ದೇಶದ ಕಾರ್ಪೊರೇಟ್ ವಲಯದ ವಿದೇಶಿ ಹೂಡಿಕೆ (FIIs)ಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಮುಂದಿನ ಷೇರು ಮಾರುಕಟ್ಟೆಯ ಹಾದಿಯಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುವ ನಿರೀಕ್ಷೆಗಳು ಎಲ್ಲೆಡೆ ಮೂಡುತ್ತಿವೆ. ಇದಕ್ಕೆ ದೇಶದ ಈಕ್ವಿಟಿ ಮಾರುಕಟ್ಟೆಯ ವಿಪರೀತ ಏರಿಕೆಯು ಒಂದು ಕಾರಣವಾಗಿದ್ದರೆ, ಚೀನಾದ ಮಾರುಕಟ್ಟೆಯಲ್ಲಿನ ಉತ್ತಮ ಸ್ಥಿತಿಯು ಹೂಡಿಕೆದಾರರನ್ನು ಆಕರ್ಷಿಸಿರುವುದು ಮತ್ತೊಂದು ಕಾರಣವಾಗಿದೆ.
ಕಳೆದ 7 ತಿಂಗಳಲ್ಲಿ ವಿದೇಶಿ ಹೂಡಿಕೆಯ ಹೊರ ಹರಿವು ವಿಪರೀತ ಏರುತಿದ್ದು, ಸುಮಾರು 3.40 ಲಕ್ಷ ಕೋಟಿ ಹಣವನ್ನು ಹಿಂತೆಗೆದು ಚಿನ್ನ ಮತ್ತು ವಿದೇಶಿ ಹೂಡಿಕೆ ಸೇರಿದಂತೆ, ಸರ್ಕಾರಿ ಬಾಂಡ್‌ಗಳ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.
ಇದನ್ನು ಓದಿದ್ದೀರಾ? ಆರ್ಥಿಕ ಹಿಂಜರಿತ ಭೀತಿ: ಅಮೆರಿಕ ಷೇರು ಮಾರುಕಟ್ಟೆ ಕುಸಿತ
ಆದರೂ ಭಾರತೀಯ ಷೇರುಮಾರುಕಟ್ಟೆಯು ಈಗ ವಿದೇಶಿ ಹೂಡಿಕೆಗಳಿಗೆ ಅವಲಂಬಿತವಾಗದೆ, ದೇಶೀಯ ಸಾಂಸ್ಥಿಕ ಹೂಡಿಕೆದಾರರು(DIIs) ಮತ್ತು ಚಿಲ್ಲರೆ ಹೂಡಿಕೆದಾರರು(Retail Investor) ಮಾರುಕಟ್ಟೆಯಲ್ಲಿ ತಮ್ಮ ಪಾತ್ರವನ್ನು ಗಣನೀಯವಾಗಿ ವಿಸ್ತರಿಸುತ್ತಿದ್ದಾರೆ. ಆದರೆ ವಿದೇಶಿರ ಬಂಡವಾಳಕ್ಕೂ ನಮ್ಮಲ್ಲಿನ ಹೂಡಿಕೆಗೂ ಅಂತರ ದಿನೇ ದಿನೇ ಕಡಿಮೆಯಾಗುತ್ತಿದೆ.
2014ರಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆಯು(FIIs) ಗರಿಷ್ಠ ಮಟ್ಟದಲ್ಲಿ ಭಾರತೀಯ ಷೇರುಗಳಲ್ಲಿ ಮಾಲಿಕತ್ವ ಹೊಂದಿದ್ದರು. ಬಳಿಕ ಅವರ ಮಾಲಿಕತ್ವ ಕ್ರಮೇಣ ಇಳಿದು ಕಳೆದ 10 ವರ್ಷಗಳಲ್ಲಿ ಅತ್ಯಲ್ಪ ಮಟ್ಟವನ್ನು ತಲುಪುತ್ತಲೇ ಇದೆ. ಆದರೆ ಈ ಅವಧಿಯಲ್ಲಿ ಸೆನ್ಸೆಕ್ಸ್ ಮೂರರಷ್ಟು ಏರಿಕೆಯಾಗಿದ್ದು, ಹಲವಾರು ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳು 500% ರಿಂದ 1000% ವರೆಗೂ ರಿಟರ್ನ್ ನೀಡಿವೆ.
ಭಾರತೀಯ ಹೂಡಿಕೆದಾರರಿಂದ ಷೇರು ಮಾರುಕಟ್ಟೆಗೆ ಉತ್ಸಾಹಪೂರಿತ ಹಣದ ಹರಿವು ಮುಂದುವರಿಯುವ ನಿರೀಕ್ಷೆಯಿದ್ದು, ಈಗ ಹೆಚ್ಚು ಸ್ಥಿರ ಮತ್ತು ಸ್ವಾವಲಂಬಿ ಮಾರ್ಗದತ್ತ ಸಾಗುತ್ತಿದೆ. ಜೊತೆಗೆ ದೀರ್ಘಾವಧಿಯಲ್ಲಿ ಬೆಳವಣಿಗೆಗೆ ಬೇಕಾದ ಉತ್ತಮ ವಾತಾವರಣವು ವೃದ್ದಿಸಬಹುದು ಎಂಬುದನ್ನು ಗಮನದಲ್ಲಿ ಇಡಬಹುದಾಗಿದೆ.
ಮುಂದಿನ 10–20 ವರ್ಷಗಳ ಭಾರತ ಅಭಿವೃದ್ಧಿಯಲ್ಲಿ ಉತ್ತಮ ಕಾರ್ಪೊರೇಟ್ ಮತ್ತು ಕೆಲವು ಸರ್ಕಾರಿ ವಲಯದಲ್ಲಿ, ಅಭಿವೃದ್ಧಿ ಹಾದಿಯು ಉತ್ತಮ ಸ್ಥಿತಿಯಿಂದ ಕೂಡಿರುತ್ತದೆ ಎಂದು ಹೇಳಬಹುದು. ವಿದೇಶಿ ಹೂಡಿಕೆಗೆ ಅನುಕೂಲರ ಪರಿಸರವನ್ನು ಗಟ್ಟಿಗೊಳಿಸುವುದರ ಜೊತೆಗೆ, ಅಂತರಿಕ ಹೂಡಿಕೆದಾರರನ್ನು ಸದೃಢಗೊಳಿಲು ಬೇಕಾದ ಕ್ರಮಗಳನ್ನು ಸರ್ಕಾರಗಳೂ ಕೈಗೊಳ್ಳಬೇಕಿದೆ. ಆಗ ಮಾತ್ರ ಭಾರತದ ಷೇರು ಮಾರುಕಟ್ಟೆಯ ಭವಿಷ್ಯ ಸುಸ್ಥಿರತೆಯಿಂದ ಮುನ್ನಡೆಯಲಿದೆ.

ಬರಹ: ಸಲಾಹುದ್ದೀನ್ ಕುದ್ರೋಳಿ
