ಈ ದಿನ ಸಂಪಾದಕೀಯ | ಎಚ್ಚರೆಚ್ಚರ! ನೇಪಾಳದ ಬೆಂಕಿ ‘ಸರ್ವಾಧಿಕಾರಿ’ಗಳ ಬುಡಕ್ಕೂ ಹರಡೀತು!

Date:

Advertisements

ನೇಪಾಳದ ಜನಾಕ್ರೋಶ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಹಿಂದಿಕ್ಕಿದೆ. ಜಗತ್ತಿನ ಏಕೈಕ ‘ಹಿಂದೂ ರಾಷ್ಟ್ರ’ ಎಂದು ಭಾರತದಲ್ಲಿ ಬಣ್ಣಿಸಲಾಗುವ ನೇಪಾಳ ತನ್ನ ಪ್ರಧಾನಿ ಮತ್ತು ಮಂತ್ರಿಗಳ ಮನೆಗಳನ್ನು ಸುಟ್ಟೇ ಹಾಕಿದೆ. ಜನರ ಎದೆಯ ಸಿಟ್ಟು ರೆಟ್ಟೆಗಳಿಗೆ ಇಳಿದರೆ ಆ ರೊಚ್ಚಿನ ಉಬ್ಬರದ ಮುಂದೆ ಆಳುವವರ ಫಿರಂಗಿ ಬಂದೂಕುಗಳ ಆಟ ನಡೆಯುವುದಿಲ್ಲ. ಇತಿಹಾಸದ ಹತ್ತು ಹಲವು ಜನಕ್ರಾಂತಿಗಳು ಈ ಮಾತಿಗೆ ನಿತ್ಯನಿದರ್ಶನಗಳಾಗಿ ಉಳಿದಿವೆ.

ಭಾರತದ ನೆರೆಯ ಪುಟ್ಟ ದೇಶ ನೇಪಾಳ ಮತ್ತೊಂದು ರಕ್ತಚರಿತ್ರೆಗೆ ಸಾಕ್ಷಿಯಾಗಿದೆ. ನೇಪಾಳದ ಹಾಲಿ ‘ಗದ್ದುಗೆ ಮುಕುಟಗಳು’ ಅಕ್ಷರಶಃ ಹಾರಿ ಹೋಗಿವೆ. ಭ್ರಷಾತಿಭ್ರಷ್ಟ ಲಾಲಸೆಕೋರ ವಿಲಾಸೀ ಅಧಿಕಾರ ವ್ಯವಸ್ಥೆಯು ಜನಾಕ್ರೋಶದ ಜಂಝಾವಾತಕ್ಕೆ ಸಿಕ್ಕಿ ತರಗೆಲೆಗಳಾಗಿ ಥರಗುಟ್ಟಿದೆ.

ನೆರೆಹೊರೆಯ ದೇಶಗಳಲ್ಲಿ ಕಳೆದ ಕೆಲ ವರ್ಷಗಳಿಂದ ಜನಸಮೂಹಗಳಿಂದ ಸಿಡಿಯುತ್ತಿರುವ ಕ್ರಾಂತಿಗಳ ವಿದ್ಯಮಾನಗಳು ದೇಶವಿದೇಶಗಳ ಸರಹದ್ದುಗಳನ್ನು ದಾಟಿ ಆಳುವ ವರ್ಗಗಳ ಎದೆ ನಡುಗಿಸಿದ್ದರೆ ಯಾವ ಅಚ್ಚರಿಯೂ ಇಲ್ಲ. ಆದರೆ ಭಂಡಜೀವಗಳು ಬೆಂಕಿ ತಮ್ಮ ಕಾಲಬುಡಕ್ಕೆ ಬರುವ ತನಕ ಅಧಿಕಾರದ ಅಮಲಿನಲ್ಲಿ ಮುಳುಗೇಳುವುದನ್ನು ಬಿಡುವುದಿಲ್ಲ. ‘ಕೋಟೆ ಕಟ್ಟಿ ಮೀಸೆ ತಿರುವಿ’ ಮರೆಯುತ್ತಾರೆ. ಬೇರುಮಟ್ಟದ ಜನಜೀವನದ ನೋವು-ನಲಿವುಗಳ ಸ್ಪರ್ಶವನ್ನು ಕಳೆದುಕೊಂಡು ಸಂವೇದನಾ ಹೀನರಾಗುತ್ತಾರೆ. ಪಟ್ಟಭದ್ರರಾಗಿಬಿಡುತ್ತಾರೆ. ಅಧಿಕಾರದ ಗದ್ದುಗೆಯೇ ಆದಿಯೂ ಅಂತ್ಯವೂ ಆಗಿಬಿಡುತ್ತದೆ.

ಸೆಪ್ಟಂಬರ್ ಎಂಟರ ಇರುಳು ಘೋರ ಕರಾಳವೆಂದು ಈ ದೇಶದ ಇತಿಹಾಸ ಬರೆದುಕೊಳ್ಳಲಿದೆ. ಇನ್ನೂ ಬದುಕಿ ಬಾಳಬೇಕಿದ್ದ ಶಾಲಾ ಕಾಲೇಜುಗಳ 19 ಎಳೆಯ ಜೀವಗಳು ಅಂದು ರಾತ್ರಿ ಆಳುವವರ ಆಣತಿಗೆ ಕುಣಿಯುವ ಪೊಲೀಸರ ಬಂದೂಕುಗಳಿಗೆ ಬಲಿಯಾಗಿವೆ. ಈ ಸಂಖ್ಯೆ ಮೂವತ್ತನ್ನು ದಾಟಿರುವ ವರದಿಗಳಿವೆ.

ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ವಿರುದ್ಧ ಬೀದಿಗಿಳಿದಿದ್ದ ನೇಪಾಳಿ ಯುವಜನ ತಮ್ಮನ್ನು ತಾವು ‘ಜನರೇಶನ್ ಝೀ’ ಎಂದು ಗುರುತಿಸಿಕೊಂಡಿದ್ದರು. ಇವರ ಪ್ರತಿಭಟನೆ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಿದ್ದರ ವಿರುದ್ಧ ಎಂದು ಆಳುವವರ ಬೂಟು ನೆಕ್ಕುವ ಸಮೂಹ ಮಾಧ್ಯಮಗಳು ವರದಿ ಮಾಡಿವೆ. ಆದರೆ ಈವರೆಗೆ ಅದುಮಿಟ್ಟ ಅಸಲು ಸಮಸ್ಯೆಗಳು ಈ ಪ್ರತಿಭಟನೆಯಲ್ಲಿ ಸ್ಫೋಟಿಸಿರುವುದೇ ವಾಸ್ತವ ಸಂಗತಿ. ಬಡವರು-ಬಲ್ಲಿದರ ನಡುವೆ ಹಿರಿದಾಗುತ್ತಲೇ ಹೊರಟಿರುವ ಅಸಮಾನತೆ, ಎಣೆಯಿಲ್ಲದ  ಭ್ರಷ್ಟಾಚಾರ ನಿರುದ್ಯೋಗಗಳು ಹುಟ್ಟಿ ಹಾಕಿದ್ದ ಹತಾಶೆಯೇ ಪ್ರತಿಭಟನೆಯ ಮೂಲವಾಗಿತ್ತು. ಹನ್ನೊಂದು ವರ್ಷದ ಶಾಲಾ ಬಾಲಕಿಯೊಬ್ಬಳ ಮೇಲೆ ಹಾಯ್ದು ಆಕೆಯನ್ನು ಗಾಳಿಯಲ್ಲಿ ಚಿಮ್ಮಿಸಿದ ಮಂತ್ರಿಯೊಬ್ಬರ ವಾಹನ, ನಿಲ್ಲದೆ ಪರಾರಿಯಾಗಿದ್ದ ಘಟನೆ ಈ ಹತಾಶೆಯ ಸಿಡಿಮದ್ದಿಗೆ ಕಿಡಿಯಾಯಿತು. ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಈ ಅಪಘಾತವನ್ನು ಮಾಮೂಲಿ ಆಕಸ್ಮಿಕ, ಚಿಕಿತ್ಸೆಯ ವೆಚ್ಚಗಳನ್ನು ಸರ್ಕಾರ ಭರಿಸುತ್ತದೆ ಎಂಬ ಪ್ರಧಾನ ಮಂತ್ರಿಯ ಸಂವೇದನಾಹೀನ ಹೇಳಿಕೆ ಜನರನ್ನು ರೊಚ್ಚಿಗೆಬ್ಬಿಸಿತ್ತು.

ಈ ಪ್ರತಿಭಟನೆಗೆ ಮಾತುಕತೆಯೇ ಸರ್ಕಾರದ ಸಹಜ ಸ್ವಾಭಾವಿಕ ಪ್ರತಿಕ್ರಿಯೆ ಆಗಬೇಕಿತ್ತು. ಆದರೆ ರಾಜ್ಯಶಕ್ತಿಯ ಮೊದಲ ಆಯ್ಕೆ ದಮನವೇ ಆಗಿರುತ್ತದೆ. ದಮನದ ಈ ನಿರೀಕ್ಷೆಯನ್ನು ನೇಪಾಳಿ ಸರ್ಕಾರ ಸುಳ್ಳು ಮಾಡಲಿಲ್ಲ. ಸೋಶಿಯಲ್ ಮೀಡಿಯಾ ಮೇಲೆ ನಿಷೇಧ ಮತ್ತು ಕರ್ಫ್ಯೂ ಹೇರಲಾಯಿತು. ಕಂಡಲ್ಲಿ ಗುಂಡಿಕ್ಕುವ ಅಮಾನುಷ ಆದೇಶ ನೀಡಲಾಯಿತು.

ಮರುದಿನ ಈ ಪರ್ವತ ಪ್ರಾಂತ್ಯದ ರಸ್ತೆ ರಸ್ತೆಗಳಲ್ಲಿ ರಾಜಕಾರಣಿಗಳು ಮಂತ್ರಿ ಮಾನ್ಯರ ವಿರುದ್ಧ ಜನಾಕ್ರೋಶದ ಲಾವಾ ಪ್ರವಾಹವೇ ಉಕ್ಕಿ ಹರಿದಿದೆ. ಈ ಕ್ರೋಧಕ್ಕೆ ಪಕ್ಷಗಳ ಭೇದವಿಲ್ಲ. ಎಡ-ಬಲ ಎರಡರ ಮೇಲೆಯೂ ಕೆಂಡದ ಮಳೆ ಕರೆಯಲಾಗಿದೆ. ಚಂಡಪ್ರಚಂಡರೂ ಕಂಗೆಟ್ಟಿದ್ದಾರೆ. ರಾಜಕಾರಣಿಗಳು ಈಗಲೂ ದೇಶ ತೊರೆದು ತಲೆಮರೆಸಿಕೊಳ್ಳುವ ಹಂಚಿಕೆಯಲ್ಲಿದ್ದಾರೆಂದು ವರದಿಯಾಗಿದೆ. ಕರ್ಫ್ಯೂ ಆದೇಶವನ್ನು ಧಿಕ್ಕರಿಸಿ ಇರುವೆ ಸೈನ್ಯದಂತೆ ಬೀದಿಗೆ ಇಳಿದಿದ್ದಾರೆ ಜನ. ‘ಅಧಿಕಾರದ ಅರಮನೆ’ಗಳು ಹೊತ್ತಿ ಉರಿದು ದಗ್ಧಗೊಂಡಿವೆ. ಪ್ರಧಾನಮಂತ್ರಿ ಮತ್ತು ಮಂತ್ರಿಗಳ ನಿವಾಸಗಳಿಗೆ ಬೆಂಕಿ ಇಕ್ಕಲಾಗಿದೆ. ಪ್ರಧಾನಮಂತ್ರಿ ಕೆ.ಪಿ.ಶರ್ಮ ಒಲೀ ದೇಶ ಬಿಟ್ಟು ಪರಾರಿಯಾಗಿದ್ದಾರೆ. ಭ್ರಷ್ಟ ಮಂತ್ರಿಗಳನ್ನು ಅವರ ವಿಲಾಸೀ ಬಂಗಲೆಗಳಿಂದ ಹೊರಗೆಳೆದು ಬೀದಿ ಬೀದಿಗಳಲ್ಲಿ ಅಟ್ಟಾಡಿಸಿಕೊಂಡು ಥಳಿಸಲಾಗಿದೆ. ದಗಲುಬಾಜಿ ಅಧಿಕಾರಿಗಳನ್ನು ಅರೆಬೆತ್ತಲೆಗೊಳಿಸಿ ಥಳಿಸಿ ಹೊಳೆಗೆ ಎಸೆಯಲಾಗಿದೆ. ಮಂತ್ರಿಗಳ ಮಹಲುಗಳಲ್ಲಿ ಪತ್ತೆಯಾದ ಥೈಲಿಗಟ್ಟಲೆ ಹಣದ ರಾಶಿಯನ್ನು ತಮ್ಮ ಕಿಸೆಗಳಿಗೆ ಇಳಿಸದೆ ಬೀದಿಗಳಿಗೆ ಒಯ್ದು ಗಾಳಿಗೆ ತೂರಲಾಗಿದೆ.

ಬುಧವಾರದ ಹೊತ್ತಿಗೆ ನೇಪಾಳಿ ಸೇನೆಯು ರಂಗಕ್ಕಿಳಿದು ‘ಶಾಂತಿ’ ಸ್ಥಾಪಿಸಿರುವುದಾಗಿ ಸಾರಿದೆ. ಪೊಲೀಸ್ ಮತ್ತು ಸೇನಾಬಲಗಳು ಆಳುವವರ ಹಿಡಿಯಲ್ಲಿ ಖಡ್ಗಗಳೇ ಎಂಬ ಕಟುಸತ್ಯ ಜನತಂತ್ರ ಆಡಳಿತಗಳಿಂದಲೇ ಹೊರಹೊಮ್ಮಿರುವ ಹತ್ತಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ವರ್ಷದ ಹಿಂದೆ ಬಾಂಗ್ಲಾದೇಶದ ಜನಶಕ್ತಿ ಹೀಗೆಯೇ ಸಿಡಿಮದ್ದಿನಂತೆ ಸ್ಫೋಟಿಸಿತ್ತು. ಪ್ರಧಾನಿ ಶೇಖ್ ಹಸೀನಾ ಪರಾರಿಯಾಗಿ ಭಾರತದಲ್ಲಿ ತಲೆಮರೆಸಿಕೊಂಡಿದ್ದಾರೆ. ಸಾವಿಗೂ ನನಗೂ ಇದ್ದ ಅಂತರ ಕೇವಲ 20 ನಿಮಿಷ. ಅಷ್ಟರಲ್ಲಿ ಜೀವ ಉಳಿಸಿಕೊಂಡು ಪರಾರಿಯಾದೆ ಎಂದು ಆಕೆ ಹೇಳಿದ್ದುಂಟು. ಎರಡು ದಶಕ ಅಧಿಕಾರ ಹಿಡಿದಿದ್ದ ಈಕೆಯ ಸರ್ಕಾರಿ ನಿವಾಸಕ್ಕೆ ಲಗ್ಗೆ ಹಾಕಿದ್ದ ಬಾಂಗ್ಲಾ ದೇಶದ ಬಡಜನ, ಅಲ್ಲಿಯ ವಿಲಾಸಿ ವಸ್ತುಗಳನ್ನು ಹೊತ್ತೊಯ್ದಿದ್ದರು.

ಮೂರು ವರ್ಷಗಳಷ್ಟು ಹಿಂದಕ್ಕೆ ನೋಟ ಹರಿಸಿದರೆ ಭಾರತದ ನೆರೆಹೊರೆಯ ಮತ್ತೊಂದು ಪುಟ್ಟದೇಶ ಶ್ರೀಲಂಕಾದಲ್ಲೂ ಸಾವಿರ ಸಾವಿರ ಪ್ರತಿಭಟನಾಕಾರರು ಅಲ್ಲಿನ ರಾಷ್ಟ್ರಪತಿ ಗೋಟಬ್ಯಾ ರಾಜಪಕ್ಸ ಅವರ ವಿಲಾಸೀ ಸರ್ಕಾರಿ ಮಹಲಿಗೆ ಹೀಗೆಯೇ ಲಗ್ಗೆ ಇಟ್ಟಿದ್ದರು. ರಾಜಪಕ್ಸ ಎಂಬ ಕಡುಭ್ರಷ್ಟ ಕೂಡ ಕೆ.ಪಿ.ಶರ್ಮ ಒಲೀ- ಶೇಖ್ ಹಸೀನಾರಂತೆಯೇ ಜೀವ ಅಂಗೈಲಿಟ್ಟುಕೊಂಡು ಪರಾರಿಯಾಗಿದ್ದ.

ಈ ಮೂವರೂ ರಾಜಕಾರಣಿಗಳು ಭರವಸೆಯ ಬೆಟ್ಟಗಳನ್ನೇ ತಮ್ಮ ಜನತೆಯ ಮುಂದಿಟ್ಟು ಅಧಿಕಾರ ಹಿಡಿಯುತ್ತಿದ್ದವರು. ಆದರೆ ತಮ್ಮ ದೇಶಗಳನ್ನು ಭ್ರಷ್ಟಾಚಾರ, ನಿರುದ್ಯೋಗ, ಹಣದುಬ್ಬರ, ಬೆಲೆ ಏರಿಕೆ, ಸ್ವಜನ ಪಕ್ಷಪಾತಗಳ ಬೆಟ್ಟಗಳಡಿ ಹೂತು ಹಾಕಿ ಉಸಿರು ಕಟ್ಟಿಸಿದರು. ಶ್ರೀಲಂಕಾವಂತೂ ಆನ್ನ ಔಷಧಿ ಇಂಧನಗಳಿಲ್ಲದೆ ತತ್ತರಿಸಿತ್ತು. ಹಸುಗೂಸುಗಳಿಗೆ ಹಾಲು ಕೂಡ ಆಕಾಶ ಕುಸುಮವಾಗಿ ಹೋಗಿತ್ತು. ‘ಗೋಟಾ ಗೋ ಹೋಮ್’ ಎಂದು ಗರ್ಜಿಸಿದ ಜನಸಮೂಹ ಪೊಲೀಸರ ಅಡೆತಡೆಗಳನ್ನು ಹುಡಿ ಹಾರಿಸಿ ರಾಷ್ಟ್ರಾಧ್ಯಕ್ಷನ ಅರಮನೆಗೆ ಲಗ್ಗೆ ಇಟ್ಟಿತ್ತು. ಈ ಮೂರೂ ದೇಶದ ಪ್ರಜೆಗಳು, ಪ್ರಜಾಪ್ರಭುತ್ವದ ಹೆಸರಿನಲ್ಲಿ ತಮ್ಮ ಪ್ರತಿನಿಧಿಗಳೆನಿಸಿಕೊಂಡವರು ಬದುಕುತ್ತಿದ್ದ ವಿಲಾಸ ವೈಭೋಗಗಳ ಬದುಕನ್ನು ಕಂಡು ಬೆಕ್ಕಸ ಬೆರಗಾಗಿದ್ದರು. ಈಜುಕೊಳಗಳು, ಸುಖದ ಸುಪ್ಪತ್ತಿಗೆಗಳು, ರಾಜ ಮಹಾರಾಜರು ಪವಡಿಸುತ್ತಿದ್ದಂತಹ ಪಲ್ಲಂಗಗಳು, ಬಂಗಾರ ಲೋಹದ ಮುತ್ತು-ರತ್ನ ಖಚಿತ ಸಿಂಹಾಸನಗಳು, ಭಕ್ಷ್ಯಭೋಜ್ಯಗಳು, ಒಡವೆ ವಸ್ತ್ರಗಳು, ವಿದೇಶೀ ವಿಲಾಸೀ ಮೋಟಾರು ವಾಹನಗಳು, ಪ್ರತ್ಯೇಕ ವಿಮಾನಗಳ ಕಂಡು ದಂಗು ಬಡಿದಿದ್ದಾರೆ. ಒಮ್ಮೆ ಅಧಿಕಾರ ಹಿಡಿದರೆ ಮೈಮರೆತು ಮೆರೆದು ತೊತ್ತಳದುಳಿಯುವ ಈ ಮದೋನ್ಮತ್ತ ಸಲಗಗಳು ಈ ಮೂರೇ ದೇಶಕ್ಕೆ ಸೀಮಿತವೇನೂ ಅಲ್ಲ. ತಮ್ಮ ದೇಶದ ಪ್ರಜೆಗಳು ಹಸಿದು ಆಕಾಶವನ್ನೇ ಹೊದ್ದು ಮಲಗಿ, ರೋಗರುಜಿನಗಳಿಗೆ ಚಿಕಿತ್ಸೆಯಿಲ್ಲದೆ ಬೀದಿ ನಾಯಿಗಳಂತೆ ಸಾಯುತ್ತಿದ್ದರೂ ಆಳುವವರ ಪರಮಸುಖೀ ಜಗತ್ತಿಗೆ ಅದರ ನದರೇ ಇರುವುದಿಲ್ಲ.

ನೇಪಾಳದ ಜನಾಕ್ರೋಶ ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು ಹಿಂದಿಕ್ಕಿದೆ. ಜಗತ್ತಿನ ಏಕೈಕ ‘ಹಿಂದೂ ರಾಷ್ಟ್ರ’ ಎಂದು ಭಾರತದಲ್ಲಿ ಬಣ್ಣಿಸಲಾಗುವ ನೇಪಾಳ ತನ್ನ ಪ್ರಧಾನಿ ಮತ್ತು ಮಂತ್ರಿಗಳ ಮನೆಗಳನ್ನು ಸುಟ್ಟೇ ಹಾಕಿದೆ. ಜನರ ಎದೆಯ ಸಿಟ್ಟು ರೆಟ್ಟೆಗಳಿಗೆ ಇಳಿದರೆ ಆ ರೊಚ್ಚಿನ ಉಬ್ಬರದ ಮುಂದೆ ಆಳುವವರ ಫಿರಂಗಿ ಬಂದೂಕುಗಳ ಆಟ ನಡೆಯುವುದಿಲ್ಲ. ಇತಿಹಾಸದ ಹತ್ತು ಹಲವು ಜನಕ್ರಾಂತಿಗಳು ಈ ಮಾತಿಗೆ ನಿತ್ಯನಿದರ್ಶನಗಳಾಗಿ ಉಳಿದಿವೆ.

ಇದನ್ನೂ ಓದಿ ನೆರೆಯ ರಾಷ್ಟ್ರಗಳ ಅರಾಜಕತೆಯಿಂದ ಪಾಠ ಕಲಿತು, ಸರಿ ದಾರಿಗೆ ಬರುವುದೇ ಭಾರತ?

ನೇಪಾಳವು ಭಾರತದ ಮಿತ್ರರಾಷ್ಟ್ರವೆಂದೇ ಅನುಗಾಲವೂ ಗುರುತಿಸಿಕೊಂಡಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ದೂರ ಸರಿದಿರುವ ವರದಿಗಳಿವೆ. ನೇಪಾಳದಲ್ಲಿ ಬಂಡವಾಳ ಹೂಡಿಕೆಯಲ್ಲಿ ಭಾರತದ ಏಕಸ್ವಾಮ್ಯ ಕೊನೆಯಾಗಿದೆ. ಭಾರತದ ‘ಶತ್ರುದೇಶ’ ಚೀನಾದ ಹೂಡಿಕೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ.

ಭಾರತ ಮತ್ತು ಚೀನಾ ನಡುವಣ ಭೌಗೋಳಿಕ ಪ್ರದೇಶವಾಗಿರುವ ನೇಪಾಳದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಮೋದಿ ಸರ್ಕಾರ ಎಚ್ಚರಿಕೆಯಿಂದ ಗಮನಿಸಿ ಅಡಿಯಿಡಬೇಕಿದೆ. ಕೂಟನೀತಿಯ ನದರು ತಪ್ಪಿದರೆ ಅನಾಹತವೇ ಆದೀತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X