ಈ ದಿನ ಸಂಪಾದಕೀಯ | ಮತಾಂತರ ವಿಚಾರದಲ್ಲಿ ಬಿಜೆಪಿಯ ಬೂಟಾಟಿಕೆ ಮತ್ತು ವಾಸ್ತವ

Date:

Advertisements
"ನಾವು ತೆಗೆದುಕೊಳ್ಳುವ ಒಂದು ಔಷಧದಿಂದ ರೋಗ ಗುಣಮುಖವಾಗದಿದ್ದರೆ ನಾವು ಔಷಧ ಬದಲಿಸಬೇಕಲ್ಲವೆ? ವೈದ್ಯರನ್ನು ಬದಲಿಸುವುದು ಬೇಡವೆ?''- ಇದು ಮತಾಂತರ ಮತ್ತು ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರು ತಳೆದ ನಿಲುವಾಗಿತ್ತು.

ಸೆಪ್ಟೆಂಬರ್ 22ರಿಂದ ನಡೆಯುವ ಜಾತಿ ಸಮೀಕ್ಷೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಬಿಜೆಪಿ ನಾಯಕರು ಹೊಸ ಕ್ಯಾತೆ ತೆಗೆದಿದ್ದಾರೆ. ”ಮತಾಂತರಗೊಂಡ ಕ್ರೈಸ್ತರಿಗಾಗಿ ಹೊಸ ಕಾಲಂ ತೆರೆದಿರುವುದು ಮಹಾಪರಾಧ, ಮತಾಂತರಕ್ಕೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ” ಎಂದು ಮುಗಿಬಿದ್ದಿದ್ದಾರೆ.

”ಮತಾಂತರಕ್ಕೆ ನನ್ನ ಬೆಂಬಲವಿಲ್ಲ. ಆದರೆ ಮತಾಂತರ ಅವರ ಹಕ್ಕು. ಅದನ್ನು ತಪ್ಪಿಸಲು ಆಗಲ್ಲ. ಹಿಂದೂಧರ್ಮದಲ್ಲಿನ ಅಸಮಾನತೆಯಿಂದ ಕೆಲವರು ಮತಾಂತರ ಆಗುತ್ತಾರೆ” ಎಂದು ಸಿದ್ದರಾಮಯ್ಯನವರು ಹೇಳಿಕೆ ನೀಡಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರು ಧರ್ಮ ರಕ್ಷಕರೆಂಬಂತೆ ವರ್ತಿಸತೊಡಗಿದ್ದಾರೆ.

”ಹಿಂದೂ ಧರ್ಮೀಯರು ಬೇರೆ ಧರ್ಮಕ್ಕೆ ಮತಾಂತರವಾಗಬೇಕು ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ಪ್ರಚೋದಿಸುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿಗಳ ಪಟ್ಟಿಯಲ್ಲಿ, ಹಿಂದೂ ಜಾತಿಗಳ ಜತೆಗೆ ‘ಕ್ರಿಶ್ಚಿಯನ್’ ಎಂದು ಸೇರಿಸಿದೆ. ಈ ಪ್ರಮಾದವನ್ನು ಸರಿಪಡಿಸುವಂತೆ ಬಿಜೆಪಿ ಒತ್ತಾಯಿಸಿತ್ತು. ಅದನ್ನು ಮಾಡುವ ಬದಲಿಗೆ, ಮತಾಂತರವನ್ನು ಬೆಂಬಲಿಸುವ ಮೂಲಕ ತಾವು ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರ, ರಹಸ್ಯ ಕಾರ್ಯಸೂಚಿ ಕಾಂಗ್ರೆಸ್‌ಗೆ ಇದ್ದಂತಿದೆ” ಎಂದಿದ್ದಾರೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ.

ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ”ಸಂವಿಧಾನದಲ್ಲಿ ಆರು ಧರ್ಮಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಸಮೀಕ್ಷೆಯಲ್ಲೂ ಅಷ್ಟೇ ಧರ್ಮಗಳ ಹೆಸರು ಇರಬೇಕಿತ್ತು. ಆದರೆ ಈ ಸರ್ಕಾರ ಮತಾಂತರಗೊಂಡ ಕ್ರೈಸ್ತರು ಎಂಬ ಹೊಸ ಕಾಲಂ ಅನ್ನು ಸೃಷ್ಟಿಸಿದೆ. ಇದು ಸಂವಿಧಾನಬಾಹಿರ. ಇದು ರಾಜಕೀಯ ಪ್ರೇರಿತ ಕ್ರೈಸ್ತ ಧರ್ಮಕ್ಕೂ ಮತಾಂತರ ನಡೆದಿರುತ್ತದೆ, ಅಲ್ಲಿಂದ ಬೇರೆ ಧರ್ಮಕ್ಕೂ ಮತಾಂತರವಾಗಿರುತ್ತದೆ. ಆದರೆ ಸಿದ್ದರಾಮಯ್ಯ ಅವರು ಕ್ರೈಸ್ತ ಧರ್ಮಕ್ಕಾದ ಮತಾಂತರಕ್ಕೆ ಮಾತ್ರ ಮನ್ನಣೆ ನೀಡಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂಬುದನ್ನು ಕಡೆಗಣಿಸಿ, ಮತಾಂತರ ಜನರ ಹಕ್ಕು ಎಂದಿದ್ದಾರೆ. ಸರ್ಕಾರದ ಈ ನಡೆ ರಾಜಕೀಯ ಪ್ರೇರಿತವಾದುದು” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮೋದಿಯವರ ತಾಯಿ ಮಾತ್ರ ಹೆಣ್ಣೇ! ಸೋನಿಯಾರನ್ನು ಅವಮಾನಿಸುವುದು ಸರಿಯೇ?

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿಯವರ ಹೇಳಿಕೆ ಲಾಜಿಕ್‌ನಿಂದ ಕೂಡಿದೆ. ”ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ಇದೆ ಎನ್ನುವ ಏಕೈಕ ಕಾರಣ ಕೊಟ್ಟು ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡಿ, ಏಸು ಕ್ರಿಸ್ತನ ಎದುರು ಸಮಾನವಾಗಿ ನಿಲ್ಲಿಸುತ್ತೇವೆ ಎಂದಿದ್ದರು. ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಹಿಂದೂ ಸಮಾಜದೊಳಗಿರುವ ಅಷ್ಟೂ ಜಾತಿಗಳ ಹೆಸರಿನ ಹಿಂದೆ ಕ್ರೈಸ್ತ/ಕ್ರಿಶ್ಚಿಯನ್ ಎಂದು ಸೇರಿಸಿದ್ದು ಏಕೆ? ಕ್ರೈಸ್ತ ಧರ್ಮದಲ್ಲೂ ಹಿಂದೂ ಸಮಾಜಕ್ಕೆ ಸಮಾನಾಂತರವಾದ ಜಾತಿ ವ್ಯವಸ್ಥೆ ನಿರ್ಮಾಣ ಮಾಡಲು ಹೊರಟಿದ್ದೀರಾ? ಆ ಜನರು ಯಾವ ಉದ್ದೇಶದಿಂದ ಮತಾಂತರವಾದರೋ, ಆ ಉದ್ದೇಶಕ್ಕೆ ವಿರುದ್ಧವಾದ ನಿಲುವನ್ನು ಸರ್ಕಾರ ತಳೆದಿದೆ. ಇಂತಹ ಟೊಳ್ಳುವಾದ ಮುಂದಿಡುತ್ತಿರುವ ಸಿದ್ದರಾಮಯ್ಯ ಅವರಿಗೆ, ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಬೊಟ್ಟು ಮಾಡುವ ನೈತಿಕತೆ ಇಲ್ಲ” ಎಂದಿದ್ದಾರೆ.

ಮತಾಂತರಕ್ಕೆ ಸಂಬಂಧಿಸಿದಂತೆ ಬಿಜೆಪಿ, ಸಂಘಪರಿವಾರದವರ ಈ ವಾದ ಹೊಸದೇನೂ ಅಲ್ಲ. ಕ್ರಿಶ್ಚಿಯನ್ ಧರ್ಮದಿಂದ ಇನ್ನೊಂದು ಧರ್ಮಕ್ಕೆ ಹೋದವರಿಗಾಗಿ ಕಾಲಂ ಇಲ್ಲ ಎನ್ನುವುದು ಸ್ವಲ್ಪ ಯೋಚಿಸಬಹುದಾದ ಪ್ರಶ್ನೆಯಾದರೂ, ಕ್ರಿಶ್ಚಿಯನ್ ಆಗಿದ್ದವರು ಹಿಂದೂ ಧರ್ಮಕ್ಕೆ ಮರಳಿದ್ದರೆ ಯಾವ ಜಾತಿಗೆ ಸೇರಲ್ಪಟ್ಟಿದ್ದಾರೆಂದು ಕೇಳಬೇಕಾಗುತ್ತದೆ. ಏಕೆಂದರೆ ಯಾವುದನ್ನು ಹಿಂದೂ ಧರ್ಮ ಎಂದು ಕರೆದುಕೊಂಡಿದ್ದೇವೆಯೋ ಅದು ಜಾತಿಗಳೇ ಪ್ರಧಾನವಾಗಿರುವ ಸಮಾಜ.

ಭಾರತದಲ್ಲಿನ ಜಾತಿ ವ್ಯವಸ್ಥೆಯ ದುರಂತವೆಂದರೆ, ಹೊರಗಿನಿಂದ ಇಲ್ಲಿಗೆ ಬಂದ ಧರ್ಮಗಳಲ್ಲಿಯೂ ಜಾತಿಗಳು ರೂಪುಗೊಂಡವು. ಈ ನಿಟ್ಟಿನಲ್ಲಿ ಸಾಮಾಜಿಕ ಅಸಮಾನತೆಗಳನ್ನು ತನ್ನೊಳಗೆ ಸೇರಿಸಿಕೊಂಡು ಇಸ್ಲಾಂ ಮತ್ತು ಕ್ರಿಶ್ಚಿಯನ್‌ ಧರ್ಮಗಳು ಭಾರತೀಯಗೊಂಡವು ಎಂದು ವಿಷಾದದಿಂದಲೇ ಹೇಳಬೇಕಾಗುತ್ತದೆ. ಆದರೆ ಹಿಂದೂ ಧರ್ಮದಲ್ಲಿ ರೂಕ್ಷವಾಗಿ ಕಾಣುವಷ್ಟು ಅಸ್ಪೃಶ್ಯತೆ ಆಚರಣೆ, ಶ್ರೇಣೀಕೃತ ವ್ಯವಸ್ಥೆ ಆ ಧರ್ಮಗಳಲ್ಲಿ ಇಲ್ಲ ಎಂಬುದನ್ನೂ ಗಮನಿಸಬೇಕಾಗುತ್ತದೆ. ಅಸ್ಪೃಶ್ಯತೆಯ ನೋವು ತೀವ್ರವಾದಾಗ ಶೋಷಿತ ಸಮುದಾಯಗಳು ಬಿಡುಗಡೆಯನ್ನು ಬಯಸಿ, ತಮ್ಮನ್ನು ಮನುಷ್ಯರಂತೆ ಕಾಣಬಯಸುವವರ ಧರ್ಮವನ್ನು ಅನುಸರಿಸಿದ್ದರೆ ಆಶ್ಚರ್ಯಪಡಬೇಕಾದ ಸಂಗತಿಯಲ್ಲ. ಸುಮಾರು ನೂರಿನ್ನೂರು ವರ್ಷಗಳ ದಲಿತ್ ಕ್ರಿಶ್ಚಿಯನ್ ಪರಂಪರೆಯನ್ನು ನೋಡಿದರೆ, ನಮಗೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ದನದ ಮಾಂಸ ಸೇವನೆಯಲ್ಲಿನ ಸಾಮ್ಯತೆ ಹಾಗೂ ಮನುಷ್ಯರಂತೆ ಸಮಾನರಾಗಿ ಕಂಡ ರೀತಿಯಿಂದಾಗಿ ಬ್ರಿಟಿಷರ ಧರ್ಮವನ್ನು ಅನುಸರಣೆ ಮಾಡಿದವರು ‘ದಲಿತ್ ಕ್ರಿಶ್ಚಿಯನ್’ ಎಂದೇ ಗುರುತಿಸಲ್ಪಟ್ಟರು. ‘ಹಿಂದೂ- ಕ್ರಿಶ್ಚಿಯನ್’ ಧರ್ಮಗಳ ಸಾಂಸ್ಕೃತಿಕ ಮಿಶ್ರಿಣ ದಲಿತ್ ಕ್ರಿಶ್ಚಿಯನ್ನರಲ್ಲಿ ಕಾಣುತ್ತದೆ. ಧರ್ಮವು ಇಲ್ಲಿ ಸೆಲೆಬ್ರೇಟ್ ಸಂಗತಿಯಾಗಿ ಕಂಡರೂ ಆಗೊಮ್ಮೆ ಹೀಗೊಮ್ಮೆ ದಲಿತ್ ಕ್ರಿಶ್ಚಿಯನ್ನರ ಮೇಲೆ ಇತರ ಜಾತಿಗಳ ಕ್ರಿಶ್ಚಿಯನ್ನರು ದಬ್ಬಾಳಿಕೆ ಮಾಡಿದ ಉದಾಹರಣೆಗಳಿವೆ. ಮಾದಿಗ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್- ಹೀಗೆ ಜಾತಿಯೂ ಮತಾಂತರದೊಂದಿಗೆ ಹೋಗಿದೆ ಎಂಬುದು ಕೂಡ ವಾಸ್ತವ.

ಮುಖ್ಯವಾಗಿ ಸೆಕ್ಯುಲರ್ ಭಾರತದಲ್ಲಿ ಧರ್ಮೋಪಾಸನೆ ವೈಯಕ್ತಿಕವಾದದ್ದು. ಯಾವುದೇ ಧರ್ಮವನ್ನು ಆರಾಧಿಸುವ ಧಾರ್ಮಿಕ ಹಕ್ಕನ್ನು ಮೊಟುಕು ಮಾಡುವಂತೆ ಕಾನೂನು ರೂಪಿಸುವುದೇ ಸಂವಿಧಾನ ಬಾಹಿರ. ಅಂತಹ ಕಾಯ್ದೆಗಳು ಈಗಾಗಲೇ ಅಸ್ತಿತ್ವದಲ್ಲಿದ್ದರೆ ಸರ್ಕಾರ ಅಂಥವುಗಳನ್ನು ವಾಪಸ್ ಪಡೆಯುವುದೇ ಸರಿಯಾದ ನಡೆಯಾಗುತ್ತದೆ.

‘ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದ ಹಿಂದೂಗಳು ಸಮಾನತೆಯನ್ನು ಗಳಿಸಿಕೊಂಡರೆ?’ ಎಂದು ಪ್ರಶ್ನಿಸುವ ಹಿಂದೂ ಧರ್ಮ ರಕ್ಷಕರು, ಇಲ್ಲಿನ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಏನು ಮಾಡಿದ್ದಾರೆಂದು ಮೊದಲು ಹೇಳಬೇಕು. ಜಾತಿಯ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗಳನ್ನು ತಿಳಿದು, ಹಿಂದುಳಿದವರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸುವುದು ಸರ್ಕಾರದ ಜವಾಬ್ದಾರಿ. ಅದಕ್ಕಾಗಿ ಜಾತಿ ಸಮೀಕ್ಷೆ ಅತ್ಯಗತ್ಯ. ಆದರೆ ಜಾತಿಗಳ ವಾಸ್ತವ ಸಂಗತಿಗಳು ತಿಳಿದುಬಿಡುತ್ತವೆ ಎಂಬ ಭಯದಲ್ಲಿ ಮೊದಲಿನಿಂದಲೂ ಜಾತಿ ಸಮೀಕ್ಷೆಯನ್ನು ವಿರೋಧಿಸುತ್ತಾ ಬಂದಿರುವವರು ಮತಾಂತರದ ವಿರುದ್ಧ ಧ್ವನಿ ಎತ್ತುವುದು ಬೂಟಾಟಿಕೆಯ ಪರಮಾವಧಿ. ‘ಹಿಂದೂ ಧರ್ಮ ರಕ್ಷಣೆ’ಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವವರ ಸೈದ್ಧಾಂತಿಕ ಹಿನ್ನೆಲೆಯೂ ಅವರ ಬಣ್ಣವನ್ನು ಬಯಲುಗೊಳಿಸುತ್ತದೆ. ”ಭಾರತದ ಸಂವಿಧಾನದಲ್ಲಿ ಮನುಸ್ಮೃತಿಯನ್ನು ಒಳಗೊಳ್ಳಲಾಗಿಲ್ಲ. ಈ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ” ಎಂದು ಪ್ರತಿಪಾದಿಸಿದ ಆರ್‌ಎಸ್‌ಎಸ್‌ನ ಗರಡಿಯಲ್ಲಿ ಬೆಳೆದವರು ಬಯಸುತ್ತಿರುವುದು ಯಥಾಸ್ಥಿತಿ ಜಾತಿ ವ್ಯವಸ್ಥೆಯನ್ನೇ ಹೊರತು, ಜಾತಿಗಳ ಮುಂಚಲನೆಯನ್ನಲ್ಲ. ಮತಾಂತರದ ವಿರುದ್ಧ ದನಿ ಎತ್ತುವ ಮಠಾಧೀಶರು, ಸಂಘಪರಿವಾರದ ನಾಯಕರು, ರಾಜಕೀಯ ಮುಖಂಡರು ಜಾತಿ ದೌರ್ಜನ್ಯಗಳಾದಾಗ, ದಲಿತರ ಹತ್ಯೆಗಳಾದಾಗ ತುಟಿಬಿಚ್ಚುವುದಿಲ್ಲ. ಮರ್ಯಾದೆಗೇಡು ಹತ್ಯೆಗಳನ್ನು ಖಂಡಿಸಿದ್ದೂ ಇಲ್ಲ. ಹಾಗಾದರೆ ಇವರು ಬಯಸುತ್ತಿರುವುದು ಯಾವ ಸಮಾಜವನ್ನು?

“ಹಿಂದೂ ವಿರೋಧಿ ಎಂದರೆ ಏನು? ಹಿಂದೂ ಧರ್ಮ ಪಾಲನೆ ಎಂದರೇನು?” ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು. ಹಿಂದೂ ಧರ್ಮವೆಂಬುದು “ಜಾತಿಗಳ ಗುಚ್ಛ”. ಇಲ್ಲಿ ಶ್ರೇಣೀಕೃತ ಅಸಮಾನ ವ್ಯವಸ್ಥೆ ಇದೆ. ತಾರತಮ್ಯದಿಂದ ಕೂಡಿದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಟೀಕಿಸಿದ ಕೂಡಲೇ ಹಿಂದೂ ವಿರೋಧಿ ಎಂದು ಬಿಂಬಿಸುವುದಾದರೆ, ಖಂಡಿತ ಅದು ನಿಜ. ಹಿಂದೂ ಧರ್ಮದಲ್ಲಿನ ಅಸಮಾನತೆಯನ್ನು ಪ್ರಶ್ನಿಸುವುದು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದೇ ಭಾವಿಸಬೇಕಾಗುತ್ತದೆ. ಶ್ರೇಣೀಕರಣವನ್ನು ಪಾಲಿಸುವುದೇ ಧರ್ಮ ಎನ್ನುವುದಾದರೆ ಅದು ಅಧರ್ಮವಾಗುತ್ತದೆ.

”ನಾನು ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ” ಎಂದಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಕೊನೆಗೂ ಬೌದ್ಧಧರ್ಮವನ್ನು ಸ್ವೀಕರಿಸಿ ಬಿಡುಗಡೆಯ ಹೊಸ ದಾರಿಯನ್ನು ತೆರೆದರು. ‘ಚಾತುರ್ವರ್ಣ್ಯಕ್ಕಿಂತ ಅವಮಾನಕರ ನೀತಿಭ್ರಷ್ಟ ಸಾಮಾಜಿಕ ವ್ಯವಸ್ಥೆ ಮತ್ತೊಂದಿಲ್ಲ. ಜನರನ್ನು ಪರಸ್ಪರರ ನೆರವಿಗೆ ಧಾವಿಸದಂತೆ ನಿಶ್ಚೇಷ್ಟಗೊಳಿಸುತ್ತದೆ, ಲಕ್ವ ಬಡಿಸುತ್ತದೆ, ಊನಗೊಳಿಸುತ್ತದೆ’ ಎಂದೂ ಅವರು ಎಚ್ಚರಿಸಿ ಹೋಗಿದ್ದಾರೆ.

‘ಅನಾಇಲೇಷನ್ ಆಫ್ ಕಾಸ್ಟ್’ ಕೃತಿಯಲ್ಲಿ ಬಾಬಾಸಾಹೇಬರು, ”ಜಾತಿವ್ಯವಸ್ಥೆಯ ಮೂಲ ಚಾತುರ್ವರ್ಣ್ಯ ಪದ್ಧತಿ. ಚಾತುರ್ವರ್ಣ್ಯದ ಮೂಲ ವೇದ ಶಾಸ್ತ್ರಗಳು. ಜಾತಿಯನ್ನು ನಾಶ ಮಾಡಬೇಕಿದ್ದರೆ ಅವುಗಳ ಬೇರುಗಳಾದ ವೇದ ಶಾಸ್ತ್ರಗಳನ್ನು ಧಿಕ್ಕರಿಸಿ ಮೂಲೆಗೆಸೆಯಬೇಕು. ಅವುಗಳ ಅಧಿಕಾರವನ್ನು ನಾಶಗೊಳಿಸಬೇಕು. ಬುದ್ಧ ತೆಗೆದುಕೊಂಡ ನಿಲುವನ್ನು ತಳೆಯಬೇಕು ಮತ್ತು ನಾನಕ ತೆಗೆದುಕೊಂಡ ನಿಲುವು ತೆಗೆದುಕೊಳ್ಳಬೇಕು. ಬುದ್ಧ ಮತ್ತು ನಾನಕರಂತೆ ಶಾಸ್ತ್ರಗಳ ಅಧಿಕಾರವನ್ನು ತಿರಸ್ಕರಿಸಬೇಕು. ವೇದಗಳು ಶಾಸ್ತ್ರಗಳ ಅಧಿಕಾರವನ್ನು ನಾಶಗೊಳಿಸದೆ ಜಾತಿ ನಾಶವಾಗುವುದಿಲ್ಲ” ಎಂದು ಎಚ್ಚರಿಸಿದ್ದರು. ಇಂತಹ ಮಾತುಗಳನ್ನು ಕೇಳಿದರೂ ಸಂಘಪರಿವಾರ ಉರಿದು ಹೋಗಿಬಿಡುತ್ತದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಡಿಜೆ ಬ್ಯಾನ್‌ನಿಂದ ಕಲೆಗೆ ಪ್ರೋತ್ಸಾಹ, ಕೋಮು ಉದ್ವಿಗ್ನತೆಗೆ ಕಡಿವಾಣ

”ನಮ್ಮ ಇಡೀ ಭವಿಷ್ಯವು ರಾಜಕಾರಣದ ಮೇಲೆ ನಿಂತಿದೆ ವಿನಾಃ ಬೇರೆ ಯಾವುದರ ಮೇಲೂ ಅಲ್ಲ. ಪಂಡರಪುರ, ತ್ರಂಬಕೇಶ್ವರ, ಕಾಶಿ, ಹರಿದ್ವಾರ ಇತ್ಯಾದಿಗಳ ತೀರ್ಥಯಾತ್ರೆಗಳಿಂದಾಗಲಿ ಅಥವಾ ಶನಿ ಮಹಾತ್ಮೆ, ಶಿವಲೀಲಾಮೃತ ಅಥವಾ ಗುರುಚರಿತ್ರೆಯಂತಹ ಉಪವಾಸದಿಂದಾಗಲಿ ನಿಮ್ಮ ಉದ್ಧಾರವಂತೂ ಆಗುವುದಿಲ್ಲ. ನಿಮ್ಮ ಪೂರ್ವಜರು ಸಾವಿರಾರು ವರ್ಷಗಳಿಂದ ಇವುಗಳನ್ನು ಮಾಡಿಕೊಂಡು ಬಂದಿದ್ದಾರೆ. ಆದರೂ ನಿಮ್ಮ ಸ್ಥಿತಿಯಲ್ಲಿ ಒಂದಂಶವಾದರೂ ಬದಲಾಗಿದೆಯೇ? ನಿಮ್ಮ ಮೈಮೇಲೆ ಹಳೆಯ ಹರಿದ ಬಟ್ಟೆಗಳು, ಹೊಟ್ಟೆಗೆ ಅರೆಬೆಂದ ಅರ್ಧ ರೊಟ್ಟಿಯ ತುಂಡು, ದನದ ಕೊಟ್ಟಿಗೆಗಿಂತಲೂ ಗಲೀಜಾಗಿರುವ ಸ್ಥಳದಲ್ಲಿ ನಿಮ್ಮ ವಾಸ, ಕೋಳಿಗಳ ಹಾಗೆ ರೋಗ ರುಜಿನಗಳಿಗೆ ಬಲಿಯಾಗುವ ನಿಮ್ಮ ನಿಶಕ್ತತೆ- ಇಂತಹ ದುಸ್ಸಹನೀಯ ಪರಿಸ್ಥಿತಿ ಇಲ್ಲಿಯವರೆಗೆ ಏಕೆ ಬದಲಾಗಿಲ್ಲ? ನಾವು ತೆಗೆದುಕೊಳ್ಳುವ ಒಂದು ಔಷಧದಿಂದ ರೋಗ ಗುಣಮುಖವಾಗದಿದ್ದರೆ ನಾವು ಔಷಧ ಬದಲಿಸಬೇಕಲ್ಲವೆ? ವೈದ್ಯರನ್ನು ಬದಲಿಸುವುದು ಬೇಡವೆ?”- ಇದು ಮತಾಂತರ ಮತ್ತು ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರು ತಳೆದ ನಿಲುವಾಗಿತ್ತು. ಅಂತಿಮವಾಗಿ ಅವರು ಬೌದ್ಧಧಮ್ಮಕ್ಕೆ ಮರಳಿ ಚಾರಿತ್ರಿಕ ಪಲ್ಲಟಗಳಿಗೆ ಕಾರಣವಾದರು.

ಮತಾಂತರ ನಿಷೇಧಿಸುವ ಸಂಘಪರಿವಾರದ ಹುನ್ನಾರ ಕೇವಲ ಕ್ರಿಶ್ಚಿಯನ್, ಇಸ್ಲಾಂ ಧರ್ಮವನ್ನು ಗುರಿಯಾಗಿಸಿಕೊಂಡಿಲ್ಲ. ಬೌದ್ಧಧಮ್ಮಕ್ಕೆ ಮರುಳುವ ದೊಡ್ಡ ಸಂಖ್ಯೆಯ ಜನರನ್ನು ತಡೆದು ನಿಲ್ಲಿಸುವುದೇ ಅವರ ನಿಜವಾದ ಅಜೆಂಡಾ. ಆದರೆ ಬುದ್ಧ ಮತ್ತು ಬಾಬಾಸಾಹೇಬರ ಹೆಸರುಗಳನ್ನು ರಾಜಕೀಯವಾಗಿ ಎದುರಿಸಲಾಗದ ಸಂಘಪರಿವಾರವು ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಹೆಗಲ ಮೇಲೆ ಬಂದೂಕು ಇಟ್ಟು, ಬುದ್ಧನ ಅನುಯಾಯಿಗಳ ಕಡೆಗೆ ಗುಂಡು ಹಾರಿಸುವ ಕೆಲಸ ಮಾಡುತ್ತಲೇ ಇರುತ್ತದೆ. ಯಾರು ಯಾವುದೇ ಧರ್ಮವನ್ನು ಅನುಸರಿಸಿದರೂ ಜಾತಿ ಎಂಬುದು ವಾಸ್ತವ. ಆದರೆ ಆಧ್ಯಾತ್ಮಿಕ ಬಿಡುಗಡೆಗೆ ಧರ್ಮದ ಬದಲಾವಣೆಯು ಅಗತ್ಯವೆನಿಸಿದರೆ ಅದನ್ನು ತಡೆಯುವ, ಟೀಕಿಸುವ ಹಕ್ಕು ಯಾರಿಗೂ ಇರಬಾರದು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

ಈ ದಿನ ಸಂಪಾದಕೀಯ | ಬಸನಗೌಡ ಯತ್ನಾಳ್‌ ಒಪ್ಪಿಸಿದ್ದು ಮನುವಾದಿ ಗಿಳಿಪಾಠ

ನಾಡ ದೇವತೆ ಎಂದು ಕರೆಸಿಕೊಂಡ ಚಾಮುಂಡಿ ದೇವಿ ಹೆಣ್ಣಾಗಿ ದಲಿತ ಮಹಿಳೆಯಿಂದ...

Download Eedina App Android / iOS

X