ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲ ಸಹೋದ್ಯೋಗಿಗಳು ರಾಜೀನಾಮೆ ಕುರಿತು ವಹಿಸಿದ ಸುದೀರ್ಘ ಮೌನವೂ ನಿಗೂಢ. ಪ್ರಧಾನಿ ತಡವಾಗಿ ಪ್ರಕಟಿಸಿದ ಬಿರುಸಿನ ಚುಟುಕು ಪ್ರತಿಕ್ರಿಯೆಯೂ ಹಲವು ಅರ್ಥಗಳನ್ನು ಚಿಮ್ಮಿಸಿದೆ. ‘ದೇಶ ಸೇವೆಯ ಹಲವು ಅವಕಾಶಗಳನ್ನು ಧನಕರ್ ಪಡೆದಿದ್ದರು’ ಎಂಬ ಮೋದಿ ಮಾತಿನಲ್ಲಿ ‘ಇನ್ನು ನಿಮ್ಮ ಸೇವೆ ಸಾಕು ತೊಲಗಿ’ ಎಂಬ ಗೂಢಾರ್ಥವಿರುವುದು ನಿಚ್ಚಳ.
ಮೊದಲೇ ಗೊತ್ತುಪಡಿಸಿದ ನಾಟಕೀಯ ತಿರುವುಗಳು ಮತ್ತು ರಾಜಕೀಯ ಎದುರಾಳಿಗಳನ್ನು, ದೇಶದ ಜನತೆಯನ್ನು ಚಕಿತಗೊಳಿಸುವ ತೀರ್ಮಾನಗಳು ಮೋದಿ-ಶಾ ಆಡಳಿತದ ಹೆಗ್ಗುರುತುಗಳು. ಮಳೆಗಾಲದ ಸಂಸತ್ ಅಧಿವೇಶನದ ಶುರುವಿನಲ್ಲೇ ಮತ್ತೊಂದು ಮಹಾನಾಟಕ ಅನಾವರಣಗೊಂಡಿದೆ.
ಅವಧಿ ತೀರಲು ಇನ್ನೂ ಎರಡು ವರ್ಷಗಳಿರುವಾಗಲೇ ಜಗದೀಪ್ ಧನಕರ್ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವಧಿ ತೀರುವ ತನಕ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ಧನಕರ್ ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ರಾತ್ರೋರಾತ್ರಿಯ ವಿದ್ಯಮಾನ ಪ್ರಶ್ನೆಗಳ ಮಳೆಯನ್ನೇ ಸುರಿಸಿದೆ. ಹಲವು ಬಗೆಯ ಹುನ್ನಾರ-ಪಿತೂರಿಯ ಊಹಾಪೋಹಗಳಿಗೆ ಕಾರಣವಾಗಿದೆ. ರಾಜೀನಾಮೆಗೆ ಆರೋಗ್ಯದ ಕಾರಣವನ್ನು ಧನಕರ್ ನೀಡಿದ್ದಾರೆ. ಆದರೆ ಇದು ನಿಜಕ್ಕೆ ಹೊದಿಸಿರುವ ನೆಪದ ಪರದೆ. ಧರ್ಮ ಮತ್ತು ರಾಜಕಾರಣ ಎಬ್ಬಿಸಿದ ಒಳಸುಳಿಗಳು ಧನಕರ್ ತಲೆದಂಡ ಪಡೆದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲ ಸಹೋದ್ಯೋಗಿಗಳು ರಾಜೀನಾಮೆ ಕುರಿತು ವಹಿಸಿದ ಸುದೀರ್ಘ ಮೌನವೂ ನಿಗೂಢ. ಪ್ರಧಾನಿ ತಡವಾಗಿ ಪ್ರಕಟಿಸಿದ ಬಿರುಸಿನ ಚುಟುಕು ಪ್ರತಿಕ್ರಿಯೆಯೂ ಹಲವು ಅರ್ಥಗಳನ್ನು ಚಿಮ್ಮಿಸಿದೆ. ‘ದೇಶ ಸೇವೆಯ ಹಲವು ಅವಕಾಶಗಳನ್ನು ಧನಕರ್ ಪಡೆದಿದ್ದರು’ ಎಂಬ ಮೋದಿ ಮಾತಿನಲ್ಲಿ ಇನ್ನು ನಿಮ್ಮ ಸೇವೆ ಸಾಕು ತೊಲಗಿ ಎಂಬ ಗೂಢಾರ್ಥವಿರುವುದು ನಿಚ್ಚಳ.
ಉಪರಾಷ್ಟ್ರಪತಿಯೊಬ್ಬರು ಅನಿರೀಕ್ಷಿತವಾಗಿ ಹಠಾತ್ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿಯವರು ಅದನ್ನು ತಕ್ಷಣವೇ ಅಂಗೀಕರಿಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಉಪರಾಷ್ಟ್ರಪತಿಯವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಸೋಮವಾರದಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಶುರುವಾಗಿದೆ. ಸೋಮವಾರ ಮತ್ತು ಮಂಗಳವಾರ ಅನಾರೋಗ್ಯದ ಯಾವುದೇ ಸೂಚನೆ ಇಲ್ಲದೆ ಧನಕರ್ ಎಂದಿನಂತೆ ಕಾರ್ಯನಿರ್ವಹಿಸಿದ್ದಾರೆ.
ಧನಕರ್ ಅತೀವ ರಾಜಕೀಯ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಷ್ಟ್ರಪತಿ ಹುದ್ದೆಯ ಮೇಲೆ ಕಣ್ಣಿಟ್ಟವರು. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ, ಉಪರಾಷ್ಟ್ರಪತಿಯಾಗಿ ಮೋದಿ-ಶಾ ಸರ್ಕಾರದ ‘ಕಾರ್ಯಸೂಚಿ’ಯನ್ನು ಭಕ್ತ ಬಂಟನಂತೆ ನೆರವೇರಿಸುತ್ತ ಬಂದವರು. ಮೋದಿ ಸರ್ಕಾರಕ್ಕೆ ವ್ಯತಿರಿಕ್ತವೆನಿಸುವ ತೀರ್ಪುಗಳಿಗಾಗಿ ಸುಪ್ರೀಮ್ ಕೋರ್ಟನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದವರು. ಅಂತಹ ತೀರ್ಪೊಂದನ್ನು ಜನತಂತ್ರದ ಮೇಲಿನ ಅಣ್ವಸ್ತ್ರ ದಾಳಿ ಎಂಬ ಅವರ ನಿಂದನೆ ಸಂವಿಧಾನವಾದಿಗಳ ಹುಬ್ಬೇರಿಸಿತ್ತು. ನ್ಯಾಯಾಂಗದಲ್ಲಿನ ಭ್ರಷ್ಟಚಾರ ಕುರಿತು ಅವರ ಟೀಕೆ ಟಿಪ್ಪಣಿಗಳು ಬಿಡುಬೀಸಾಗಿದ್ದವು. ‘ಕೊಲಿಜಿಯಂ ವ್ಯವಸ್ಥೆ’ಯನ್ನು ಹಿಗ್ಗಾಮುಗ್ಗ ಎಳೆದಾಡಿದ್ದರು. ನ್ಯಾಯಾಂಗವು ಸಂಸತ್ತಿಗಿಂತ ದೊಡ್ಡದಲ್ಲ ಎಂಬ ಅವರ ಗುಡುಗಿಗೆ, ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮೂರೂ ಸಂವಿಧಾನಕ್ಕೆ ಅಧೀನ ಎಂಬ ತಣ್ಣನೆಯ ಪ್ರತಿಕ್ರಿಯೆ ನೀಡಿತ್ತು ಸುಪ್ರೀಮ್ ಕೋರ್ಟು. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳನ್ನು, ಅವುಗಳ ನಾಯಕರನ್ನು ಘನತೆಯಿಂದ ನಡೆಸಿಕೊಳ್ಳುತ್ತಿರಲಿಲ್ಲ. ಈ ಮಾತಿಗೆ ಅನೇಕ ಉದಾಹರಣೆಗಳಿವೆ. ರೋಸಿ ಹೋಗಿದ್ದ ಪ್ರತಿಪಕ್ಷಗಳು ಒಂದು ಹಂತದಲ್ಲಿ ಧನಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದವು. ಮೋದಿ-ಶಾ ಅವರಿಗೆ ತಮ್ಮ ಅತೀವ ನಿಷ್ಠೆ ತೋರುವ ಭರದಲ್ಲಿ ಅವರು ಆಡುತ್ತಿದ್ದ ಮಾತುಗಳು ವಿವಾದಕ್ಕೆ ಈಡಾಗುತ್ತಿದ್ದವು, ಅವುಗಳಲ್ಲಿ ಬೆಂಕಿಯಿತ್ತೇ ವಿನಾ ಬೆಳಕು ಇರಲಿಲ್ಲ. ಸದನದಲ್ಲಿ ಅವರು ಬಿಜೆಪಿ ಪರವಾಗಿ ತೋರುತ್ತಿದ್ದ ನಿಚ್ಚಳ ಪಕ್ಷಪಾತ, ಅವರು ಹೊಂದಿರುವ ಸಂಸದೀಯ ಹುದ್ದೆಗೆ ಶೋಭೆ ತಂದಿರಲಿಲ್ಲ. ಆದರೆ ಇವೆಲ್ಲವೂ ‘ಅರ್ಹತೆ’ಯ ಆಭರಣಗಳು ಮತ್ತು ಭುಜಕೀರ್ತಿಗಳಾಗಿದ್ದವು.
ಮೋದಿ-ಅಮಿತ್ ಶಾ ಅವರು ಎದುರಿಗೆ ಬಂದರೆ ತಮ್ಮ ಬೆನ್ನುಬಾಗಿಸಿ ಕೈಮುಗಿದ ಮುದ್ರೆಯಲ್ಲಿ ಹತ್ತಾರು ಸಲ ವಂದಿಸುತ್ತಲೇ ಇರುತ್ತಿದ್ದರು ಧನಕರ್. ಇಂತಹ ಕೆಲ ಸಂದರ್ಭಗಳಲ್ಲಿ ಮೋದಿಯವರು ಪ್ರತಿಯಾಗಿ ವಂದಿಸದೆ ಮೋರೆ ತಿರುಗಿಸಿಕೊಂಡು ಮುಖಭಂಗ ಉಂಟು ಮಾಡಿದ್ದಿದೆ. ಧನಕರ್ ಅವರು ಶಿಷ್ಟಾಚಾರದ ಪ್ರಕಾರ ರಾಷ್ಟ್ರಪತಿಯವರ ನಂತರ ದೇಶದ ಎರಡನೆಯ ಅತ್ಯುನ್ನತ ಹುದ್ದೆ ಹೊಂದಿದವರು. ಈ ಹುದ್ದೆಯ ಹಿರಿಮೆಗರಿಮೆಗಳನ್ನು ಆಳುವವರ ಪದತಲತದಲ್ಲಿಟ್ಟಿದ್ದರು ಧನಕರ್. ಈ ಹಿಂದೆ ರಾಷ್ಟ್ರಪತಿಯಾಗಿದ್ದ ಗ್ಯಾನಿ ಜೇಲ್ ಸಿಂಗ್, ತಮ್ಮನ್ನು ಆ ಹುದ್ದೆಗೇರಿಸಿದ ಇಂದಿರಾ ಗಾಂಧೀ ಅವರು ಕಸ ಗುಡಿಸು ಎಂದರೆ ಗುಡಿಸುತ್ತೇನೆ ಎಂದಿದ್ದುಂಟು. ಆದರೆ ಮುಖಾಮುಖಿಯಾದಾಗ ಪರಸ್ಪರರ ಘನತೆ ಗೌರವವನ್ನು ಪಾಲಿಸುತ್ತಿದ್ದರು. ಮೊನ್ನೆ ಸೋಮವಾರ ರಾಜ್ಯಸಭೆಯಲ್ಲಿ ನಡೆದ ಬೆಳವಣಿಗೆಗಳು ಧನಕರ್ ರಾಜೀನಾಮೆಗೆ ಕಾರಣವಾದವು ಎಂಬುದು ಮೇಲ್ನೋಟಕ್ಕೆ ಕಂಡು ಬರುವ ಅಂಶ.
ತಮ್ಮ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾದ ಪ್ರಕರಣದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ ವರ್ಮ ಅವರನ್ನು ಪದಚ್ಯುತಗೊಳಿಸುವ ಮಹಾಭಿಯೋಗ ಪ್ರಕ್ರಿಯೆಯನ್ನು ಲೋಕಸಭೆಯಲ್ಲಿ ಶುರು ಮಾಡಿ ಉಭಯ ಸದನಗಳಿಂದ ಒಮ್ಮತದ ಅಂಗೀಕಾರ ಪಡೆಯುವ ಉದ್ದೇಶವನ್ನು ಮೋದಿ ಸರ್ಕಾರ ಹೊಂದಿತ್ತು. ಆದರೆ ಧನಕರ್ ಈ ಉದ್ದೇಶವನ್ನು ತಲೆಕೆಳಗಾಗಿಸಿದರು. ಅಷ್ಟೇ ಅಲ್ಲ, ವಿಶ್ವಹಿಂದೂ ಪರಿಷತ್ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮುಸ್ಲಿಮ್ ದ್ವೇಷ ಭಾಷಣ ಮಾಡಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ್ ಪದಚ್ಯುತಿ ಪ್ರಕ್ರಿಯೆ ಕುರಿತು ಪ್ರತಿಪಕ್ಷ ನೀಡಿರುವ ನೋಟಿಸನ್ನು ಕೂಡ ಪರಿಶೀಲಿಸುತ್ತಿರುವುದಾಗಿ ಸದನದಲ್ಲಿ ಪ್ರಕಟಿಸಿದರು. ಸೋಮವಾರ ಅಪರಾಹ್ನ ಧನಕರ್ ಅಧ್ಯಕ್ಷತೆಯಲ್ಲಿ ನಿಗದಿಯಾಗಿದ್ದ ರಾಜ್ಯಸಭಾ ಕಲಾಪ ಸಲಹಾ ಸಮಿತಿಯ ಸಭೆಗೆ ಸಭಾನಾಯಕ ಜೆ.ಪಿ.ನಡ್ಡಾ ಮತ್ತು ಸಂಸದೀಯ ಕಲಾಪ ಸಚಿವ ಕಿರಣ್ ರಿಜಿಜು ಬರಲೇ ಇಲ್ಲ.
ಸರ್ಕಾರ ತಮ್ಮದೇ ಪದಚ್ಯುತಿಯ ಪ್ರಕ್ರಿಯೆ ಆರಂಭಿಸಿರುವುದು ಸಂಜೆಯ ಹೊತ್ತಿಗೆ ಉಪರಾಷ್ಟ್ರಪತಿಯವರಿಗೆ ಸ್ಪಷ್ಟವಾದಂತಿದೆ. ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ನಂತರ ರಾತ್ರಿ ಒಂಬತ್ತೂವರೆಯ ಹೊತ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಪದತ್ಯಾಗದ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಉನ್ನತ ಸಂಸದೀಯ ಹುದ್ದೆಯಲ್ಲಿರುವವರು ನೀಡಿರುವ ಈ ರಾಜೀನಾಮೆಯ ಹಿಂದಿ ನಿಜ ಕಾರಣಗಳನ್ನು ಮೋದಿ ಸರ್ಕಾರ ಬಹಿರಂಗಪಡಿಸಬೇಕು. ಧನಕರ್ ಬಿಜೆಪಿಯ ಉಪರಾಷ್ಟ್ರಪತಿಯಲ್ಲ, ಬದಲಿಗೆ ದೇಶದ ಉಪರಾಷ್ಟ್ರಪತಿಯಾಗಿದ್ದರು. ವಿಶೇಷವಾಗಿ ಜನತಾಂತ್ರಿಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಬದುಕಿನಲ್ಲಿರುವವರ ನಡೆ ನುಡಿಗಳು ಪಾರದರ್ಶಕ ಆಗಿರಬೇಕು.
ಧನಕರ್ ಸ್ಥಾನಕ್ಕೆ ಹೊಸದಾಗಿ ಚುನಾವಣೆ ನಡೆಯುವುದು ನಿಶ್ಚಿತ. ಬಿಜೆಪಿ ನೇತೃತ್ವದ ಎನ್.ಡಿ.ಎ.ಗೆ ಅಗತ್ಯ ಬಹುಮತವಿದ್ದು, ಈ ಒಕ್ಕೂಟ ಬಯಸುವ ವ್ಯಕ್ತಿಯೇ ಹೊಸ ಉಪರಾಷ್ಟ್ರಪತಿಯಾಗಲಿದ್ದಾರೆ. ಪರಿಣಾಮವಾಗಿ ಅವರು ರಾಜ್ಯಸಭೆಯ ಸಭಾಪತಿಯೂ ಆಗಲಿದ್ದಾರೆ. ಈ ಹೊಸ ಸಭಾಪತಿ ಧನಕರ್ ಅವರನ್ನು ಮೀರಿಸುವ ಭಟ್ಟಂಗಿ- ಪಕ್ಷಪಾತಿ ಆಗಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
