ಮಾವೋವಾದಿಗಳ ವಿರುದ್ಧ ಹೋರಾಡಲು ಆದಿವಾಸಿ ಯುವಕರನ್ನು ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ಸುಪ್ರೀಮ್ ಕೋರ್ಟು ಒಪ್ಪಲಿಲ್ಲ. ಇಂತಹ ಸಶಸ್ತ್ರ ಸೇನೆಯ ಇರವು ಕಾಯಿದೆಬಾಹಿರ ಮತ್ತು ಸಂವಿಧಾನಬಾಹಿರ ಎಂದು 2011ರ ಜನವರಿಯಲ್ಲಿ ತೀರ್ಪು ನೀಡಿತು. ಇಬ್ಬರು ಸದಸ್ಯರ ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಸುದರ್ಶನ ರೆಡ್ಡಿ ಮತ್ತು ಎಸ್.ಎಸ್. ನಿಜ್ಜರ್ ಇದ್ದರು.
ಅತ್ಯುತ್ತಮ ಗುಣಮಟ್ಟದ ಕಬ್ಬಿಣದ ಅದಿರು ಮುಂತಾದ ಬೆಲೆ ಬಾಳುವ ಖನಿಜಗಳ ಭಾರೀ ನಿಕ್ಷೇಪದ ಮೇಲ್ಮೈಯಲ್ಲಿ ಜೀವಿಸಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಹುನ್ನಾರ ಕಳೆದ ಕೆಲವು ದಶಕಗಳಿಂದ ದೇಶದಲ್ಲಿ ಚುರುಕುಗೊಂಡಿದೆ. ಈ ಅಮಾನುಷ ಮತ್ತು ಪರಿಸರ ವಿರೋಧಿ ಅನೀತಿಯನ್ನು ಪಕ್ಷ ಭೇದವಿಲ್ಲದೆ ಎಲ್ಲ ಸರ್ಕಾರಗಳೂ ಮಾಡಿಕೊಂಡು ಬಂದಿವೆ.
ನಕ್ಸಲೀಯರು ಭದ್ರತಾ ಪಡೆಗಳ ನಡುವೆ ನಜ್ಜುಗುಜ್ಜಾಗಿದ್ದ ಛತ್ತೀಸಗಢದ ಬಿಜಾಪುರ ಜಿಲ್ಲೆಯ ಗ್ರಾಮವೊಂದರ ಕೆಲ ಜನ 2005ರಲ್ಲಿ ಆರಂಭಿಸಿದ ಶಾಂತಿಯುತ ಆಂದೋಲನದ ಹೆಸರು ‘ಜನ ಜಾಗರಣ’. ಶೀಘ್ರದಲ್ಲೇ ಈ ‘ಆಂದೋಲನ’ ರಾಜ್ಯ ಸರ್ಕಾರಿ ಪ್ರಾಯೋಜಿತ ಸಶಸ್ತ್ರ ಸೇನೆಯ ಸ್ವರೂಪ ಪಡೆಯಿತು. ‘ಸಾಲ್ವಾ ಜುದುಂ’ (ಶಾಂತಿ ಯಾತ್ರೆ) ಎಂದು ಹೆಸರಾಯಿತು. ಬಹುತೇಕ ಆದಿವಾಸಿ ಯುವಕರೇ ಈ ಸಶಸ್ತ್ರ ಸೇನೆಯ ಸಿಪಾಯಿಗಳಾಗಿದ್ದರು. ಈ ಹೆಸರು ಕೊಟ್ಟಾತನ ಹೆಸರು ಮಹೇಂದ್ರ ಕರ್ಮ. ಕಾಂಗ್ರೆಸ್ ಪಕ್ಷದ ಹಿರಿಯ ಆದಿವಾಸಿ ನಾಯಕನಾಗಿದ್ದ.
ಸಾಲ್ವಾ ಜುದುಂ ಶುರುವಿನಿಂದಲೂ ಸರ್ಕಾರದ ಮಿಲಿಟರಿ ಕೂಟವಾಗಿತ್ತೇ ವಿನಾ ಸಾರ್ವಜನಿಕ ಆಂದೋಲನ ಎಂದೆಂದೂ ಆಗಿರಲಿಲ್ಲ ಎನ್ನುವವರಿದ್ದಾರೆ.
ರಾಜ್ಯ ಸರ್ಕಾರವೇ ಮುಂದಾಗಿ ಈ ಸೇನೆಯ ಕೈಗಳಿಗೆ ಬಂದೂಕುಗಳು ಮತ್ತು ಮಾಸಿಕ ಸಂಬಳವನ್ನು ಕೊಟ್ಟು ಸಲಹಿತು. ಹೀಗೆ ನೇಮಕ ಮಾಡಿಕೊಂಡವರನ್ನು ವಿಶೇಷ ಪೊಲೀಸ್ ಅಧಿಕಾರಿಗಳೆಂದು ಕರೆಯಿತು. ‘ಕೋಯಾ ಕಮಾಂಡೋಗಳು’ ಎಂಬ ಹೆಸರನ್ನೂ ಹೊಂದಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮತಗಳ್ಳತನದ ಆರೋಪಕ್ಕೆ ಮೋದಿ ಸರ್ಕಾರವೇ ಉತ್ತರದಾಯಿ
2005-2011ರ ನಡುವೆ ಬಸ್ತರ್ ಕಂಡ ಹಿಂಸೆಯಲ್ಲಿ 422 ಮಾವೋವಾದಿಗಳು, 1019 ಗ್ರಾಮಸ್ಥರು ಹಾಗೂ 726 ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು. ಹಲವು ಹಳ್ಳಿಗಳು ಬೆಂಕಿಗೆ ಆಹುತಿಯಾಗಿದ್ದವು.. ಸರ್ಕಾರವೇ ನೀಡಿರುವ ಅಂಕಿಅಂಶಗಳಿವು.
ಆದಿವಾಸಿಗಳನ್ನು ಕೊಲ್ಲಲು ಆದಿವಾಸಿಗಳ ಕೈಗಳಿಗೇ ಹತಾರುಗಳನ್ನು ನೀಡಲಾಗಿತ್ತು. ನಕ್ಸಲೀಯರು ಮತ್ತು ಸಾಲ್ವಾ ಜುದುಂ ನಡುವಣ ಘರ್ಷಣೆಗಳಲ್ಲಿ ಗ್ರಾಮಸ್ಥರು ದಿಕ್ಕೆಟ್ಟಿದ್ದರು. ನಕ್ಸಲೀಯರನ್ನು ವಿರೋಧಿಸಿದ ಒಂದು ವರ್ಗದ ಜನಕ್ಕೆಂದು ಪರಿಹಾರ ಶಿಬಿರಗಳನ್ನು ಸ್ಥಾಪಿಸಿತ್ತು ಸರ್ಕಾರ. ನಕ್ಸಲೀಯರ ಕುರಿತು ಸಹಾನುಭೂತಿ ಹೊಂದಿದವರನ್ನು ಬೇಟೆಯಾಡಿತ್ತು ಸಾಲ್ವಾ ಜುದುಂ.
ಮಾವೋವಾದಿಗಳ ವಿರುದ್ಧ ಹೋರಾಡಲು ಆದಿವಾಸಿ ಯುವಕರನ್ನು ನೇಮಕ ಮಾಡಿಕೊಳ್ಳುವ ಪದ್ಧತಿಯನ್ನು ಸುಪ್ರೀಮ್ ಕೋರ್ಟು ಒಪ್ಪಲಿಲ್ಲ. ಇಂತಹ ಸಶಸ್ತ್ರ ಸೇನೆಯ ಇರವು ಕಾಯಿದೆಬಾಹಿರ ಮತ್ತು ಸಂವಿಧಾನಬಾಹಿರ ಎಂದು 2011ರ ಜನವರಿಯಲ್ಲಿ ತೀರ್ಪು ನೀಡಿತು. ಇಬ್ಬರು ಸದಸ್ಯರ ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಸುದರ್ಶನ ರೆಡ್ಡಿ ಮತ್ತು ಎಸ್.ಎಸ್. ನಿಜ್ಜರ್ ಇದ್ದರು. ಅದೇ ವರ್ಷದ ಜುಲೈ ತಿಂಗಳಲ್ಲಿ ಸುದರ್ಶನ ರೆಡ್ಡಿ ನಿವೃತ್ತರಾದರು. ಅವರು ನಿವೃತ್ತಿ ಹೊಂದಿ 14 ವರ್ಷಗಳೇ ಉರುಳಿವೆ.
ಇದೇ ಸೆಪ್ಟಂಬರ್ ಒಂಬತ್ತರಂದು ಉಪರಾಷ್ಟ್ರಪತಿ ಹುದ್ದೆಗೆ ನಡೆಯಲಿರುವ ಚುನಾವಣೆಗೆ ತಮ್ಮ ಉಮೇದುವಾರರನ್ನಾಗಿ ಪ್ರತಿಪಕ್ಷಗಳು ಸುದರ್ಶನ ರೆಡ್ಡಿಯವರನ್ನು ಕಣಕ್ಕೆ ಇಳಿಸಿವೆ. ಆಳುವ ಪಕ್ಷದ ಅಭ್ಯರ್ಥಿ ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಬದುಕು ಸವೆಸಿರುವ ಸಿ.ಪಿ.ರಾಧಾಕೃಷ್ಣನ್.
ಈ ಹಂತದಲ್ಲಿ ದೇಶದ ಗೃಹಮಂತ್ರಿ ಮತ್ತು ಮೋದಿ ಸರ್ಕಾರದ ‘ನಂಬರ್ ಟೂ’ ಎನಿಸಿಕೊಂಡಿರುವ ಅಮಿತ್ ಶಾ ಅವರು ನ್ಯಾಯಮೂರ್ತಿ ರೆಡ್ಡಿಯವರ ವಿರುದ್ಧ ವಿವಾದಾಸ್ಪದ ಆರೋಪ ಮಾಡಿದ್ದಾರೆ. ರೆಡ್ಡಿಯವರು ‘ಸಾಲ್ವಾ ಜುದುಂ’ ತೀರ್ಪು ನೀಡದೆ ಹೋಗಿದ್ದರೆ 2020ಕ್ಕಿಂತ ಮೊದಲೇ ಮಾವೋವಾದಿ ಉಪಟಳ ಕೊನೆಯಾಗಿಬಿಡುತ್ತಿತ್ತು. ರೆಡ್ಡಿಯವರ ತೀರ್ಪು ಎಡಪಂಥೀಯ ತೀವ್ರವಾದವನ್ನು ಬಲಪಡಿಸಿತು ಎಂದಿದ್ದಾರೆ.
ಸಾಲ್ವಾ ಜುದುಂ ಕುರಿತ 2011ರ ತೀರ್ಪು ಸುಪ್ರೀಮ್ ಕೋರ್ಟು ನೀಡಿದ್ದಾಗಿತ್ತೇ ವಿನಾ ತಮ್ಮ ಸ್ವಂತದ್ದಾಗಿರಲಿಲ್ಲ ಎಂದು ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಸಾಲ್ವಾ ಜುದುಂ ವಿರುದ್ಧ ಸುಪ್ರೀಮ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದವರ ಪೈಕಿ ಮುಖ್ಯರು ನಂದಿನಿ ಸುಂದರ್. ಅವರ ಪ್ರಕಾರ ಸಾಲ್ವಾ ಜುದುಂ ನೂರಾರು ಹಳ್ಳಿಗಳನ್ನು ಸುಟ್ಟು ಹಾಕಿತು. ಒಂದು ಲಕ್ಷದಷ್ಟು ಜನ ಆಂಧ್ರ- ತೆಲಂಗಾಣಕ್ಕೆ ವಲಸೆ ಹೋದರು. ನೂರಾರು ಮಂದಿಯ ಹತ್ಯೆಯಾಯಿತು. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು. 50 ಸಾವಿರದಷ್ಟು ಮಂದಿಯನ್ನು ಬಲವಂತವಾಗಿ ಸಾಲ್ವಾ ಜುದುಂ ಶಿಬಿರಗಳಲ್ಲಿ ಇಡಲಾಯಿತು. ಬಸ್ತರಿನಲ್ಲಿ ಜರುಗಿದ ಮಾನವ ಹಕ್ಕುಗಳ ಉಲ್ಲಂಘನೆಯ ಚರಿತ್ರೆಯಲ್ಲಿ ಮರೆಯಲಾರದ ಬಹುದೊಡ್ಡ ಅಧ್ಯಾಯವಿದು.
ಸುದರ್ಶನ ರೆಡ್ಡಿ ಮತ್ತು ಎಸ್.ಎಸ್.ನಿಜ್ಜರ್ ನ್ಯಾಯಪೀಠ ನೀಡಿದ್ದ ತೀರ್ಪು ಆಳುವ ವರ್ಗಗಳು ಮತ್ತು ಆದಿವಾಸಿಗಳ ಬವಣೆಯ ಕುರಿತು ಕುರುಡಾಗಿರುವ ಈ ದೇಶದ ಮಧ್ಯಮವರ್ಗದ ಕಣ್ಣು ತೆರೆಸಬೇಕಿತ್ತು. ತೀರ್ಪಿನ ಪ್ರಕಾರ ‘ಮಾವೋವಾದೀ ಬಂಡುಕೋರ ಚಟುವಟಿಕೆ ಮತ್ತು ಪ್ರಭುತ್ವ ಕೈಗೊಂಡ ಮಾವೋವಾದೀ ದಮನ ಕ್ರಮಗಳೆರಡರಿಂದಲೂ ಈ ಸೀಮೆಯ(ಛತ್ತೀಸಗಢ) ಜನ ತೀವ್ರ ಸಂಕಟಕ್ಕೆ ಸಿಕ್ಕಿದ್ದಾರೆ. ಇಂಡಿಯಾದ ಹಲವು ಭಾಗಗಳಲ್ಲಿ ಕಂಡು ಬಂದಿರುವ ಹಿಂಸಾತ್ಮಕ ಆಂದೋಲನ ರಾಜಕಾರಣ ಮತ್ತು ಸಶಸ್ತ್ರ ಬಂಡಾಯ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳಿಗೂ, ತೀವ್ರ ಅಸಮಾನತೆಗಳಿಗೂ, ಇಂತಹ ಅಸಮಾನತೆಗಳನ್ನೇ ಭುಂಜಿಸಿ ಬದುಕುವ ಭ್ರಷ್ಟ ಸಾಮಾಜಿಕ ಮತ್ತು ಪ್ರಭುತ್ವ ವ್ಯವಸ್ಥೆಗೂ ಅತ್ಯಾಪ್ತ ಸಂಬಂಧಗಳಿವೆ ಎಂಬುದು ಚೆನ್ನಾಗಿಯೇ ಗುರುತಿಸಲಾಗಿರುವ ಸಂಗತಿ. ಯೋಜನಾ ಆಯೋಗ ರಚಿಸಿದ್ದ ತಜ್ಞರ ಸಮಿತಿಯೊಂದು ತೀವ್ರಗಾಮಿ ಬಾಧಿತ ಪ್ರದೇಶಗಳಲ್ಲಿ ಅಭಿವೖದ್ಧಿಯ ಸವಾಲುಗಳು ಎಂಬ ವಿಷಯ ಕುರಿತು ವರದಿ ನೀಡಿದೆ ಎನ್ನುವ ನ್ಯಾಯಾಲಯದ ತೀರ್ಪು ವರದಿಯ ಕಡೆಯ ವಾಕ್ಯಗಳನ್ನು ಹೀಗೆ ಉಲ್ಲೇಖಿಸಿದೆ
“ಸ್ವಾತಂತ್ರ್ಯಾ ನಂತರದಲ್ಲಿ ಅಳವಡಿಸಿಕೊಳ್ಳಲಾಗಿರುವ ಅಭಿವೃದ್ಧಿಯ ಮಾದರಿಯು ಸಮಾಜದ ಅಂಚಿನಲ್ಲಿ ಬದುಕಿರುವ ಜನವರ್ಗಗಳಲ್ಲಿನ ಹಾಲಿ ಅಸಂತೃಪ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ…ನೀತಿ ನಿರೂಪಕರು ನೀಡಿದ ಈ ಅಭಿವೖದ್ಧಿ ಮಾದರಿಯನ್ನು ಈ ಸಮುದಾಯಗಳ ಮೇಲೆ ಹೇರುತ್ತ ಬರಲಾಗಿದೆ… ಪರಿಣಾಮವಾಗಿ ಈ ಜನವರ್ಗಗಳಿಗೆ ದುರಸ್ತಿ ಮಾಡಲಾಗದಷ್ಟು ಹಾನಿ ತಟ್ಟಿದೆ. ಈ ಅಭಿವೃದ್ಧಿ ಮಾದರಿಯ ಬಹುತೇಕ ಬೆಲೆ ತೆತ್ತವರು ಬಡವರು. ಅವರ ಹಿತವನ್ನು ಬಲಿಗೊಟ್ಟು ಬಲಾಢ್ಯ ಜನವರ್ಗಗಳು ಈ ಅಭಿವೃದ್ಧಿ ಮಾದರಿಯ ಲಾಭಗಳನ್ನು ಬಹು ದೊಡ್ಡ ಪ್ರಮಾಣದಲ್ಲಿ ಕಬಳಿಸಿದೆ. ಬಡ ಜನವರ್ಗಗಳ ಅಗತ್ಯಗಳ ಕುರಿತು ದಪ್ಪಚರ್ಮ ಬೆಳೆಸಿಕೊಂಡ ಅಭಿವೃದ್ಧಿ ಮಾದರಿಯು ಈ ಜನವರ್ಗಗಳನ್ನು ಒಕ್ಕಲೆಬ್ಬಿಸಿದ್ದು ಅವರನ್ನು ನಿಕೃಷ್ಟ ಬದುಕಿಗೆ ತಳ್ಳಿದೆ. ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗಗಳ ಕುರಿತು ಹೇಳುವುದಾದರೆ ಈ ಅಭಿವೃದ್ಧಿ ಮಾದರಿಯು ಈ ಸಮುದಾಯಗಳ ಸಾಮಾಜಿಕ ಸಂಘಟನೆಯನ್ನು, ಸಾಂಸ್ಕೖತಿಕ ಅಸ್ಮಿತೆಯನ್ನು ಹಾಗೂ ಸಂಪನ್ಮೂಲ ನೆಲೆಯನ್ನು ನಾಶ ಮಾಡಿದೆ…ಪರಿಣಾಮವಾಗಿ ಈ ಸಮುದಾಯಗಳು ಶೋಷಣೆಗೆ ಹೆಚ್ಚು ಹೆಚ್ಚು ಪಕ್ಕಾಗುವಂತೆ ಆಗಿದೆ. ಅಭಿವೃದ್ಧಿಯ ಈ ಮಾದರಿ ಮತ್ತು ಇದರ ಅನುಷ್ಠಾನವು ಅಧಿಕಾರಶಾಹಿಯ ಭ್ರಷ್ಟ ಆಚರಣೆಗಳನ್ನು ಹೆಚ್ಚಿಸಿದೆ. ಜೀವಿ ಮತ್ತೊಂದು ಜೀವಿಯನ್ನು ಕಬಳಿಸುವ ಲಾಲಸೆಕೋರ ಹಪಾಹಪಿಯ(rapascious) ಕಾಂಟ್ರ್ಯಾಕ್ಟರುಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಸಮಾಜದ ಇತರೆ ಆಶೆಬುರುಕ ವರ್ಗಗಳು ಸಂಪನ್ಮೂಲಗಳನ್ನು ಕಬಳಿಸಿ ಆದಿವಾಸಿಗಳ ಬದುಕಿನ ಘನತೆಯನ್ನು ಉಲ್ಲಂಘಿಸಿವೆ”
“ಸರ್ಕಾರಿ ವರದಿಗಳು ವಾಸ್ತವ ಸ್ಥಿತಿಯನ್ನು ತಗ್ಗಿಸಿ ತೆಳುವಾಗಿಸಿ ಹೇಳುವುದೇ ಸಾಮಾನ್ಯ ರೂಢಿ. ಆದರೆ ಭಾರತ ಸರ್ಕಾರದ ಯೋಜನಾ ಆಯೋಗ ರಚಿಸಿದ ತಜ್ಞರ ಸಮಿತಿಯೊಂದು ಕೊನೆಯಿಲ್ಲದ ದುರಾಶೆಯನ್ನು ತಣಿಸಿಕೊಳ್ಳಲೋಸುಗ ಮತ್ತೊಂದು ಜೀವಿಯನ್ನು ಕೊಲ್ಲುವುದು ಎಂಬ ಅರ್ಥ ಬರುವ rapascious ಶಬ್ದವನ್ನು ಬಳಸಿದೆ. ನಮ್ಮ ಬಹುಸಂಖ್ಯೆಯ ಸಹ ದೇಶವಾಸಿಗಳು ಅನುಭವಿಸುತ್ತಿರುವ ಮೇರೆಯಿಲ್ಲದ ಕಷ್ಟ ಕಾರ್ಪಣ್ಯಗಳ ಸೂಚಕ ಈ ಪದ. ಘನತೆಯ ಬದುಕನ್ನು ಬದುಕಲು ಅಗತ್ಯವಿರುವ ಸಾಧನಗಳನ್ನು ಈ ಜನವರ್ಗಗಳಿಗೆ ನಿರಾಕರಿಸಿ ನಿಕೃಷ್ಟ ಬದುಕಿಗೆ ಅವರನ್ನು ವ್ಯವಸ್ಥಿತವಾಗಿ ನೂಕಿರುವುದು ಇದೇ ಅಭಿವೖದ್ಧಿ ಮಾದರಿಯ ಶಕ್ತಿಗಳು ಮತ್ತು ಹುನ್ನಾರಗಳೇ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ತಜ್ಞರ ಸಮಿತಿಯ ಇಂತಹ ವರದಿಯ ಬುದ್ಧಿಮಾತುಗಳಿಗೆ ಭಾರತ ಸರ್ಕಾರ ಕಿವುಡು ಎನ್ನುವ ನ್ಯಾಯಾಲಯ ತಜ್ಞರ ಸಮಿತಿಯ ಬುದ್ಧಿಮಾತುಗಳನ್ನು ಉಲ್ಲೇಖಿಸಿದೆ- ದೇಶದ ನಾನಾ ಭಾಗಗಳಲ್ಲಿ ನೆಲೆಸಿರುವ ಸಾಮಾಜಿಕ- ಆರ್ಥಿಕ ಸನ್ನಿವೇಶವೇ ನಕ್ಸಲೀಯ ಆಂದೋಲನ ಇಲ್ಲವೇ ಇತರೆ ಹಿಂಸಾತ್ಮಕ ರೂಪಗಳಿಗೆ ಕಾರಣವಾಗಿದೆ. ಈ ಬಿಗುವುಗಳನ್ನು ಸಾಮಾಜಿಕ- ಆರ್ಥಿಕ- ರಾಜಕೀಯ ಸಂದರ್ಭಗಳಲ್ಲಿ ಇಟ್ಟು ಘನತೆ ಗೌರವದ ಬದುಕನ್ನು ಕಲ್ಪಿಸಿಕೊಡುವ ಜೀವನೋಪಾಯದ ಹಕ್ಕು, ಪ್ರಾಣದ ಹಕ್ಕಿನಂತಹ ಜನಪರ ಕಾರ್ಯಸೂಚಿಯನ್ನು ಮುನ್ನೆಲೆಗೆ ತರಬೇಕು….. ತೀವ್ರಗಾಮಿ ಆಂದೋಲನ ಮತ್ತು ಬಡತನದ ನಡುವೆ ಮತ್ತು ಅರಣ್ಯಗಳು ಮತ್ತು ಅರಣ್ಯವಾಸಿಗಳ ನಡುವೆ ನೇರ ಆಳ ಸಂಬಂಧವಿದೆ… ಒಕ್ಕಲೆಬ್ಬಿಸುವ ನೀತಿಯಿಂದ ಆದಿವಾಸಿಗಳು ಗಿರಿಜನರು ಕಾರ್ಪಣ್ಯಗಳ ಸರಣಿಗೆ ಬಿದ್ದು ಬೇಯುತ್ತಾರೆ ಎಂದು ಸರ್ಕಾರದ ನೀತಿ ನಿರೂಪಕ ದಾಖಲೆ ದಸ್ತಾವೇಜುಗಳು ಸಾರುತ್ತವೆ.
ಆದರೆ ಸರ್ಕಾರಗಳು ಈ ಕ್ಷೋಭೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಎಂದೇ ಬಗೆದು ಭಿನ್ನಮತವನ್ನೂ ಅಸಂತೖಪ್ತಿಯನ್ನೂ ಜನತಂತ್ರದ ಸಕಾರಾತ್ಮಕ ಅಂಶವೆಂದು ಪರಿಗಣಿಸದೆ ದಮನ ಮಾಡುತ್ತಿವೆ. ಈ ಮನಸ್ಥಿತಿ ಬದಲಾಗಬೇಕು. ಬಡಜನರ ಸಿಟ್ಟು, ಅಶಾಂತಿಯನ್ನು ಎದುರಿಸಲು ಅದೇ ಬಡಜನರ ಮಕ್ಕಳ ಕೈಗೆ ಬಂದೂಕನ್ನು ನೀಡುತ್ತಿದೆ ಪ್ರಭುತ್ವ. ಕಾಳ್ಗಿಚ್ಚನ್ನು ಪ್ರತಿ ಕಿಚ್ಚನ್ನು ಹಚ್ಚಿ ಅಡಗಿಸುವುದು ಅರಣ್ಯದಲ್ಲಿ ಸಾಧ್ಯ. ಆದರೆ ಸಮಾಜ ಅರಣ್ಯ ಅಲ್ಲ. ಮನುಷ್ಯರೆಂದರೆ ಹುಲ್ಲಿನ ಒಣ ಹುಲ್ಲಿನ ಎಸಳುಗಳಲ್ಲ ಎಂದು ಸಾರುವ ಈ ತೀರ್ಪು ತಾಯಿಕರುಳಿನ ಮಮತೆ ಕಾರುಣ್ಯದಿಂದ ಬರುವಂತಹುದು. ಸುಡುಸತ್ಯವನ್ನು ಅರಗಿಸಿಕೊಳ್ಳದೆ ಯಥಾಸ್ಥಿತಿಯನ್ನು ಬೆಂಬಲಿಸುವವರು ಮಾತ್ರವೇ ಈ ತೀರ್ಪಿನ ಕುರಿತು ತಕರಾರೆತ್ತಬಲ್ಲರು.
