ದೇಶದಲ್ಲೇ ಪ್ರಥಮಬಾರಿಗೆ ಚಿನ್ನವು ವಿಪರೀತ ಏರಿಕೆ ಕಂಡಿದ್ದು, ಬಂಗಾರಪ್ರಿಯರ ನಿದ್ದೆಗೆಡಿಸಿದೆ. ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ದೇಶದಲ್ಲೇ ಮೊದಲು ₹86 ಸಾವಿರ ಗಡಿ ದಾಟಿ, ಇತಿಹಾಸದಲ್ಲೇ ಏರಿಕೆ ಕಂಡಿರದ ಮಟ್ಟ ತಲುಪಿದೆ. ವರ್ಷದ ಮೊದಲ ವಾರದಲ್ಲಿ 24K ಚಿನ್ನವು ಪ್ರತಿ 10ಗ್ರಾಂಗೆ ₹81,170 ಇತ್ತು. ಆದರೆ ಇಂದು ₹86,240ರ ಗಡಿದಾಟಿ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.
ಪ್ರತಿ ಗ್ರಾಂಗೆ ಕೇವಲ ಒಂದು ವಾರದಲ್ಲಿ 22k ಚಿನ್ನವು ₹435ರೂ ಏರಿಕೆಯಾದರೆ, ಅಪರಂಜಿ ಚಿನ್ನವು ಎರಡೇ ದಿನಗಳಲ್ಲಿ ₹220ಕ್ಕೆ ಏರಿಕೆಯಾಗಿದೆ. ಈಗಾಗಲೇ ಕಳೆದ ಆರು ತಿಂಗಳಿನಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಚಿನ್ನದ ಬೆಲೆಯು ನಿರಾಸೆ ಮೂಡಿಸಿತ್ತು. ಆದರೆ ಇಂದಿಗೂ ನಿರಾಸೆ ಮುಂದುವರೆದಿದೆ.
ಕಳೆದ ಒಂದು ವರ್ಷಕ್ಕೆ ಹೋಲಿಸಿದರೆ ಅಪರಂಜಿ ಚಿನ್ನವು ಬರೋಬ್ಬರಿ ₹2,324 ಹೆಚ್ಚಾಗಿದೆ. ಚಿನ್ನದ ಮೇಲಿನ ಹೂಡಿಕೆದಾರರಿಗೆ ಒಂದು ವರ್ಷದಲ್ಲಿ ಸುಮಾರು ಶೇ.31ರಷ್ಟು ಗಳಿಕೆ ತರಿಸಿದೆ. ಆದರೆ ಈ ರೀತಿಯ ದಿಢೀರ್ ಏರಿಕೆಗೆ ಷೇರುಪೇಟೆಯ ವಿಪರೀತ ಇಳಿಕೆ ಅಥವಾ ತಲ್ಲಣಗಳೇ ಕಾರಣ ಎಂಬುದನ್ನು ಗಮನಿಸಬೇಕಾಗುತ್ತದೆ.
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದ ಆರು ತಿಂಗಳಿಂದ ಸುಮಾರು ಶೇ.10 ಕುಸಿತ ಕಂಡಿದೆ. ಇದಕ್ಕೆ ಮುಖ್ಯ ಕಾರಣ ವಿದೇಶಿ ಹೂಡಿಕೆದಾರರ ಹೊರ ಹರಿವು. ಚೀನಾದ ಷೇರು ಮಾರುಕಟ್ಟೆಯು ಹೂಡಿಕೆಗೆದಾರರಿಗೆ ಹೆಚ್ಚು ಆಸಕ್ತಿಯಿರುವ ಕಾರಣಕ್ಕೆ, ಭಾರತೀಯ ಮಾರುಕಟ್ಟೆಯಲ್ಲಿ ಈ ರೀತಿಯ ಗಣನೀಯ ಇಳಿಕೆ ಏರ್ಪಟ್ಟಿದೆ. ಹಾಗೂ ಹೂಡಿಕೆದಾರರು ಇಂತಹ ಸಮಯದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಿ ತಮ್ಮ ಬಂಡವಾಳವನ್ನು ಸ್ಥಿರತೆ ಕಂಡುಕೊಳ್ಳುತ್ತಾರೆ ಎಂಬುದು ಷೇರು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಬಿಜೆಪಿಗೆ ಬಹುಮತ ಎನ್ನುತ್ತೆ ಚುನಾವಣೋತ್ತರ ಸಮೀಕ್ಷೆ
ಒಟ್ಟಿನಲ್ಲಿ ಭಾರತೀಯ ಷೇರುಪೇಟೆಯಲ್ಲಿ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಗಂಭೀರ ತಲ್ಲಣಗಳು ಕಂಡುಬಂದಾಗ ಅಥವಾ ಕುಸಿತ ಕಂಡಾಗ ಅದನ್ನು ಸರಿದೂಗಿಸಲು ಚಿನ್ನವು ಏರಿಕೆಯಾಗುತ್ತದೆ. ಹಾಗಾಗಿ ಷೇರು ಮಾರುಕಟ್ಟೆಯು ಯಾವಾಗ ಸುಧಾರಿಸುತ್ತದೆ ಎಂಬುದನ್ನು ಎದುರು ನೋಡಬೇಕಿದೆ.