ಮಹಿಳೆಗೆ ಹಲ್ಲೆ ಮಾಡಿದ್ದ ಸೀರೆ ಅಂಗಡಿಯ ಮಾಲೀಕ ಮತ್ತು ಆತನ ಸಹಾಯಕನನ್ನು ಬೆಂಗಳೂರು ನಗರ ಪಶ್ಚಿಮ ವಿಭಾಗದ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸೀರೆ ಕದ್ದ ಆರೋಪದಲ್ಲಿ ಮಹಿಳೆಯೊಬ್ಬರಿಗೆ ಅಂಗಡಿ ಮಾಲೀಕ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ನಡೆದಿತ್ತು. ಸೀರೆ ಅಂಗಡಿಯೊಂದರ ಮಾಲೀಕ ಹಾಗೂ ಸಿಬ್ಬಂದಿ ಮಹಿಳೆಗೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು.
ಚಿಕ್ಕಪೇಟೆ ಅವೆನ್ಯೂ ರಸ್ತೆಯಲ್ಲಿರುವ ಮಾಯಾ ಸಿಲ್ಕ್ & ಸ್ಯಾರೀಸ್ ಅಂಗಡಿಯ ಮಾಲೀಕ ಉಮೇದರಾಮ ಹಾಗೂ ಆತನ ಅಂಗಡಿಯಲ್ಲಿ ಕೆಲಸ ಮಾಡುವ ಮಹೇಂದ್ರ ಸಿರ್ವಿ 21.09.2025 ರಂದು ಆಂಧ್ರಪ್ರದೇಶದ ಗುಂತಕಲ್ ವಾಸಿ ಮಹಿಳೆಗೆ ಅಮಾನುಷವಾಗಿ ಆತನ ಅಂಗಡಿಯ ಮುಂದೆ ಹಲ್ಲೆ ಮಾಡಿದ್ದ ಕಾರಣ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಯಾ ಸಿಲ್ಕ್ & ಸ್ಯಾರೀಸ್ ಅಂಗಡಿಯ ಮಾಲೀಕನಾದ ಉಮೇದರಾಮ ತಮ್ಮ ಮಾಯಾ ಸಿಲ್ಕ್ ಸ್ಯಾರೀಸ್ ಅಂಗಡಿಯ ಮುಂಭಾಗದಲ್ಲಿ ಇಟ್ಟಿದ್ದ ಸೀರೇಯ ಬಂಡನ್ನು ಮಹಿಳೆ ಕದಿಯುತ್ತಿದ್ದಾರೆಂದು 112 ಗೆ ದೂರು ನೀಡಿದ್ದು, ಅದರಂತೆ ಠಾಣಾ ಹೊಯ್ಸಳ ಸಿಬ್ಬಂದಿಯವರು ಆ ದಿನ ಸದರಿ ಸ್ಥಳದಲ್ಲಿ ಉಮೇದರಾಮ್ ರವರು ಹಿಡಿದುಕೊಂಡಿದ್ದ ಆರೋಪಿ ಮಹಿಳೆಯಾದ ಆಂದ್ರಪ್ರದೇಶದ ಗುಂತಕಲ್ ವಾಸಿ ಈತಳನ್ನು ಸದರಿ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಆರೋಪಿತೆಯಿಂದ ಕಳವು ಮಾಡಿದ ಮಾಲನ್ನು ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.