ಬಂಡವಾಳ ಮಾರುಕಟ್ಟೆ, ಷೇರುಪೇಟೆ, ಸ್ಟಾಕ್ ಮಾರ್ಕೆಟ್ – ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಷೇರು ಮಾರುಕಟ್ಟೆಯನ್ನು ಮುಕ್ಕಾಲು ಭಾಗದಷ್ಟು ಜನಸಾಮಾನ್ಯರು ಜೂಜು ಅಂತಲೇ ಭಾವಿಸಿದ್ದಾರೆ. ಆದರೆ, ಉನ್ನತ ಕಂಪನಿಗಳ ಬೆಳಗಣಿಗೆಗೆ ಹಾಗೂ ವಿಸ್ತರಣೆಗೆ ಇದೇ ವೇದಿಕೆ ಹಣ ಒದಗಿಸುತ್ತದೆ ಎನ್ನುವುದು ಗಮನಾರ್ಹ ಸಂಗತಿ.
ಷೇರು ಮಾರುಕಟ್ಟೆಯನ್ನು ತಿಳಿಯುವ ಮೊದಲು ಷೇರು ಎಂದರೇನು? ಮತ್ತು ಮಾರುಕಟ್ಟೆ ಎಂದರೇನು? ಎಂಬುದರ ಬಗ್ಗೆ ಬೇರೆ ಬೇರೆಯಾಗಿ ವಿಭಾಗಿಸಿಯೇ ತಿಳಿಯಬೇಕು.
ಷೇರು ಎಂದರೇನು?
ಉದಾಹರಣೆಗೆ, ಅಭಿಷೇಕ್ ಎಂಬ ಯುವಕನಿಗೆ ಒಂದು ಕಂಪನಿಯನ್ನು ತೆರೆಯಲು ಒಂದು ಲಕ್ಷ ಹಣ ಬೇಕಿದೆ ಎಂದು ಭಾವಿಸೋಣ. ಆದರೆ, ಅಭಿಷೇಕ್ ಬಳಿ ಕೇವಲ 50 ಸಾವಿರ ಮಾತ್ರವಿದೆ. ಈಗ ಆತ ತನ್ನ ಸ್ನೇಹಿತರಾದ ಮಂಜು, ಸೋಮು, ಕಾವ್ಯ, ಸಲೀಮ ಹಾಗೂ ಗುರು ಬಳಿ ತಲಾ 10 ಸಾವಿರ ಹಣವನ್ನು ಪಡೆದು ಕಂಪನಿಯನ್ನು ಕಟ್ಟಿ ಬೆಳೆಸುತ್ತಾನೆ. ಕಂಪನಿಯು ಆರ್ಥಿಕವಾಗಿ ಬೆಳೆದು 1,50,000 ಲಾಭ ಗಳಿಸಿದರೆ, ಆ ಲಾಭದಲ್ಲಿ ಅವರ ಹೂಡಿಕೆಗೆ ತಕ್ಕ ಪಾಲು ಸಿಗುತ್ತದೆ ಅಲ್ಲವೇ? ಇದೇ ಷೇರು ಅಥವಾ ಹಂಚಿಕೆ.
ಹಣವನ್ನು ಹೂಡಿಕೆ ಮಾಡುವಾಗ ತನ್ನ ಸ್ನೇಹಿತರಿಂದ ಹಣ ಪಡೆದುಕೊಂಡಿದ್ದಕ್ಕೆ ದಾಖಲು ಪತ್ರವನ್ನು ಮಾಡಬೇಕು. ಅದನ್ನೇ ಷೇರು ಪತ್ರ ಎನ್ನಲಾಗುತ್ತದೆ. ಆ ಪತ್ರದ ಮೂಲಕ ಒಂದು ಪತ್ರಕ್ಕೆ ಇಂತಿಷ್ಟು ಮೊತ್ತವೆಂದು ನಿಗಧಿಮಾಡಿ, ಅದನ್ನೇ ವಿತರಿಸಿ ಹಣ ಪಡೆದಿರಲಾಗುತ್ತದೆ. ಅಂದರೆ, ಒಂದು ಷೇರು ಪತ್ರದ ಬೆಲೆ 10 ರೂ. ಎಂದುಕೊಂಡರೆ, ಈಗ ಒಟ್ಟು 1 ಲಕ್ಷ ರೂಪಾಯಿಗೆ 10 ಸಾವಿರ ಷೇರುಗಳಾಗುತ್ತದೆ (1,00,000/10=10,000 ಷೇರುಗಳು).
ಈಗ ಅಭಿಷೇಕ್ 50,000 ಹೂಡಿಕೆ ಮಾಡಿದ್ದಾನೆ. ಹಾಗಾಗಿ, ಆತನಿಗೆ 5,000 ಷೇರುಗಳು. ಉಳಿದ ಐದು ಜನ ಸ್ನೇಹಿತರಿಗೆ ತಲಾ 1,000 ಷೇರುಗಳು.
ಮಾರುಕಟ್ಟೆ ಎಂದರೇನು?
ಅಭಿಷೇಕ್ ಮತ್ತು ಐದುಮಂದಿ ಸ್ನೇಹಿತರು ಹೂಡಿಕೆ ಮಾಡಿ ಬೆಳೆಸಿದ ಕಂಪನಿಯನ್ನು ಮಂತೊಂದು ಕಡೆ ವಿಸ್ತರಿಸಿ ಬೆಳೆಸಲು ಅಗಾದವಾದ ಹಣದ ಅವಶ್ಯಕತೆ ಇದೆ. ಹಾಗಾಗಿ, ಸಾರ್ವಜನಿಕವಾಗಿ ಹಣ ಸಂಗ್ರಹಿಸಲು ಮತ್ತು ತಮ್ಮ ಕಂಪನಿಯ ಪಾಲುದಾರಿಕೆ ಪಡೆಯಲು ಅಪರಿಚಿತ ವ್ಯಕ್ತಿಗಳನ್ನು ಆಹ್ವಾನಿಸುತ್ತಾರೆ. ಸಾವಿರಾರು ಜನರು ಅಭಿಷೇಕ್ ಮತ್ತು ಸ್ನೇಹಿತರ ಕಂಪನಿಯ ಷೇರುದಾರರಾಗಲು ಮುಂದೆ ಬಂದು ಷೇರುಗಳನ್ನು ಖರೀದಿಸುತ್ತಾರೆ.
ಹೀಗೆ ಸಾರ್ವಜನಿಕರಿಂದ ನೇರವಾಗಿ ಹಣ ಕೇಳುವಂತಿಲ್ಲ. ಅದಕ್ಕೆ ಭಾರತ ಸರ್ಕಾರದ ಸಂಸ್ಥೆಯಾಗಿರುವ ಸೆಬಿಯಿಂದ (SEBI-Securities Exchange Board Of India) ಒಪ್ಪಿಗೆ ಪಡೆದು IPO(initial public offering) ಪಟ್ಟಿಯಲ್ಲಿ ಲಿಸ್ಟ್ ಆಗಿರಬೇಕು. ಅನಂತರ, ಸೆಬಿಯ ವ್ಯಾಪ್ತಿಗೆ ಬರುವ NSE-BSE ವೇದಿಕೆ ಮೂಲಕ ಸಾರ್ವಜನಿಕರಿಂದ ಹಣ ಪಡೆಯಲು ಕೋರಬಹುದು. ಇಷ್ಟವಿದ್ದವರು ಷೇರುಗಳ ಮೂಲಕ ಖರೀದಿಸುತ್ತಾರೆ. ಇಲ್ಲದಿದ್ದರೆ ಇಲ್ಲ.
ಮತ್ತೊಂದು ಮುಖ್ಯ ಪ್ರಶ್ನೆ ಎಂದರೆ, ‘ಅಪರಿಚಿತರು ಷೇರುಗಳನ್ನು ಖರಿದಿಸುವುದು ಹೇಗೆ’? ಎಂದು. ಇದಕ್ಕೆ ಡಿಮ್ಯಾಟ್(ಮಧ್ಯವರ್ತಿ) ಖಾತೆಯನ್ನ ಪ್ರತಿಯೊಬ್ಬ ಷೇರುದಾರನು ತೆರೆಯಬೇಕಿದೆ. ಆ ಖಾತೆ ಮೂಲಕವೇ ಷೇರುಗಳನ್ನು ಖರೀದಿ ಮಾಡಬಹುದು, ಬೇಡವೆಂದಾಗ ಮಾರಲೂಬಹುದು. ಆದರೆ, ಪ್ರತೀ ವಿನಿಮಯಕ್ಕೆ ಡಿಮ್ಯಾಟ್ ಖಾತೆಯನ್ನು ವ್ಯವಹರಿಸಿಕೊಡುವವರಿಗೆ ಸಣ್ಣ ಪ್ರಮಾಣದ ಕಮಿಷನ್ ಕೊಡಬೇಕಾಗುತ್ತದೆ.
ಷೇರುಗಳನ್ನು ಖರೀದಿ ಮಾಡಿದ ನಂತರ, ಷೇರು ಖರೀದಿಸಿದ ಪ್ರತಿಯೊಬ್ಬನೂ ಅಲ್ಪ ಪ್ರಮಾಣದ ಕಂಪನಿಯ ಮಾಲಿಕರೇ ಆಗುತ್ತಾರೆ. ಕಂಪನಿಯು ಲಾಭದಾಯವಾಗಿ ನಡೆದರೆ ನಿಮಗೂ ಅದಕ್ಕೆ ತಕ್ಕ ಲಾಭ ಸಿಗುತ್ತದೆ. ಇದನ್ನು ಪಾಲುದಾರರಿಗೆ ಡಿವಿಡೆಂಟ್ ರೂಪದಲ್ಲಿ ಹಂಚಿಕೆ ಮಾಡಬಹುದು, ಅಥವಾ ಕಂಪನಿ ವಿಸ್ತರಣೆಗಾಗಿ ವಿನಿಯೋಗ ಮಾಡಿಕೊಳ್ಳಬಹುದು, ಅಥವಾ ಕಂಪನಿಯು ಇನ್ನಷ್ಟು ಜನರಿಗೆ ಹೂಡಿಕೆ ಮಾಡಲು ಆಮಂತ್ರಣ ನೀಡುವ ಮೂಲಕ ವಿಸ್ತರಣಾ ಯೋಜನೆಯನ್ನೂ ಕೈಗೊಳ್ಳಬಹುದು. ಒಂದು ವೇಳೆ ಕಂಪನಿಯು ನಷ್ಟ ಅನುಭವಿಸಿದರೆ ಷೇರುದಾರರಿಗೂ ನಷ್ಟವಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಲಾಭದಾಯಕ ಉದ್ದೇಶದಿಂದ ಹೂಡಿಕೆದಾರರಿಗೆ ಅಥವಾ ಖರೀದಿದಾರರಿಗೆ ಷೇರುಗಳು, ಬಾಂಡ್‌ಗಳು, ಮ್ಯೂಚುಯಲ್ ಫಂಡ್‌ಗಳನ್ನು ಒದಗಿಸುವ ವೇದಿಕೆಗೆ ಷೇರು ಮಾರುಕಟ್ಟೆ ಎಂದು ಕರೆಯಬಹುದು.