾರ್ಜ್ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಮನಸ್ಸಿಗೆ ಅತ್ಯಂತ ನೋವಾಯಿತು. ಅವರ ಅಗಲಿಕೆಯಿಂದ ಭಾರತೀಯ ಪತ್ರಿಕಾರಂಗ ಒಬ್ಬ ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ ಮಾಡಿರುವ ಅವರು, “ಭಾರತೀಯ ಪತ್ರಿಕಾ ರಂಗದಲ್ಲಿ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಟಿ.ಜೆ.ಎಸ್ ಜಾರ್ಜ್ ಅವರು ಅಂಕಣಕಾರರಾಗಿ ರಾಜಕೀಯ ವಿದ್ಯಮಾನಗಳ ವಿಶ್ಲೇಷಣೆ ಮೂಲಕ ರಾಜಕೀಯ ವ್ಯವಸ್ಥೆಯನ್ನು ಸದಾ ಜಾಗೃತಗೊಳಿಸುವ ಕೆಲಸ ಮಾಡಿದ್ದರು. ಸುಮಾರು 25. ವರ್ಷಗಳ ಕಾಲ ನಿರಂತರ ಅಂಕಣಕಾರರಾಗಿ ಸಾಮಾಜಿಕ ಅಸಮಾನತೆ, ಭ್ರಷ್ಟಾಚಾರದ ವಿರುದ್ದ ನಿರಂತರ ತಮ್ಮ ಲೇಖನಿ ಮೂಲಕ ಧ್ವನಿ ಎತ್ತುವ ಕೆಲಸ ಮಾಡಿದ್ದರು. ಅವರ ಅಗಲಿಕೆಯಿಂದ ಭಾರತೀಯ ಪತ್ರಿಕಾರಂಗ ಒಬ್ಬ ಹಿರಿಯ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ. ಅವರು ಸಾಹಿತ್ಯ ಮತ್ತು ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಕರುಣಿಸಲಿ, ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.
